ದಿಲ್ಲಿ ಗಲಭೆ ಕುರಿತಾದ ‘2020 ಡೆಲ್ಲಿ’ ಸಿನಿಮಾ ರಿಲೀಸ್ ಮುಂದೂಡಬೇಕೆಂದು ಅರ್ಜಿ: ಪ್ರತಿಕ್ರಿಯೆ ಕೇಳಿದ ದಿಲ್ಲಿ ಹೈಕೋರ್ಟ್

ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಕುರಿತಾದ ಚಲನಚಿತ್ರ ‘2020 ಡೆಲ್ಲಿ’ ಬಿಡುಗಡೆಯನ್ನು ಮುಂದೂಡಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಶರ್ಜೀಲ್ ಇಮಾಮ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರತಿಕ್ರಿಯೆ ಕೋರಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಪಿತೂರಿ ನಡೆಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಯುಎಪಿಎ ಅಡಿ ಪ್ರಕರಣ ದಾಖಲಿಸಿ, ಪ್ರಸ್ತುತ ಶರ್ಜೀಲ್ ಇಮಾಮ್ ರನ್ನು ಜೈಲಿನಲ್ಲಿಡಲಾಗಿದೆ.
ನ್ಯಾಯಾಲಯ ದೆಹಲಿ ಪೊಲೀಸರು ಮತ್ತು ಚಿತ್ರದ ನಿರ್ಮಾಪಕರಿಗೂ ನೋಟಿಸ್ ಜಾರಿ ಮಾಡಿದೆ ಎಂದು ವರದಿ ಹೇಳಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಸಿಎಎ ವಿರುದ್ಧ ನಡೆದಿದ್ದ ಪ್ರತಿಭಟನೆ ಮತ್ತು ನಂತರ ನಡೆದ ಗಲಭೆಗಳನ್ನು ಆಧರಿಸಿದ ‘2020 ಡೆಲ್ಲಿ’ ಚಿತ್ರ ನಿರ್ಮಿಸಲಾಗಿದೆ. ಶನಿವಾರ ಅದು ಬಿಡುಗಡೆಯಾಗಲಿದೆ.
ಈ ಚಿತ್ರವು ತನ್ನ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಮಾತ್ರವಲ್ಲದೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಲವಾರು ವಿಚಾರಣೆ ಮತ್ತು ಜಾಮೀನು ಅರ್ಜಿಗಳ ಮೇಲೂ ಪರಿಣಾಮ ಬೀರಬಹುದು ಎಂದು ಶರ್ಜೀಲ್ ಇಮಾಮ್ ಕಳವಳ ವ್ಯಕ್ತಪಡಿಸಿದ್ದಾರೆ.
“ಸುಳ್ಳು, ಕಲ್ಪಿತ ಮತ್ತು ಕಾಲ್ಪನಿಕ ಕಥೆ ಹೊಂದಿರುವ ಚಿತ್ರವನ್ನು ನಿಜವಾದ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ತನ್ನನ್ನು ಭಯೋತ್ಪಾದಕ ಅಥವಾ ದೇಶದ್ರೋಹಿ ಎಂದು ತಪ್ಪಾಗಿ ಬ್ರಾಂಡ್ ಮಾಡುವ ಈ ಚಿತ್ರವು ಖಂಡಿತವಾಗಿಯೂ ಇನ್ನೂ ಪ್ರಾರಂಭಗೊಳ್ಳದ ವಿಚಾರಣೆಯ ಮೇಲೆ ಗಂಭೀರ ಪೂರ್ವಾಗ್ರಹ ಪೀಡಿತ ಪರಿಣಾಮ ಬೀರುತ್ತದೆ” ಎಂದು ಶರ್ಜೀಲ್ ಇಮಾಮ್ ವಾದಿಸಿದ್ದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ನ್ಯಾಯಾಲಯದ ತೀರ್ಪು ಬರುವ ಮುನ್ನವೇ ವ್ಯಕ್ತಿಗಳಿಗೆ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುವುದು ನ್ಯಾಯಾಂಗದ ಪಕ್ಷಪಾತಕ್ಕೆ ಕಾರಣವಾಗಬಹುದು. ಅಲ್ಲದೆ, ಸಮಾನತೆ, ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುವ ಸಂವಿಧಾನ 14 ಮತ್ತು 21 ನೇ ವಿಧಿಯ ವಿರುದ್ಧವೂ ಆಗುತ್ತದೆ ಎಂದು ಶರ್ಜೀಲ್ ಇಮಾಮ್ ಅರ್ಜಿಯಲ್ಲಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj