ದಲಿತರನ್ನು ಅಧಿಕಾರದಿಂದ ವಂಚಿಸುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದೆ | ಎನ್.ಮಹೇಶ್ ಆಕ್ರೋಶ
ಚಾಮರಾಜನಗರ: ದಲಿತ ಸಮುದಾಯದವರಿಗೆ ಅಧಿಕಾರ ವಂಚಿಸುವ ಪ್ರಕ್ರಿಯೆ ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ ಎಂದು ಮಾಜಿ ಸಚಿವ, ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಬುಧವಾರ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಚರ್ಚೆಯ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುವ ಕೆಲಸವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಜಮೀರ್ ಹೇಳುತ್ತಿದ್ದಾರೆ. ಉಳಿದ ಶಾಸಕರೂ ಬೆಂಬಲಿಸುತ್ತಿದ್ದಾರೆ. ಇಡೀ ಪ್ರಕ್ರಿಯೆಯಲ್ಲಿ ಒಂದು ಅಂಶ ಬಿಟ್ಟು ಹೋಗುತ್ತಿದೆ. 30 ವರ್ಷಗಳಿಂದ ರಾಜ್ಯದ ಪ್ರಮುಖ ಸಮುದಾಯವಾದ ದಲಿತರು ನಿರಂತರವಾಗಿ ಅಧಿಕಾರದಿಂದ ವಂಚಿತರಾಗಿ ಬಂದಿದ್ದಾರೆ. ಈಗಿನ ಬೆಳವಣಿಗೆ ನೋಡಿದರೆ, ‘ದಲಿತರು ಸುಮ್ಮನೆ ಮತ ಹಾಕಿ, ನಾವು ರಾಜ್ಯಭಾರ ಮಾಡುತ್ತೇವೆ ಎನ್ನುವ ಸಂದೇಶವನ್ನು ಅವರು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಬಿ.ರಾಚಯ್ಯ, ಕೆ.ಎಚ್.ರಂಗನಾಥ್, ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ.. ಇವರೆಲ್ಲ ದಲಿತ ಸಮುದಾಯದವರ ಹಿರಿಯ ಮುಖಂಡರು. ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದವರು. ಆದರೆ, ಅಧಿಕಾರದಿಂದ ವಂಚಿತರಾಗಿದ್ದಾರೆ. ಈಗಲೂ ಅಧಿಕಾರದಿಂದ ವಂಚನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮಹೇಶ್ ತಿಳಿಸಿದರು.
ದಲಿತರಿಗೆ ಎಲ್ಲ ಸಾಮರ್ಥ್ಯ, ಪ್ರಾಮಾಣಿಕತೆ ಇದ್ದರೂ, ಅವರಿಗೆ ಧ್ವನಿ ಇಲ್ಲ. ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬಂತೆ ಇವರ ಸ್ಥಿತಿಯಾಗಿದೆ. ದಲಿತರು ಕೇವಲ ಮತ ಬ್ಯಾಂಕ್ ಆಗಿದ್ದಾರೆ. ಶೇ.1ರಷ್ಟು ಜನಸಂಖ್ಯೆ ಇಲ್ಲದ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯದವರು ರಾಜ್ಯದಲ್ಲಿ 1.5 ಕೋಟಿ ಜನ ಇದ್ದರೂ ಯಾರೂ ಮುಖ್ಯಮಂತ್ರಿ ಆಗಿಲ್ಲ ಎಂದು ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.