ಉದ್ಯೋಗ ಮಾತ್ರವಲ್ಲ, ದಂಪತಿಯ ಪ್ರಾಣವನ್ನೂ ಕಸಿದುಕೊಂಡಿತು ಲಾಕ್ ಡೌನ್ | ಮಕ್ಕಳು ಅನಾಥ
ತೆಲಂಗಾಣ: ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡಲಾಗಿದ್ದರೆ, ಇದೀಗ ಲಾಕ್ ಡೌನ್ ನ ಸೈಡ್ ಇಫೆಕ್ಟ್ ಕೂಡ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಲಾಕ್ ಡೌನ್ ನಿಂದ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದು, ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ತೆಲಂಗಾಣದ ಮೇದಕ್ ನಲ್ಲಿ ನಡೆದ ಘಟನೆಯೊಂದು ಹೃದಯ ವಿದ್ರಾವಕವಾಗಿದೆ.
ಕಳೆದ ಐದು ವರ್ಷಗಳ ಹಿಂದೆ ಉದ್ಯೋಗ ಹರಸಿ ಹೈದರಾಬಾದ್ ಗೆ ಕಿಶೋರ್ ಹಾಗೂ ಕವಿತಾ ದಂಪತಿ ಆಗಮಿಸಿದ್ದರು. ಇಲ್ಲಿನ ಚಿಲಕಲಗುಡ್ಡದಲ್ಲಿ ಹೇರ್ ಕಟ್ಟಿಂಗ್ ಸಲೂನ್ ಬಾಡಿಗೆಗೆ ಪಡೆದು ಕೆಲಸ ಮಾಡಲು ಆರಂಭಿಸಿದ್ದ ಇವರಿಗೆ ಉದ್ಯೋಗದಲ್ಲಿ ಲಾಭ ದೊರೆತಿತ್ತು.
ಕೆಲವು ವರ್ಷಗಳ ಕಾಲ ತಮ್ಮ ಮಕ್ಕಳೊಂದಿಗೆ ಖುಷಿಯಿಂದ ಬದುಕಿದ್ದ ಇವರಿಗೆ, ಕಳೆದ ವರ್ಷ ಏಕಾಏಕಿ ಲಾಕ್ ಡೌನ್ ಆದಾಗಿನಿಂದ ಒಂದರ ಹಿಂದೊಂದರಂತೆ ಸಮಸ್ಯೆಗಳು ಆರಂಭವಾಗಿತ್ತು. ಲಾಕ್ ಡೌನ್ ನಿಂದಾಗಿ ಅನಿವಾರ್ಯವಾಗಿ ತಮ್ಮ ಕಟ್ಟಿಂಗ್ ಶಾಪ್ ಬಂದ್ ಮಾಡಬೇಕಾಯಿತು. ಬಳಿಕೆ ಬೇರೆ ದಾರಿ ಕಾಣದೇ ತಮ್ಮ ಮಕ್ಕಳನ್ನು ಕರೆದುಕೊಂಡು ಊರಿಗೆ ವಾಪಸ್ ಆಗಿದ್ದರು.
ಇದೀಗ ನಾಲ್ಕು ದಿನಗಳ ಹಿಂದೆ ಹೈದರಾಬಾದ್ ಗೆ ವಾಪಸ್ ಆಗಿದ್ದ ದಂಪತಿ, ತಮ್ಮಿಬ್ಬರು ಮಕ್ಕಳನ್ನು ಅಜ್ಜನ ಊರಿಗೆ ಕಳುಹಿಸಿ, ತಾವಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಇದೀಗ ಅನಾಥರಾಗಿದ್ದಾರೆ.
ಸಮಸ್ಯೆಗಳಿಗೆ ಯಾವಾಗಲೂ ಆತ್ಮಹತ್ಯೆಯೇ ಪರಿಹಾರವಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಆರ್ಥಿಕ ಸಂಕಷ್ಟದಿಂದ ತೀವ್ರವಾಗಿ ಜರ್ಝರಿತರಾಗಿದ್ದಾರೆ. ಆದರೆ, ಪ್ರತಿಯೊಬ್ಬರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ಬೇಡ. ಪರಿಹಾರವಾಗದ ಸಮಸ್ಯೆಗಳು ಎಂದು ನಾವು ಯಾವುದನ್ನು ಅಂದುಕೊಂಡಿರುತ್ತೇವೆಯೋ ಅದು ಕೆಲವು ಸಮಯಗಳು ಕಳೆದ ಬಳಿಕ ಒಂದು ಸಮಸ್ಯೆಯೇ ಅಲ್ಲ ಎಂದೆನಿಸುತ್ತದೆ. ಬದುಕಿನ ದಾರಿಯಲ್ಲಿ ಯಾವುದೋ ಒಂದು ತಿರುವು ಸಿಗುತ್ತದೆ ಎನ್ನುವ ನಿರೀಕ್ಷೆಗಳಿರಲಿ, ಆ ನಿರೀಕ್ಷೆಗಳು ಪ್ರತಿಯೊಬ್ಬನನ್ನೂ ಕಾಪಾಡುತ್ತದೆ ಎನ್ನುವ ಭರವಸೆಗಳನ್ನು ಪ್ರತಿಯೊಬ್ಬರು ಇಟ್ಟುಕೊಂಡು ಜೀವಿಸಬೇಕಿದೆ.