ದಾಸಪ್ಪ ಎಡಪದವು ಅವರು ನೂರಕ್ಕೆ ನೂರರಷ್ಟು ಬುದ್ಧ, ಅಂಬೇಡ್ಕರ್ ವಾದಿ: ಬಿಎಸ್ ಪಿ ನಾಯಕ ಮಾರಸಂದ್ರ ಮುನಿಯಪ್ಪ
ಮೂಡಬಿದಿರೆ: ದಾಸಪ್ಪ ಎಡಪದವು ಅವರು ನೂರಕ್ಕೆ ನೂರರಷ್ಟು ಬುದ್ಧವಾದಿಗಳು ಅಂಬೇಡ್ಕರ್ ವಾದಿಗಳು, ಸಂವಿಧಾನವಾದಿಗಳು ಕಾನ್ಶಿರಾಮ್ , ಅಕ್ಕಾ ಮಾಯಾವತಿ ಅವರ ವಾದಿಗಳು, ಪ್ರೊ.ಕೃಷ್ಣಪ್ಪ ವಾದಿಗಳು ಅವರು ಏನನ್ನು ನುಡಿಯುತ್ತಿದ್ದರೋ, ತನ್ನ ಇಡೀ ಜೀವನದಲ್ಲಿ ಅದನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ(BSP) ರಾಜ್ಯ ಸಂಯೋಜಕರು, ಹಿರಿಯ ನಾಯಕರಾದ ಮಾರಸಂದ್ರ ಮುನಿಯಪ್ಪ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಎಸ್ ಪಿ ಜಿಲ್ಲಾಧ್ಯಕ್ಷರು, ಹಿರಿಯ ಬಹುಜನ ನಾಯಕ ದಾಸಪ್ಪ ಎಡಪದವು ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾಸಪ್ಪ ಅವರು ತಮ್ಮ ದುಡಿಮೆಯಲ್ಲಿ ಸಮಾಜಕ್ಕೆ ಏನು ಮಾಡಲು ಸಾಧ್ಯ ಅನ್ನೋದನ್ನು ಮಾಡುತ್ತಿದ್ದರು. ಇಂದು ಲಾಭ ಪಡೆದುಕೊಳ್ಳಲು ಅಂಬೇಡ್ಕರ್ ಅವರ ಹೆಸರು ಸಾಕಷ್ಟು ಜನ ಬಳಸಿಕೊಳ್ಳುತ್ತಿದ್ದಾರೆ. ಆದರೆ ದೊಡ್ಡ ಸಂಸಾರ ಹೊಂದಿದ್ದರೂ ಕೂಡ ದಾಸಪ್ಪನವರು ನೌಕರಿಯಲ್ಲಿದ್ದಾಗಲೂ ಸಮಾಜಕ್ಕಾಗಿ ಕೆಲಸ ಮಾಡಿದರು, ನಿವೃತ್ತರಾದ ಬಳಿಕ ಬಿಎಸ್ ಪಿಯ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದರು. ಅವರ ಧರ್ಮಪತ್ನಿ ಶಕುಂತಲಾ ಅವರು ದಾಸಪ್ಪನವರ ಪ್ರತಿಯೊಂದು ಚಳುವಳಿಯಲ್ಲೂ ಇರುತ್ತಿದ್ದರು. ಎಲ್ಲಿ ಕಾರ್ಯಕ್ರಮ ಇದ್ದರೂ ಅವರ ಜೊತೆಗೆ ಇರುತ್ತಿದ್ದರು. ಅವರ ಎಲ್ಲ ಯಶಸ್ವಿಗೆ ಬಹಳ ಪಾತ್ರ ವಹಿಸಿದ್ದಾರೆ. ಅವರು ಮಾಡಿದ ಕೆಲಸವನ್ನು ಮುಂದುವರಿಸುವ ಕೆಲಸ ಮಾಡೋಣ ಎಂದರು.
ಬಿಎಸ್ ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟದಿಂದ, ತ್ಯಾಗದಿಂದ, ಅವರ ಬಲಿದಾನದಿಂದ ಲಕ್ಷಾಂತರ ಜನರು ಸರ್ಕಾರಿ ನೌಕರಿಯನ್ನು ಪಡೆದುಕೊಂಡಿದ್ದಾರೆ. ಅವರೆಲ್ಲರೂ ಅಂಬೇಡ್ಕರ್ ಚಳುವಳಿಯನ್ನು ಸಕ್ಸಸ್ ಮಾಡ್ಬೇಕು. ಅಂಬೇಡ್ಕರ್ ಅವರ ಕನಸ್ಸನ್ನು ನನಸು ಮಾಡಬೇಕು. ಆ ಜವಾಬ್ದಾರಿ ನಮ್ಮ ಮೇಲಿದೆ. ಪೇ ಬ್ಯಾಕ್ ಟು ಸೊಸೈಟಿ ಅನ್ನೋ ಕಾನ್ಸೆಪ್ಟ್ ಅದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ಬಿಎಸ್ ಪಿ ನಾಯಕ ಆರ್.ಮುನಿಯಪ್ಪ ಮಾತನಾಡಿ, ನವೆಂಬರ್ 2ರ ಕಾರ್ಯಕ್ರಮದಲ್ಲಿ ನಮ್ಮ ಜೊತೆಗೆ ನಮ್ಮ ದಾಸಪ್ಪನವರು ವೇದಿಕೆ ಮೇಲೆ ಇದ್ದರು. ಸಂವಿಧಾನ ಜಾಥಾವನ್ನು ತೆಗೆದುಕೊಂಡು ಬಂದಾಗ ಬಹಳ ಉತ್ಸಾಹದಿಂದ ನಮ್ಮನ್ನು ಬರಮಾಡಿಕೊಂಡರು. ನಮ್ಮ ಆರೋಗ್ಯವನ್ನು ವಿಚಾರಿಸಿದರು. ಕಾರ್ಯಕ್ರಮದ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟರು. ಅಂತಹ ಒಬ್ಬ ನಮ್ಮ ಒಡನಾಡಿ ಬಂಧು 19ನೇ ತಾರೀಖಿನಂದು ಇಲ್ಲ ಅನ್ನೋದು ಕೇಳಿ, ನಮಗೆ ನಿಜವಾಗಿಯೂ ನಂಬಲು ಸಾಧ್ಯವಾಗಲಿಲ್ಲ. ತುಂಬಾನೇ ಕಷ್ಟಕರವಾಯಿತು ಎಂದು ಭಾವುಕರಾದರು.
ನಮ್ಮ ಸಂಬಂಧಿಕರಲ್ಲಿ ಯಾರಾದ್ರೂ ತೀರಿ ಹೋದರೆ, ಆ ಕುಟುಂಬಕ್ಕೆ ಮಾತ್ರವೇ ನೋವಾಗ ಬಹುದು ಅಥವಾ ಪರಿಚಯಸ್ಥರಿಗೆ ನೋವಾಗಬಹುದು. ಈ ಥರ ಬಾಬಾ ಸಾಹೇಬರ ಚಳುವಳಿಯನ್ನು ನಡೆಸುವಂತಹ ಒಬ್ಬ ಧೀಮಂತ ವ್ಯಕ್ತಿ ತೀರಿಕೊಂಡಾಗ ಅದು ಇಡೀ ಸಮಾಜಕ್ಕೆ ನೋವು ಕೊಡುತ್ತದೆ. ಇಡೀ ಒಂದು ಹೋರಾಟದ ಚಿಲುಮೆಗೆ ಕುಂದು ಉಂಟಾಗುತ್ತದೆ ಅನ್ನೋ ಭಾವನೆ ನಮಗೆ ಗೋಚರ ಆಗುತ್ತದೆ ಎಂದರು.
ದಾಸಪ್ಪನವರು ಇಷ್ಟೊಂದು ಕ್ರಿಯಾಶೀಲವಾಗಿ ನೌಕರಿಯಲ್ಲಿದ್ದಾಗಲೂ ಈ ಸಮಾಜದ ಬಗ್ಗೆ ಅಪಾರವಾದ ಕಳಕಳಿಯನ್ನು ಇಟ್ಟುಕೊಂಡು ಇವರನ್ನು ಹೇಗಾದರೂ ಮಾಡಿ ವಿಮೋಚನೆಗೆ ನಾನು ಬಾಬಾ ಸಾಹೇಬರ ದಾರಿಯಲ್ಲಿ ಕೊಂಡೊಯ್ಯ ಬೇಕು ಎಂದು ಹೋರಾಟ ಮಾಡಿದಾಗ ಅವರ ಕುಟುಂಬ, ಅವರ ಪತ್ನಿ ಅವರಿಗೆ ಹೆಗಲಿಗೆ ಹೆಗಲು ನೀಡಿದರು ಎಂದರು ಎಂದು ಆರ್.ಮುನಿಯಪ್ಪ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಹುಜನ್ ಮಾತನಾಡಿ, ಜಿಲ್ಲೆಯ ಸಾರಥ್ಯವಹಿಸಿದ ನಂತರ ಅವರೆಂದಿಗೂ ಕೈಕಟ್ಟಿ ಕೂರಲಿಲ್ಲ. ಪ್ರತೀ ವಾರ ಒಂದು ಹಳ್ಳಿಗೆ ಹೋಗಿ ಬಹುಜನ ಚಳುವಳಿ ವಿಚಾರವನ್ನು ತಿಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು. ನೋವು ನಲಿವುಗಳಿದ್ದರೂ ಕೂಡ, ಅವುಗಳನ್ನು ಹೊಟ್ಟೆಗೆ ಹಾಕಿಕೊಂಡು, ಈ ಚಳುವಳಿಗೆ ಮೋಸವಾಗದ ರೀತಿಯಲ್ಲಿ ನಗುಮುಖದಲ್ಲಿ ಚಳುವಳಿಯನ್ನು ಮುನ್ನಡೆಸಿದರು ಎಂದರು.
ನಮ್ಮ ಕುಟುಂಬಸ್ಥರು ತೀರಿ ಹೋದ ಸಂದರ್ಭದಲ್ಲಿ ಕೂಡ ನಾನು ಅತ್ತಿರಲಿಲ್ಲ ಎನ್ನುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಅನೇಕ ವಿಚಾರಗಳನ್ನು ಅವರ ನೆನಪುಗಳು ಎರಡು ಮೂರು ದಿನ ನನ್ನನ್ನು ತುಂಬಾನೆ ಕಾಡಿದೆ. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತವಾದದ್ದು. ಅದು ಯಾರ ಕೈಯಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಯಾವುದೇ ರಕ್ತ ಸಂಬಂಧ ಇಲ್ಲದಿದ್ದರೂ, ನಾವೆಲ್ಲ ಒಟ್ಟು ಸೇರಿದ್ದೇವೆ ಎಂದು ಭಾವುಕರಾದರು. ನನ್ನ ಕುಟುಂಬದಲ್ಲಿ ಒಬ್ಬ ಸದಸ್ಯನನ್ನು ಕಳೆದುಕೊಂಡದ್ದಕ್ಕಿಂತಲೂ ಹೆಚ್ಚಿನ ದುಃಖ ನನ್ನನ್ನು ಆವರಿಸಿದೆ ಎಂದು ಅವರು ಕಣ್ಣೀರು ಹಾಕಿದರು.
ರಾಜ್ಯ ಕಾರ್ಯದರ್ಶಿ ಕಾಂತಪ್ಪ ಆಲಂಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದಾಸಪ್ಪರು ನೌಕರರಾಗಿದ್ದ ವೇಳೆ ಕೂಡ ಚಳುವಳಿಯನ್ನು ಮುನ್ನಡೆಸಿದವರು. ನಿವೃತ್ತರಾದ ಬಳಿಕ ಬಿಎಸ್ ಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದರು. ಬೆಳ್ತಂಗಡಿಯಲ್ಲಿ ನಡೆದ ಸಂವಿಧಾನ ಸಂರಕ್ಷಣಾ ಜಾಗೃತಿ ಸಮಾವೇಶ ಅವರ ಕೊನೆಯ ಕಾರ್ಯಕ್ರಮವಾಗಿತ್ತು. ದಾಸಪ್ಪ ಉತ್ಸವದ ಚಿಲುಮೆ, ಸ್ಪೂರ್ತಿಯ ಪರ್ವತ ಎಂದಿಗೂ ನಕರಾತ್ಮಕವಾಗಿದ್ದವರಲ್ಲ, ಮಾಡಲೂ ಬಿಡುತ್ತಿರಲಿಲ್ಲ. ಚಳುವಳಿ ಹಿನ್ನಡೆ ಅನುಭವಿಸಿದಾಗಲೂ ಸದಾ ಭರವಸೆಯ ಆಶಾದಾಯಕ ಮಾತುಗಳನ್ನಾಡುತ್ತಿದ್ದರು. ಕಾನ್ಶಿರಾಮ್ ಅವರು ಹೇಳುತ್ತಿದ್ದ ಸದಾ ಪಾಸಿಟಿವ್ ಆಗಿ ಯೋಚಿಸಬೇಕು ಅನ್ನುವ ಮಾತುಗಳನ್ನು ಪಾಲಿಸುತ್ತಿದ್ದರು ಎಂದರು.
ಸಭೆಯಲ್ಲಿ ಕಲಾ ತಂಡದಿಂದ ಬಹುಜನ ಗೀತೆಯನ್ನು ಹಾಡಲಾಯಿತು. ಅಧ್ಯಕ್ಷತೆಯನ್ನು ಬಿಎಸ್ ಪಿ ದ. ಕ. ಜಿಲ್ಲಾಧ್ಯಕ್ಷ ದೇವಪ್ಪ ಬೋಥ್ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಹುಜನ, ರಾಜ್ಯ ಕಾರ್ಯದರ್ಶಿ ಸುಧಾ ಎಸ್.ಕೆ.ಎಂ., ಬಿಎಸ್ಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಡಿ, ಬಿಎಸ್ ಪಿ ದ. ಕ. ಜಿಲ್ಲಾ ಸಂಯೋಜಕರು ಗೋಪಾಲ್ ಮುತ್ತೂರು ಬಿಎಸ್ಪಿ ದ.ಕ. ಜಿಲ್ಲಾ ಉಸ್ತುವಾರಿ ನಾರಾಯಣ್ ಬೋದ್ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka