ಊಟದ ತಟ್ಟೆ ಮುಟ್ಟಿದನೆಂದು ಆರೋಪಿಸಿ ದಲಿತ ಯುವಕನ ಬರ್ಬರ ಹತ್ಯೆ!
ಮಧ್ಯಪ್ರದೇಶ: ಊಟದ ತಟ್ಟೆ ಮುಟ್ಟಿದ ಕಾರಣಕ್ಕಾಗಿ ದಲಿತ ಯುವಕನನ್ನು ಜಾತಿ ಭಯೋತ್ಪಾದಕರು ಕೋಲಿನಿಂದ ಹೊಡೆದು ಹತ್ಯೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್ ಪುರದಲ್ಲಿ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಕೃಷಿ ಕಾರ್ಮಿಕ ದೇವರಾಜ್ ಅನುರಾಜಿ ಹತ್ಯೆಗೀಡಾದ ಬಲಿಪಶುವಾಗಿದ್ದಾನೆ. ದೇವರಾಜ್ ಅನುರಾಜಿಯ ಸ್ನೇಹಿತರಾದ ಅಪೂರ್ವಾ ಸೋನಿ ಹಾಗೂ ಸಂತೋಷ್ ಪಾಲ್ ಈ ಕೃತ್ಯ ನಡೆಸಿದ್ದಾರೆ.
ದಲಿತ ಯುವಕ ದೇವರಾಜ್ ಅನುರಾಜಿ ಹಳ್ಳಿಯ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದನು. ಪಾರ್ಟಿ ಸಂದರ್ಭದಲ್ಲಿ ಸ್ನೇಹಿತರ ತಟ್ಟೆಯನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ಇಬ್ಬರು ಆರೋಪಿಗಳು ಹಲ್ಲೆ ನಡೆಸಿದ್ದಾರೆ.
ಕೋಲುಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದ ಅಪೂರ್ವಾ ಸೋನಿ ಹಾಗೂ ಸಂತೋಷ್ ಪಾಲ್ ಎಂಬ ಜಾತಿ ಭಯೋತ್ಪಾದಕರು, ದೇವರಾಜ್ ಅನುರಾಜಿ ಮೂರ್ಛೆ ಹೋಗುವವರೆಗೂ ಥಳಿಸಿದ್ದರು. ಬಳಿಕ ಆತನನ್ನು ಮನೆಗೆ ತಲುಪಿಸಿದ್ದಾರೆ. ತೀವ್ರವಾಗಿ ರಕ್ತ ಸ್ರಾವವಾದ ಕಾರಣ ಸಂಜೆ 7ಗಂಟೆಯ ಸುಮಾರಿಗೆ ದೇವರಾಜ್ ಅನುರಾಜಿ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಆರೋಪಿ ಜಾತಿ ಭಯೋತ್ಪಾದಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 34 ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸಂತ್ರಸ್ತನ ಕುಟುಂಬಕ್ಕೆ 8.25 ಲಕ್ಷ ರೂ. ಪರಿಹಾರ ಹಾಗೂ ಇನ್ನಿತರ ನೆರವನ್ನು ನೀಡಲಾಗಿದೆ ಎಂದು ಔತ್ತರ್ ಪುರ ಜಿಲ್ಲೆಯ ಎಎಸ್ ಪಿ ತಿಳಿಸಿದ್ದಾರೆ.