ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅನುರಾಗ್ ಠಾಕೂರ್ ರ ಭಾಷಣವನ್ನು ಬೆಂಬಲಿಸಿರುವ ಪ್ರಧಾನಿ ವಿರುದ್ಧ ದೂರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಅನುರಾಗ್ ಠಾಕೂರ್ ರ ಭಾಷಣವನ್ನು ಬೆಂಬಲಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಯುಚ್ಯುತಿ ದೂರು ನೀಡಿದೆ. ಇದರಿಂದ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.
ನಿನ್ನೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದ ಅನುರಾಗ್ ಠಾಕೂರ್, ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಆಸನದಲ್ಲಿದ್ದ ಹಿರಿಯ ಕಾಂಗ್ರೆಸ್ ಸಂಸದೆ ಜಗದಾಂಬಿಕಾ ಪಾಲ್, ಅನುರಾಗ್ ಠಾಕೂರ್ ರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲಾಗುವುದು ಎಂದು ಭರವಸೆ ನೀಡಿದ್ದರು.
ಅನುರಾಗ್ ಠಾಕೂರ್ ಭಾಷಣದ ಇದೇ ವಿಡಿಯೊ ತುಣಕನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಈ ಭಾಷಣವನ್ನು ಕೇಳಲೇಬೇಕು ಎಂದು ಸಲಹೆ ನೀಡಿದ್ದಾರೆ. “ನನ್ನ ಯುವ ಮತ್ತು ಉತ್ಸಾಹಿ ಸಹೋದ್ಯೋಗಿ ಅನುರಾಗ್ ಠಾಕೂರ್ ಮಾಡಿರುವ ಭಾಷಣವನ್ನು ಕೇಳಲೇಬೇಕು. ಇದು ವಾಸ್ತವಾಂಶಗಳು ಹಾಗೂ ವಿಡಂಬನೆಯ ನಿಖರ ಮಿಶ್ರಣವಾಗಿದ್ದು, ಇಂಡಿ ಮೈತ್ರಿಕೂಟದ ಕೊಳಕು ರಾಜಕಾರಣವನ್ನು ಅನಾವರಣಗೊಳಿಸಿದೆ” ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿಯ ಈ ನಡೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, “ತೀವ್ರ ಅವಹೇಳನಕಾರಿ ಹಾಗೂ ಅಸಾಂವಿಧಾನಿಕ ಮನಸ್ಥಿತಿಯ ಭಾಷಣವನ್ನು ಹಂಚಿಕೊಳ್ಳುವ ಮೂಲಕ, ಪ್ರಧಾನಿಯು ಗಂಭೀರ ಸಂಸದೀಯ ಹಕ್ಕುಚ್ಯುತಿಯನ್ನು ಪ್ರೋತ್ಸಾಹಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth