‘ಸಂವಿಧಾನ ರಚನೆಯಲ್ಲಿ ದಲಿತರ ಪಾತ್ರ ಮಹತ್ವದ್ದು; ಆದ್ರೆ ಅವ್ರನ್ನು ತುಳಿಯಲಾಗ್ತಿದೆ’ ಎಂದ ರಾಹುಲ್ ಗಾಂಧಿ

‘ಸಂವಿಧಾನ ರಚನೆಯಲ್ಲಿ ದಲಿತರ ಯೋಗದಾನ ಮಹತ್ವದ್ದು. ಆದರೆ ಇಂದು ನಿಮ್ಮನ್ನು ಎಲ್ಲೆಡೆ ತುಳಿಯುವ ವ್ಯವಸ್ಥೆ ಇದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎನ್ನುವುದನ್ನು ದಲಿತರು ಮೊದಲ ಅರ್ಥ ಮಾಡಿಕೊಳ್ಳಬೇಕು. ದಲಿತರೇ ಇರದಿದ್ದರೆ ಇಂಥ ಬಲಿಷ್ಠ ಸಂವಿಧಾನ ರಚನೆಯೂ ಸಾಧ್ಯವಾಗುತ್ತಿರಲಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ದಲಿತ ವಿದ್ಯಾರ್ಥಿಗಳೊಂದಿಗೆ ಗುರುವಾರ ಸಂವಾದ ನಡೆಸಿದ್ದಾರೆ.
‘ದೇಶದ ಪ್ರಮುಖ 500 ಕಂಪನಿಗಳ ಉನ್ನತ ಸ್ಥಾನದಲ್ಲಿ ದಲಿತರಿಗೆ ಎಷ್ಟು ಸ್ಥಾನ ದೊರೆತಿದೆ ಎಂಬುದನ್ನು ಪ್ರಶ್ನಿಸಬೇಕಿದೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಯೊಬ್ಬರು, ‘ನಮಗೆ ಸರಿಯಾದ ಸೌಲಭ್ಯಗಳಿಲ್ಲದ ಕಾರಣ ನಾವು ಆ ಹಂತ ತಲುಪಲು ಸಾಧ್ಯವಾಗಿಲ್ಲ’ ಎಂದರು.
ಇದಕ್ಕೆ ಉತ್ತರಿಸಿದ ರಾಹುಲ್, ‘ಡಾ. ಅಂಬೇಡ್ಕರ್ ರಿಗೂ ಅವಕಾಶಗಳು ಇರಲಿಲ್ಲ. ಅವರ ಪರಿಶ್ರಮದ ಹಾದಿಯಲ್ಲಿ ಅವರೊಬ್ಬರೇ ಇದ್ದರು. ಹೀಗಿದ್ದರೂ ಈ ದೇಶದ ರಾಜಕೀಯವನ್ನು ಅಲುಗಾಡಿಸಿದರು’ ಎಂದರು.
‘ಇಡೀ ವ್ಯವಸ್ಥೆಯೇ ನಿಮ್ಮ ವಿರುದ್ಧವಿದೆ. ನಿಮ್ಮ ಬೆಳವಣಿಗೆ ಈ ವ್ಯವಸ್ಥೆಗೆ ಬೇಕಾಗಿಲ್ಲ. ಪ್ರತಿನಿತ್ಯ ಈ ವ್ಯವಸ್ಥೆ ನಿಮ್ಮ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಆ ದಾಳಿ ನಿಮ್ಮ ಮೇಲೆ ಹೇಗೆ ನಡೆಯಿತು ಎಂಬುದನ್ನು ತಿಳಿಯಲು ನಿಮಗೆ ಬಹುಕಾಲ ಬೇಕಾಗಬಹುದು’ ಎಂದು ರಾಹುಲ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj