ದೇಶದ ಸ್ವಾತಂತ್ರ್ಯ ಸಮಾನವಾಗಿ ದಕ್ಕಿದೆಯೇ?
- ಶ್ರೀನಿವಾಸ್ ಕೆ.
ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದೆ. ದೇಶದುದಕ್ಕೂ ‘ಹರ್ ಘರ್ ತಿರಂಗ’ ಘೋಷಣೆಗೆ ಓಗೊಟ್ಟು ಜನ ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಕ್ಕೆ ಗೌರವ ಸಲ್ಲಿಸಿದ್ದಾಯಿತು. ಕೆಂಪು ಕೋಟೆಯ ಮೇಲೆ ನಿಂತು ಪ್ರಧಾನಿ ಮೋದಿಯವರು ದೇಶದ ಅಭಿವೃಧ್ಧಿಗೆ ಸಂಕಲ್ಪ ತೊಡುವಂತೆ ಕರೆ ನೀಡಿದ್ದಾರೆ. ಅಲ್ಲದೆ, ಮಕ್ಕಳು, ಮಹಿಳೆಯರ ಸಬಲೀಕರಣದ ಮಂತ್ರ ಜಪಿಸಿದ್ದಾರೆ. ಆದರೆ, ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರಾನ ಎಂಬ ಹಳ್ಳಿಯ ಖಾಸಗೀ ಶಾಲೆಯಲ್ಲಿ ನೀರಿನ ಮಡಿಕೆ ಮುಟ್ಟಿದ ಕಾರಣಕ್ಕೆ ‘ಇಂದರ್ ಮೇಘವಾಲ್’ ಎಂಬ 9 ವರ್ಷದ ಯುವಕನ ಮೇಲೆ ಶಾಲೆಯ ಶಿಕ್ಷಕನೊರ್ವ ಬರ್ಬರವಾಗಿ ಹಲ್ಲೆ ನೆಡೆಸಿದ ಕಾರಣ ಯುವಕ ಹಸುನೀಗಿದ್ದಾನೆ.
ಆದರೆ, ನಾವಿಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಅಲ್ಲದೆ, ಸಂರ್ಭಮದಲ್ಲಿರುವಾಗ ಯಾವ ಗೋಳು ಕಿವಿಗಳಿಗೆ ತಟ್ಟುವುದಿಲ್ಲ. ಯಾರ ಲಕ್ಷ್ಯವು ಇಂತಹ ಕೃತ್ಯಗಳ ಕಡೆಗೆ ಬೀಳುವುದಿಲ್ಲ. ಯಾರೋ ಅನಾಗರೀಕ, ಅನಕ್ಷರಸ್ಥರು ಎಸಗುವ ಪರಿಯಲ್ಲಿಯೇ ಒಬ್ಬ ಶಿಕ್ಷಿತ ವ್ಯಕ್ತಿ ದೌರ್ಜನ್ಯವೆಸಗುತ್ತಾನೆಂದರೆ ದೇಶದ ಸ್ವಾತಂತ್ರ್ಯ ಯಾರಿಗೆ ದಕ್ಕಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.
ನಾಡೋಜ ದಲಿತ ಕವಿ ಸಿದ್ಧಲಿಂಗಯ್ಯರವರ ‘ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಎಂಬ ಕ್ರಾಂತಿ ಗೀತೆಯು ಪ್ರತಿ ಸ್ವತಂತ್ರೋತ್ಸವ ದಿನಕ್ಕೆ ಪ್ರಸ್ತುತವಾಗುಳಿದಿದೆ. ಅವರು ನುಡಿದಂತೆ ದೇಶ ಪಡೆದ ಸ್ವಾತಂತ್ರ್ಯವು ‘ಜನರ ಗೊಳಿನ ಕಡಲನು ಬತ್ತಿಸಲಿಲ್ಲ, ಸಮತೆಯ ಹೂವನು ಅರಳಿಸಲಿಲ್ಲ’. ಇಂದಿಗೂ ಉಳ್ಳವರು ಮತ್ತು ಇಲ್ಲದವರ ನಡುವೆ ಕಂದಕವಿದೆ. ಸಮತೆಯ ಆಶಯಗಳೊಂದಿಗೆ ಜಾರಿಯಾದ ಸಂವಿಧಾನದ ಆಶಯಗಳನ್ನು ಆಳುವ ವರ್ಗವು ಗಾಳಿಗೆ ತೂರಿ ಸಮಾಜವನ್ನು ಕಲುಷಿತವಾಗಿಸಿವೆ.
ಇದಕ್ಕಾಗಿಯೆ ಅಂದು ಬಾಬಾಸಾಹೇಬ್ ಅಂಬೇಡ್ಕರ್‍ರು ‘ನನ್ನ ಸಂವಿಧಾನವು ಯತಾವತ್ತಾಗಿ ಜಾರಿಯಾಗುತ್ತದೆ ಎಂಬ ನಂಬಿಕೆ ಇಲ್ಲ’ ಎಂಬ ನೋವನ್ನು ತೋಡಿಕೊಂಡಿದ್ದರು. ಪ್ರತಿ ಬಾರಿ ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯೋತ್ಸವ ಬಂದಾಗಲೂ ನಮಗೆ ಸ್ವಾತಂತ್ರ್ಯವಾಗಲಿ, ಸವಲತ್ತಾಗಲಿ ತಲುಪಿದೆಯೇ, ಎಂಬ ಪ್ರಶ್ನೆ ಮೂಡದಿರದು. ದೀನ-ದುರ್ಬಲರು ಜೀವಿಸಲು ಇಂದಿಗೂ ಕಷ್ಟ ಪಡುತ್ತಿರುವ ಪರಿಸ್ಥಿತಿಗಳು ನಮ್ಮ ಸುತ್ತಲು ಕಾಣಸಿಗುತ್ತವೆ. ದೇಶ, ಧರ್ಮ, ವಸ್ತ್ರ ಹಾಗೂ ಗೋವು ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಮೇಲೆ ದಬ್ಬಾಳಿಕೆ ನೆಡೆಸಲಾಗುತ್ತಿದೆ. ಎಲ್ಲಾ ದೌರ್ಜನ್ಯ-ದಬ್ಬಾಳಿಕೆಗಳಿಗೆ ಅಲ್ಪಸಂಖ್ಯಾತ ಹಾಗೂ ದುರ್ಬಲ ಸಮುದಾಯಗಳು ಬಲಿಯಾಗುತ್ತಿರುವುದು ನೋವಿನ ಸಂಗತಿ.
ಅಮೃತ ಮಹೋತ್ಸವದ ನಿಮಿತ್ತ ದೇಶವನ್ನು ಉದ್ದೇಶಿಸಿ ಸುಧೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿಯವರು, ದೇಶದ ಯುವಜನರ ಸಬಲೀಕರಣಕ್ಕಾಗಿ ಸಂಕಲ್ಪಕ್ಕೆ ಕರೆ ನೀಡಿದರು. ಆದರೆ, ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲೆ ಅರಳಬೇಕಾದ ಯುವಕನ ಹರಣವಾದ ವಿಚಾರವು ಪ್ರಧಾನಿಯವರಿಗೆ ತಿಳಿದಿರಲಿಲ್ಲವೆ? ಅಥವಾ, ರಾಜಸ್ಥಾನವು ದೆಹಲಿಗೆ ಬಲು ದೂರವಿತ್ತೆ. ತಮ್ಮ ಕಣ್ಣುಗಳ ಮುಂದೆಯೇ ಇಷ್ಟೆಲ್ಲಾ ದೌರ್ಜನ್ಯಗಳು ಜರುಗುತ್ತಿದ್ದರು ಮಾರ್ಜಾಲ ನೀತಿಯನ್ನು ಭೋಧಿಸುವ ಪ್ರಧಾನಿ ಮೋದಿಯವರ ಕುಠಿಲತೆ ಜನರಿಗೆ ತಿಳಿಯುವುದಿಲ್ಲವೆ. ಇದಕ್ಕೂ ಮೀರಿ ದೇಶದ ಯಾವುದೋ ಹಳ್ಳಿಯಲ್ಲಿ ಜರುಗುವ ಘಟನೆಗೆ ಪ್ರಧಾನಿಯವರು ಏನು ಮಾಡ್ಯಾರು ಎಂದು ಸಮರ್ತಿಸುವ ವಿತಂಡವಾದಿಗಳು ಹೆಜ್ಜೆ ಹೆಜ್ಜೆಗೂ ಸಿಗುವುದುಂಟು.
