ದಿಲ್ಲಿಯಲ್ಲೂ ತೃತೀಯ ಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ
ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮತ್ತು ಕ್ಲಸ್ಟರ್ ಬಸ್ ಗಳಲ್ಲಿ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ. ಈ ಮೂಲಕ ಸಾಮಾಜಿಕ ಅನ್ಯಾಯಗಳನ್ನು ಪರಿಹರಿಸುವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಎಎಪಿ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಸಿಎಂ ಹೇಳಿದ್ದಾರೆ.
ಸರ್ಕಾರಿ ಬಸ್ ಗಳಲ್ಲಿ ತೃತೀಯ ಲಿಂಗಿಗಳಿಗೆ ಉಚಿತವಾಗಿ ಪ್ರಯಾಣಿಸಲು ದೆಹಲಿ ಸರ್ಕಾರ ಅನುಮೋದಿಸಿದೆ. ಶೀಘ್ರದಲ್ಲೇ, ಇದನ್ನು ಕ್ಯಾಬಿನೆಟ್ ಅಂಗೀಕರಿಸಿ ಜಾರಿಗೆ ತರಲಾಗುವುದು. ಈ ಕ್ರಮದಿಂದ ತೃತೀಯ ಲಿಂಗಿ ಸಮುದಾಯದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದರು.
ತೃತೀಯ ಲಿಂಗಿ ಸಮುದಾಯದ ವಿರುದ್ಧದ ತಾರತಮ್ಯವನ್ನು ಎದುರಿಸುವ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸಮಾನತೆಯ ಮೂಲಭೂತ ಹಕ್ಕನ್ನು ಒತ್ತಿ ಹೇಳಿದರು. “ನಮ್ಮ ಸಮಾಜದಲ್ಲಿ, ತೃತೀಯ ಲಿಂಗಕ್ಕೆ ಸೇರಿದ ಜನರು ಅವಮಾನಕ್ಕೆ ಒಳಗಾಗುತ್ತಾರೆ.
ಅವರೂ ಮನುಷ್ಯರು ಮತ್ತು ಸಮಾನತೆಯ ಹಕ್ಕನ್ನು ಹೊಂದಿರುವುದರಿಂದ ಇದು ಸಂಭವಿಸಬಾರದು” ಎಂದು ಮುಖ್ಯಮಂತ್ರಿ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಹಿಂದಿಯಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಸಂದೇಶದಲ್ಲಿ ತಿಳಿಸಿದ್ದಾರೆ.