ದೇಶ ಕಾಯೋ ಸೈನಿಕ ಪ್ರೀತಿಗೆ ವಿಷವುಣಿಸಿದ | "ಮದುವೆಯಾಗೋಣ ಬಾ" ಎಂದು ಕರೆದು ಮಸಣಗಟ್ಟಿದ! - Mahanayaka
2:04 AM Thursday 12 - December 2024

ದೇಶ ಕಾಯೋ ಸೈನಿಕ ಪ್ರೀತಿಗೆ ವಿಷವುಣಿಸಿದ | “ಮದುವೆಯಾಗೋಣ ಬಾ” ಎಂದು ಕರೆದು ಮಸಣಗಟ್ಟಿದ!

02/02/2021

ಚಿಕ್ಕೋಡಿ: ದೇಶ ಕಾಯೋ ಯೋಧನೊಬ್ಬ ತನ್ನ ಪ್ರೀತಿಯನ್ನು ವಿಷ ಉಣಿಸಿ ಕೊಂದ ಆಘಾತಕಾರಿ ಘಟನೆ  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

ಸೇನೆಯಲ್ಲಿ ಕೆಲಸ ಮಾಡುತ್ತಿರುವ ರಾಜು ಚಿಕ್ಕ ವಯಸ್ಸಿನಿಂದಲೂ ರೂಪಾಲಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ.  ಆದರೆ ಇವರಿಬ್ಬರ ಜಾತಿ ಬೇರೆ ಬೇರೆಯಾಗಿತ್ತು. ಈ ಅನಿಷ್ಠ ಜಾತಿಯಿಂದಾಗಿ ರಾಜುವಿನ ಕುಟುಂಬಸ್ಥರು ಮದುವೆಗೆ ಒಪ್ಪಲಿಲ್ಲ.

ಈ ನಡುವೆ ಬಾಲ್ಯದಿಂದಲೂ ಪ್ರೀತಿಸುತ್ತಿದ್ದ  ರಾಜುವಿನ ಮನಸ್ಸು ಬದಲಾಗಿದ್ದು, ಆತ ಕುಟುಂಬಸ್ಥರ ತಾಳಕ್ಕೆ ತಕ್ಕಂತೆ ಕುಣಿಯಲು ಆರಂಭಿಸಿದ್ದಾನೆ. ಕುಟುಂಬಸ್ಥರ ಒತ್ತಡಕ್ಕೆ ಮಣಿದು, ಜನವರಿ 21ರಂದು ಬೇರೆ ಯುವತಿಯ ಜೊತೆಗೆ ರಾಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.

ನಿಶ್ಚಿತಾರ್ಥದ ಮರುದಿನ ರಾಜು ರೂಪಾಲಿಗೆ ಕರೆ ಮಾಡಿ, ನಮ್ಮ ಮದುವೆಗೆ ಮನೆಯವರು ಒಪ್ಪುತ್ತಿಲ್ಲ, ನಾವು ರಿಜಿಸ್ಟರ್ ಮದುವೆಯಾಗೋಣ ಬಾ ಎಂದು ಕರೆದಿದ್ದಾನೆ. ರಾಜುವಿನ ಮಾತು ನಂಬಿಕೊಂಡು ಆಸೆ ಕಣ್ಣುಗಳೊಂದಿಗೆ ಬಂದಿದ್ದ ರೂಪಾಳಿಗೆ ಆಘಾತವೇ ಕಾದಿತ್ತು.

ಮದುವೆ ಆಗೋಣ ಬಾ ಎಂದು ಕರೆದಿದ್ದ ರಾಜು, ನಾವಿಬ್ಬರು ಬೇರೆಯಾಗೋಣ ಎಂದು ರೂಪಾಳಿಯನ್ನು ಓಲೈಕೆ ಮಾಡಲು ಯತ್ನಿಸಿದ್ದಾನೆ. ಈತನ ಈ ಸ್ವಾರ್ಥಿ  ನಡೆಯಿಂದ ದಿಕ್ಕು ತೋಚದ ರೂಪಾಳಿ ಅಸಹಾಯಕಳಾಗಿ ಆತನ ಜೊತೆಗೆ ಜಗಳವಾಡಿದ್ದಾಳೆ.

ಜಗಳವಾಡುತ್ತಿದ್ದ ರೂಪಾಳಿಯನ್ನು ಸಮಾಧಾನ ಮಾಡಿದ್ದ ರಾಜು, ಬಾ ಊಟ ಮಾಡೋಣ ಎಂದು ಹೊಟೇಲ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕೂಲ್ ಡ್ರಿಂಗ್ಸ್ ನಲ್ಲಿ ವಿಷ ಬೆರೆಸಿ ರೂಪಾಲಿಗೆ ನೀಡಿದ್ದಾನೆ. ಈತನ ಹೃದಯ ವಿಷವಾಗಿದೆ ಎನ್ನುವುದನ್ನು ತಿಳಿಯದ ರೂಪಾಲಿ, ನಂಬಿ ಕೂಲ್ ಡ್ರಿಂಗ್ಸ್ ಕುಡಿದಿದ್ದಾಳೆ.

ವಿಷ ಬೆರೆಸಿದ ಪಾನೀಯ ಸೇವಿಸಿದ ಪರಿಣಾಮ ರೂಪಾಲಿ ಅಸ್ವಸ್ಥಳಾಗಿದ್ದಾಳೆ.  ಈ ವೇಳೆ ರಾಜು ತನಗೇನೂ ಗೊತ್ತೇ ಇಲ್ಲ ಎನ್ನುವಂತೆ ಹೈಡ್ರಾಮಾ ಆಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಾಟಕವಾಡಿದ್ದಾನೆ.

ಈತನ ಸ್ವಾರ್ಥಿ ನಡೆ, ಘೋರ ಮೋಸವನ್ನು ಕಂಡಿದ್ದರಿಂದಲೋ ಏನೋ, ರೂಪಾಲಿ ಈ ಮೋಸದ ಜಗತ್ತಿಗೆ ವಿದಾಯ ಹೇಳಿದ್ದಾಳೆ. ದೇಶ ಕಾಯುವ ಸೈನಿಕ ಎಂದು ಆಕೆ ಕೊನೆಯವರೆಗೂ ಆತನನ್ನು ನಂಬಿದ್ದಳು ಆದರೆ, ರಾಜು, ತನ್ನೊಳಗಿರುವ ಕೇಡನ್ನು ಕಕ್ಕಿದ್ದಾನೆ. ಅಮಾಯಕಿ ರೂಪಲಿ ಈ ಮೋಸದ ಜಗತ್ತನ್ನು ತೊರೆದು ಹೋಗಿದ್ದಾಳೆ. ವಂಚಕ ರಾಜು ತನ್ನ ಸ್ನೇಹಿತ ಸುರೇಶ್ ಎಂಬಾತನನ್ನು ಈ ಕೃತ್ಯದಲ್ಲಿ ಬಳಸಿಕೊಂಡಿದ್ದಾನೆ. ಸದ್ಯ ದ್ರೋಹಿಗಳು ಪೊಲೀಸರ ವಶದಲ್ಲಿದ್ದಾರೆ.

ಇತ್ತೀಚಿನ ಸುದ್ದಿ