ದಲಿತರ ಆರ್ಥಿಕ ಮತ್ತು ಸಾಮಾಜಿಕ ಶ್ರೇಯೋಭಿವೃದ್ಧಿಯಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲ – ಕೃಷ್ಣಪ್ಪ ಕೊಂಚಾಡಿ - Mahanayaka
8:01 AM Friday 20 - September 2024

ದಲಿತರ ಆರ್ಥಿಕ ಮತ್ತು ಸಾಮಾಜಿಕ ಶ್ರೇಯೋಭಿವೃದ್ಧಿಯಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲ – ಕೃಷ್ಣಪ್ಪ ಕೊಂಚಾಡಿ

01/03/2021

ಮಂಗಳೂರು:  ಮಹಾನಗರ ಪಾಲಿಕೆಯು ದಲಿತರ ಆರ್ಥಿಕ, ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಇರುವ ಮೀಸಲು ನಿಧಿಯನ್ನು ಸಮರ್ಪಕವಾಗಿ ಬಳಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದು, ಇದರ ಪರಿಣಾಮವಾಗಿ ಕಳೆದ ದಶಕದಲ್ಲಿ ಸಾಧಿಸಿದ ಪ್ರಗತಿಯ ದರದಲ್ಲಿ ಗಂಭೀರ ಪ್ರಮಾಣದ ಇಳಿಮುಖ ಕಂಡಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ. ಕೃಷ್ಣಪ್ಪ ಕೊಂಚಾಡಿ  ಆರೋಪಿಸಿದರು.

ದಲಿತ ಹಕ್ಕುಗಳ ಸಮಿತಿ ಮತ್ತು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಶ್ರಯದಲ್ಲಿ ಇಂದು ಮಂಗಳೂರು ಮಹಾನಗರ ಪಾಲಿಕೆಯ ಎದುರು ಜರುಗಿದ ಪ್ರತಿಭಟನಾ ಸಭೆಯನ್ನು  ಉದ್ಘಾಟಿಸಿ ಅವರು ಭಾಷಣ ಮಾಡುತ್ತಿದ್ದರು.

ದಲಿತ ಸಮುದಾಯದ ಮೀಸಲು ನಿಧಿಯ ಬಳಕೆಗೆ ಸಂಬಂಧಿಸಿ ರಾಜ್ಯ ಸರಕಾರವು ದಿನಾಂಕ 19-01-2019ರಂದು ಮಾರ್ಗದರ್ಶಿ ಸುತ್ತೋಲೆಯು ದಲಿತ ವಿರೋಧಿಯಾಗಿದೆ, ಮನುವಾದಿ ಸಿದ್ಧಾಂತದ ಪಡಿಯಚ್ಚು ಎಂದು ಹೇಳಿದರು. ಇದನ್ನು ಆಧಾರಿಸಿ ಮಂಗಳೂರು ಮಹಾನಗರ ಪಾಲಿಕೆಯು ರೂಪಿಸುತ್ತಿರುವ ಕ್ರಿಯಾ ಯೋಜನೆಯಲ್ಲಿ ದಲಿತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲವೆಂದು ಅವರು ಹೇಳಿದರು.


Provided by

ದಲಿತ ಶಿಕ್ಷಣಕ್ಕೆ ಗಂಭೀರ ಮಹತ್ತ್ವ ನೀಡುವ ಬದಲು ಶಿಕ್ಷಣಕ್ಕೆ ಆದಾಯ ಮಿತಿಯನ್ನು ರೂ. 2.50 ಲಕ್ಷ ನಿಗದಿ ಮಾಡಿದೆ. ಅಲ್ಲದೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನತೆಗೆ ರೂ. 4 ಲಕ್ಷ ಮತ್ತು 8 ಲಕ್ಷದ ಮಿತಿಯನ್ನು ನಿಗದಿ ಮಾಡುವ ಮೂಲಕ ಶತಶತಮಾನಗಳ ಕಾಲ ಶೋಷಣೆಗೆ ಒಳಗಾದ, ಅಸ್ಪ್ರಶ್ಯತೆ ಮತ್ತು ಮಾನವಾಭಿವೃದ್ಧಿ ಸೂಚ್ಯಾಂಕದ ಕೆಳ ಮಟ್ಟದಲ್ಲಿ ಇರುವ ದಲಿತರಿಗೆ ಮಹಾ ಅನ್ಯಾಯ ವೆಸಗಿದೆ ಎಂದು  ಕೃಷ್ಣಪ್ಪ ಹೇಳಿದರು.

ದಲಿತರಿಗೆ ಮನೆ ನಿರ್ಮಾಣಕ್ಕೆ ರೂ. 6 ಲಕ್ಷ ಸಹಾಯಧನ ಹಾಗೂ ಮನೆ ರಿಪೇರಿಗೆ 1 ಲಕ್ಷ ಸಹಾಯಧನ ನೀಡಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕೆಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ವರ್ಷದಿಂದ ವರ್ಷಕ್ಕೆ ದಲಿತ ಮೀಸಲು ನಿಧಿಗೆ ಬಜೆಟ್ ಅನುದಾನ ಕಡಿತಗೊಂಡಿದೆ ಎಂದು ಆರೋಪಿಸಿದರು. ದಲಿತರಿಗೆ ಸರಕಾರಿ ಸೌಲಭ್ಯಗಳು ದೊರೆಯದಂತಹ ನೀತಿ ನಿಯಮಗಳನ್ನು ರೂಪಿಸಿ ಆ ಹಣವನ್ನು ದಲಿತೇತರ ಯೋಜನೆಗಳಿಗೆ ವಿನಿಯೋಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ  ಮಾತನಾಡಿ,  ದಲಿತರಿಗೆ ಉದ್ಯೋಗ, ಮನೆ ನಿವೇಶನ, ಆರೋಗ್ಯ ಮತ್ತು ಶಿಕ್ಷಣಕ್ಕೆ ಪೂರಕವಾಗುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು.

ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ನಾರಾಯಣ ತಲಪಾಡಿ ಪ್ರತಿಭಟನೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯ ನಾಯಕತ್ವ ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೆ, ನಗರ ಸಮಿತಿ ಅಧ್ಯಕ್ಷರಾದ ನಾಗೇಂದ್ರ ಉರ್ವಸ್ಟೋರ್, ಉಪಾಧ್ಯಕ್ಷರಾದ ಸುಧಾಕರ ಕೆ, ಖಜಾಂಚಿ ಪ್ರಶಾಂತ್ ಎಂ. ಬಿ, ನಾಯಕರುಗಳಾದ ರಘುವೀರ್ ಉರ್ವಸ್ಟೋರ್, ಶಾಮ್ಯುವೆಲ್, ದಯಾನಂದ, ಹೇಮ ಪಚ್ಚನಾಡಿ, ಯೋಗೀಶ್ ಜೆ, ರಾಧಾಕೃಷ್ಣ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕೆ, ಕಾರ್ಯದರ್ಶಿ ಶಶಿಕಲಾ ನಂತೂರು, ಪ್ರವೀಣ್ ಕೆ. ಮೊದಲಾದವರು ವಹಿಸಿದರು.

ಕಾರ್ಯಕ್ರಮ ನಿರ್ವಹಣೆಯನ್ನು ನಗರ ಸಮಿತಿಯ ಕಾರ್ಯದರ್ಶಿ ಕೃಷ್ಣ ಪಿ.ಕೆ, ಮಾಡಿದ್ದು ಕೊನೆಯಲ್ಲಿ ನಗರ ಸಮಿತಿ ಮುಂದಾಳು ಪಾಂಡುರಂಗ ವಂದಿಸಿದರು.

dalitha hakkugala samanvaya samiti

dalitha hakkugala samanvaya samiti

whatsapp

ಇತ್ತೀಚಿನ ಸುದ್ದಿ