ದೇಹದ ತೂಕ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?

ಹೊಟ್ಟೆ ತುಂಬ ತಿಂದರೆ, ದಪ್ಪ ಆಗಿ ಬಿಡುತ್ತಾರೆ ಎನ್ನುವುದು ಸಾಮಾನ್ಯವಾಗಿ ಜನರು ಆಡಿಕೊಳ್ಳುವ ಮಾತು. ಹಾಗೆಯೇ ಇವನು ಎಷ್ಟು ತಿಂದರೂ ದಪ್ಪ ಆಗುವುದೇ ಇಲ್ಲ ಎನ್ನುವುದು ಇನ್ನು ಕೆಲವರ ದೂರು. ಆದರೆ ದಪ್ಪ ಆಗಬೇಕಾದರೆ ಏನು ತಿನ್ನಬೇಕು ಎನ್ನುವುದು ಬಹಳಷ್ಟು ಜನರಿಗೆ ತಿಳಿದೇ ಇರುವುದಿಲ್ಲ.
ನಾವು ಎಷ್ಟು ಆಹಾರ ಸೇವಿಸುತ್ತೇವೆ ಎನ್ನುವುದಕ್ಕಿಂತಲೂ ಎಂತಹ ಆಹಾರ ಸೇವಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಸಪೂರ ದೇಹ ಹೊಂದಿದವರು, ಅದರಲ್ಲೂ ಯುವಕರು ಹೆಚ್ಚಾಗಿ ತಾವು ದಪ್ಪ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಎಷ್ಟು ತಿಂದರೂ ನಾವು ದಪ್ಪ ಆಗುವುದೇ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ.
ನಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕಾದರೆ ನಾವು ಎಂತಹ ಆಹಾರ ಸೇವಿಸಬೇಕು ಎಂದರೆ, ಯಾವ ಆಹಾರದಲ್ಲಿ ಹೆಚ್ಚು ಪೋಷಕಾಂಶಗಳಿವೆಯೋ ಅಂತಹ ಆಹಾರವನ್ನು ಹೆಚ್ಚುಹೆಚ್ಚಾಗಿ ತಿನ್ನಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ.
ಪ್ರೋಟೀನ್ ಆಹಾರ ಮತ್ತು ಬಾಳೆಹಣ್ಣುಗಳನ್ನು ತಿನ್ನುವುದು, ಹಾಲು ಅಥವಾ ಮೊಸರಿನ ಜೊತೆಗೆ ಬಾಳೆಹಣ್ಣು ತಿನ್ನುವುದು. ಮಾವಿನ ಹಣ್ಣು, ಅಶ್ವಗಂಧ ಪುಡಿ ಹಾಲಿನ ಜೊತೆಗೆ ಬೆರೆಸಿ ಕುಡಿಯುವುದು, ಬೆಳಗ್ಗಿನ ಸಮಯದಲ್ಲಿ ದಿನವೊಂದಕ್ಕೆ 5 ಖರ್ಜೂರುಗಳನ್ನು ತಿನ್ನುವುದು. ಮಜ್ಜಿಗೆ ಮತ್ತು ಸೋಯಾಬೀನ್ ಸೇವಿಸುವುದು ತೂಕ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.