ಮರ್ಯಾದೆಗೇಡು ಹತ್ಯೆ: ದಂಪತಿಯನ್ನು ಕೊಂದವರಿಗೆ ಮರಣದಂಡನೆ ಶಿಕ್ಷೆ

ಗದಗ: ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ಮದುವೆಯಾದ ಕಾರಣಕ್ಕೆ ಯುವ ದಂಪತಿಯನ್ನು ಮರ್ಯಾದೆಗೇಡು ಹತ್ಯೆ ಮಾಡಿದ ನಾಲ್ವರಿಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದ ನಿವಾಸಿಗಳಾದ ರಮೇಶ ಮಾದರ ಮತ್ತು ಗಂಗಮ್ಮ ಮಾದರ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಶಿವಪ್ಪ ರಾಠೋಡ್, ರವಿಕುಮಾರ ರಾಠೋಡ್, ರಮೇಶ್ ರಾಠೋಡ್ ಮತ್ತು ಪರಶುರಾಮ ರಾಠೋಡ್ ಎಂಬುವವರನ್ನು ಅಪರಾಧಿಗಳೆಂದು ಷೋಷಿಸಿತ್ತು. ಇದೀಗ ಅಪರಾಧಿಗಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಮರಣದಂಡನೆ ಶಿಕ್ಷಗೊಳಗಾದವರೆಲ್ಲರೂ ಮೃತ ಗಂಗಮ್ಮ ಮಾದರ ಅವರ ಸಂಬಂಧಿಕರಾಗಿದ್ದಾರೆ. ಇಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಗಂಗಮ್ಮನ ಸಂಬಂಧಿಕರು ರಮೇಶ ಮಾದಾರ (29) ಮತ್ತು ಗಂಗಮ್ಮ (23) ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಅಮಾನುಷವಾಗಿ ಹತ್ಯೆ ಮಾಡಿದ್ದರು.
ಘಟನೆ ಕುರಿತು ಗಜೇಂದ್ರಗಡ ಪೊಲೀಸರು ತನಿಖೆ ನಡೆಸಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದರು. ಗಂಗಮ್ಮ ದಲಿತ ಸಮುದಾಯಕ್ಕೆ ಸೇರಿದ ರಮೇಶ್ ಎಂಬಾತನನ್ನು ಮದುವೆಯಾದ ನಂತರ ಆಕೆಯ ಸಹೋದರರು ಕೋಪಗೊಂಡು ಈ ದುಷ್ಕೃತ್ಯ ಎಸಗಿದ್ದರು.
ಜಾತಿಯ ಕಾರಣಕ್ಕಾಗಿ ಮರ್ಯಾದೆಗೇಡು ಹತ್ಯೆ ನಡೆಸುವವರಿಗೆ ಮರಣದಂಡನೆ ಶಿಕ್ಷೆಯಾಗಿದೆ. ಶೀಘ್ರವೇ ಶಿಕ್ಷೆ ಜಾರಿಯಾಗಬೇಕಿದೆ, ಮರ್ಯಾದೆಗೇಡು ಹತ್ಯೆ ನಡೆಸುವವರಿಗೆ ಈ ಶಿಕ್ಷೆ ಪಾಠವಾಗಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: