ಕತ್ತು ಸೀಳಿ ಮಹಿಳಾ ಅಧಿಕಾರಿಯ ಬರ್ಬರ ಹತ್ಯೆ: ಕೆಲಸ ಮುಗಿಸಿ ಸಂಜೆ ಮನೆಗೆ ಬಂದಿದ್ದ ಅಧಿಕಾರಿಯನ್ನು ಕೊಂದವರು ಯಾರು?
ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ವೊಬ್ಬರನ್ನು ಶನಿವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ(45) ಭೀಕರವಾಗಿ ಹತ್ಯೆಗೀಡಾದವರಾಗಿದ್ದಾರೆ. ಶನಿವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಮಹಿಳಾ ಅಧಿಕಾರಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ರಾತ್ರಿ ಪ್ರತಿಮಾ ಅವರಿಗೆ ಅವರ ಸಹೋದರ ಕರೆ ಮಾಡಿದ್ದರು. ಆದ್ರೆ ಅವರು ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆಗೆ ಬಂದಾಗಿ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ ಎಂದು ತಿಳಿದು ಬಂದಿದೆ.
ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ಕೆಲಸದ ನಿಮಿತ್ತ ಪ್ರತಿಮಾ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಇವರಿಗೆ 15 ವರ್ಷದ ಮಗ ಕೂಡ ಇದ್ದಾನೆ.
ಕಾರು ಚಾಲಕ ನಾಪತ್ತೆ:
ಪ್ರತಿಮಾ ಅವರನ್ನು ನಿನ್ನೆ ಕಚೇರಿಯಿಂದ ಮನೆಗೆ ಕರೆದುಕೊಂಡು ಬಂದಿದ್ದ ಕಾರು ಚಾಲಕ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಘಟನೆ ಬಗ್ಗೆ ಹಲವಾರು ಅನುಮಾನಗಳು ಮೂಡಿವೆ. ಸದ್ಯ ಕೊಲೆ ಮಾಡಿದವರು ಯಾರು ಹಾಗೂ ಕೊಲೆಗೆ ಕಾರಣಗಳೇನು ಎನ್ನುವ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ.
ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಸುತ್ತೇವೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಈಗಷ್ಟೇ ಮಾಹಿತಿ ತಿಳಿಯಿತು. ಅವರು ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಅವರ ಪತಿ ಪರವೂರಿನಲ್ಲಿದ್ದರಂತೆ. ಅವರ ಕೊಲೆ ಹೇಗಾಯ್ತು, ಯಾಕಾಯ್ತು ಎಂದು ತನಿಖೆ ಮಾಡಿಸಲಾಗುವುದು ಎಂದರು.