ಕಂಪ್ಯೂಟರ್ ಯುಗದಲ್ಲಿಯೂ ಜಾತಿ ಪೀಡೆ: ನೊಂದ ದಲಿತ ಕುಟುಂಬದಿಂದ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಈ ಕಂಪ್ಯೂಟರ್ ಯುಗದಲ್ಲಿಯೂ ಅವನು ಮೇಲ್ಜಾತಿ, ಇವನು ಕೀಳು ಜಾತಿ ಎಂದು ಬೇಧ ಮಾಡುವವರನ್ನು ನೋಡುತ್ತಿದ್ದೇವೆ. ಅವನು ಬ್ರಹ್ಮನ ತಲೆಯಿಂದ ಹುಟ್ಟಿದಂತೆ ಅದಕ್ಕೆ ಅವನು ಶ್ರೇಷ್ಟ. ಇವನು ಪಾದದಿಂದ ಹುಟ್ಟಿದನಂತೆ ಅದಕ್ಕೆ ಅವನು ಕನಿಷ್ಠ ಇಂತಹ ಕಟ್ಟುಕಥೆಗಳನ್ನು ಕಟ್ಟಿದವರು ಆರಾಮವಾಗಿದ್ದಾರೆ. ಆದರೆ, ಇದನ್ನು ನಂಬಿದವರು ಮಾತ್ರ ತಾನೂ ನೆಮ್ಮದಿಯಾಗಿರದೇ ತನ್ನ ನೆರೆ ಹೊರೆಯವರನ್ನೂ ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ತಾನು ಹುಟ್ಟಬೇಕಾದ ಸ್ಥಳದಿಂದಲೇ ಹುಟ್ಟಿದ್ದೇನೆ ಎನ್ನುವುದು ಕಥೆ ಕಟ್ಟಿದವರಿಗೆ ಗೊತ್ತು. ಆದರೆ ಈ ಮೂಢರಿಗೆ ಇನ್ನೂ ಅರ್ಥವಾಗಿಲ್ಲ. ಭೂಮಿ ಮೇಲೆ ಇರೋದು ಒಂದು ಗಂಡು ಇನ್ನೊಂದು ಹೆಣ್ಣು ಎರಡೇ ಜಾತಿ. ಈ ಎರಡು ಜಾತಿ ಸೇರಿ ಬದುಕುವುದೇ ನಿಜವಾದ ಮಾನವನ ಜೀವನ…
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯನ್ನು ವಿವರಿಸಲು ಇಷ್ಟೆಲ್ಲ ಪೀಠಿಕೆ ಹಾಕಲೇ ಬೇಕಾಯಿತು… ಹೌದು..! ಮಹದೇವಪುರ, ಚನ್ನಸಂದ್ರ ಗ್ರಾಮದ ಎ.ಕೆ.ಗೋಪಾಲಶೆಟ್ಟಿ ಬಡಾವಣೆಯಲ್ಲಿ ಶ್ರೀನಿವಾಸ್ ಎಂಬವರ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿಡಿಯೋ ವೈರಲ್ ಆಗಿತ್ತು. 51 ವರ್ಷ ವಯಸ್ಸಿನ ಶ್ರೀನಿವಾಸ್ ಅವರ ಪತ್ನಿ ರಾಧಾ, ಪುತ್ರಿ ದೀಪಿಕಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದಕ್ಕೂ ಮೊದಲು ತಮ್ಮನ್ನು ಜಾತಿಯ ಕಾರಣಕ್ಕಾಗಿ ಅವಮಾನಿಸಿ ಹಲ್ಲೆ ನಡೆಸಲಾಗುತ್ತಿದೆ ಎಂದು ಅವರು ಅಳವತ್ತುಕೊಂಡಿದ್ದರು.
ಶ್ರೀನಿವಾಸ್ ಅವರು ಮನುವಾದಿ ಜಾತಿ ವ್ಯವಸ್ಥೆಯ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ನಾಯಿ, ತಿಗಳ ಸಮುದಾಯದವರ ಮನೆಗೆ ಹೋಗಿದೆ. ದಲಿತರ ಮನೆಯ ನಾಯಿ ಕೂಡ ಇನ್ನೊಬ್ಬರ ಮನೆಗೆ ಹೋಗುವಂತಿಲ್ಲ ಎಂದರೆ ಪರಿಸ್ಥಿತಿ ಎಲ್ಲಿಗೆ ತಲುಪಿದೆ ನೋಡಿ… ನಾಯಿಗೆ ಗೊತ್ತಾ? ಅದು ಬೇರೆ ಜಾತಿಯವರ ಮನೆ ಅಲ್ಲಿಗೆ ಹೋಗಬಾರದು ಅಂತಾ? ನಾಯಿ ಎಲ್ಲರನ್ನೂ ಮನುಷ್ಯರಂತೆಯೇ ನೋಡುತ್ತದೆ. ಆದರೆ ಈ ಮನುಷ್ಯರು ಅಂದುಕೊಂಡವರು ಮಾತ್ರವೇ ಮನುಷ್ಯರನ್ನು ಮನುಷ್ಯರಾಗಿ ನೋಡುತ್ತಿಲ್ಲ ಎನ್ನುವುದು ನಾಯಿಗೆ ಕೂಡ ಗೊತ್ತಿಲ್ಲ. ಮಾದಿಗರ ಮನೆಯ ನಾಯಿ ನಮ್ಮ ಮನೆಗೆ ಬಂತು ಎಂಬ ಕಾರಣಕ್ಕಾಗಿ ಜಗಳ ಆರಂಭವಾಗಿದೆ.
ನಾಯಿಯ ವಿಚಾರವಾಗಿ ತಿಗಳ ಸಮುದಾಯದ ಭಾಗ್ಯ ಶ್ರೀನಿವಾಸ್ ಅವರ ಮಕ್ಕಳಾದ ದೀಪಿಕಾ ಮತ್ತು 13 ವರ್ಷ ವಯಸ್ಸಿನ ಲಲಿತ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ, ಹಲ್ಲೆ ನಡೆಸಿದ ಬಳಿಕ, ಪೆಟ್ಟು ತಿಂದವರ ಮೇಲೆಯೇ ಭಾಗ್ಯ ಅವರು ದೂರು ನೀಡಿದ್ದಾರೆ. ಹೀಗಾಗಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮಾದಿಗ ಕುಟುಂಬದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.
ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೀಪಿಕಾ ಅವರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗುವ ವೇಳೆಗೆ ಭಾಗ್ಯ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ದೀಪಿಕಾ ಅವರ ದೂರನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಮೇಲೆಯೇ ಹಲ್ಲೆ ನಡೆಸಿ, ನಿಂದಿಸಿ ಇದೀಗ ತಮ್ಮ ಮೇಲೆಯೇ ದೂರು ನೀಡಿರುವುದರಿಂದ ತೀವ್ರವಾಗಿ ನೊಂದ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿದ್ದು, ಶ್ರೀನಿವಾಸ್, ರಾಧಾ ಮತ್ತು ದೀಪಿಕಾ ನಡೆದ ಘಟನೆಗಳನ್ನೆಲ್ಲ ವಿಡಿಯೋ ಮೂಲಕ ವಿವರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಈ ನೊಂದ ಸಮುದಾಯದ ದೂರು ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಷ ಸೇವಿಸಿ, ಅಸ್ವಸ್ಥರಾಗಿದ್ದ ಶ್ರೀನಿವಾಸ್ ಅವರ ಕುಟುಂಬವನ್ನು ನೆರೆಯ ಮನೆಯವರು ರಕ್ಷಿಸಿದ್ದಾರೆ. ಇಲ್ಲದಿದ್ದರೆ, 3 ಅಮಾಯಕ ಜೀವಗಳು ಬಲಿಯಾಗುತ್ತಿದ್ದವು.
ಯಾರು ಜಾತಿ ವ್ಯವಸ್ಥೆಯನ್ನು ಸೃಷ್ಟಿ ಮಾಡಿದರೋ ಆ ಸಮುದಾಯ ಎಲ್ಲರೊಂದಿಗೆ ಚೆನ್ನಾಗಿ ಇದ್ದು ಕೊಂಡು ಉನ್ನತವಾದ ಜೀವನವನ್ನು ಸಾಗಿಸುತ್ತಿದೆ. ಯಾರ ತಲೆಯೊಳಗೆ ಈ ಜಾತಿ ಎನ್ನುವ ವಿಷ ಇದೆಯೋ ಅವರು ತಾವೂ ನೆಮ್ಮದಿಯಾಗಿ ಬದುಕದೇ ಇನ್ನೊಬ್ಬರನ್ನೂ ನೆಮ್ಮದಿಯಿಂದ ಬಿಡದೇ ಅದೇನೋ “ಅಂತರ್ ಪಿಶಾಚಿ” ಎನ್ನುತ್ತಾರಲ್ಲ ಹಾಗೆಯೇ ಬದುಕುತ್ತಿದ್ದಾರೆ. ಜನರು ಜಾತಿ ಬೇಧದಿಂದ ಹೊರ ಬಂದು ಒಮ್ಮೆ ಪ್ರಪಂಚವನ್ನು ನೋಡಬೇಕಿದೆ. ಆಗ ಈ ಪ್ರಪಂಚ ಎಷ್ಟು ಸುಂದರವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು ಅಲ್ಲವೇ?