ದೇಶದ ಯಾವುದೋ ಮೂಲೆಯಲ್ಲಿ ಪ್ರಧಾನಿವರನ್ನು ಹೊಗಳಿ ಬರೆದ ಟ್ವಿಟರ್ ಬರಹಗಳು ಪ್ರಧಾನಿಯವರಿಗೆ ತಲುಪುವುದಾದರೆ, ಸುದ್ದಿಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ವರದಿಯಾಗುವ ವಿಚಾರಗಳು ತಲುಪದಿರಲು ಸಾಧ್ಯವೇ. ಖಂಡಿತವಾಗಿ ಇಲ್ಲ, ಇದು ಜಾಣ ಕುರುಡಷ್ಟೆ. ದೌರ್ಜನ್ಯ-ದಬ್ಬಾಳಿಕೆಗಳಿಂದ ತಳ ಸಮುದಾಯದ ಉತ್ತಮ ಸ್ಥರಗಳಲ್ಲಿ ಗುರುತಿಸಿಕೊಂಡವರೂ ಹೊರತಾಗಿಲ್ಲವೆನ್ನಬಹುದು. ಇಂದರ್ ಮೇಘವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್‍ರವರು ತಮ್ಮ ಟ್ವಿಟರ್ ಖಾತೆಯಲ್ಲಿ ‘100 ವರ್ಷಗಳ ಹಿಂದೆ ತಮ್ಮ ತಂದೆಯಾದ ಜಗಜೀವನ್ ರಾಮ್ ರವರಿಗೂ ಶಾಲೆಯಲ್ಲಿ ಸವರ್ಣಿಯರಿಗೆ ಮೀಸಲಿರಿಸಿದ್ದ ಮಡಿಕೆಯಿಂದ ಕುಡಿಯಲು ನೀರು ಕೊಟ್ಟಿರಲಿಲ್ಲ, ಸ್ವತಂತ್ರ ಬಂದು 75 ವರ್ಷವಾದರೂ ಜಾತಿ ವ್ಯವಸ್ಥೆ ನಮ್ಮ ವಿರೋಧಿಯಾಗಿಯೇ ಉಳಿದಿದೆ’ ಎಂದು ಅವಲತ್ತಿಕೊಂಡಿದ್ದಾರೆ. ಮುಂದುವರೆದು ಮೀರಾ ಕುಮಾರ್‍ರವರು ತಮ್ಮ ತಂದೆಯನ್ನು ನೀನು ದೇಶದ ಸ್ವತಂತ್ರಕ್ಕಾಗಿ ಏಕೆ ಹೋರಾಡಿದೆ? ಈ ದೇಶ ನಮಗೇನು ನೀಡಿದೆ? ಎಂದು ಪ್ರಶ್ನಿಸಿದ್ದೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ನನ್ನ ಪ್ರಶ್ನೆಗೆ ಸ್ವತಂತ್ರ ನಂತರದ ಭಾರತವು ಜಾತಿರಹಿತ ಸಮಾಜವಾಗಲಿದೆ ಎಂಬ ಆಶಾಭಾವನೆಯನ್ನು ನನ್ನ ತಂದೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ಸಮಾಜವುÀ ದುರ್ಬಲ ಸಮುದಾಯಗಳನ್ನು ಜಾತಿಯ ಪೆಡಂಭೂvದಿಂದಾಗಿ ಸಮಾನ ಮನಸ್ಸಿನಿಂದ ಒಪ್ಪಿಕೊಳ್ಳುವುದಿಲ್ಲವೆಂಬುದು ಅರ್ಥವಾಗುತ್ತದೆ.
ಇತ್ತೀಚೆಗೆ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮುರವರ ಕಛೇರಿಯಲ್ಲಿ ಪೂಜಾ ಕೈಂಕರ್ಯಗಳು ಜರುಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಲ್ಲದೆ, ಅನೇಕರು ಆ ವಿಡಿಯೋವನ್ನು ಹಂಚಿಕೊಳ್ಳುವಾಗ ತಲೆಬರಹದಲ್ಲಿ ‘ಶುದ್ಧೀಕರಣ’ ಎಂಬ ಪದ ಬಳಕೆಯನ್ನು ಮಾಡಿರುವುದಿದೆ. ದೇಶದ ಮೊದಲ ಪ್ರಜೆಯಾದರೂ ಜಾತಿಗ್ರಸ್ಥ ಮನಸ್ಥಿತಿಯಿಂದಲೇ ಅವರನ್ನು ಕಾಣವುದು ಬಾಧಿಸುವಂತಹ ವಿಚಾರ. ಈ ರೀತಿಯ ಅಸಮಾನತೆ ಹಾಗೂ ಅನಿಷ್ಠಗಳ ಅರಿವು ರಾಷ್ಟ್ರಪತಿಗಳಿಗೆ ಇರಲಿಲ್ಲವೆಂದಲ.್ಲ ಒಂದು ಉನ್ನತ ಹುದ್ದೆಗೆ ಏರಬೇಕಾದರೆ ಎಲ್ಲಾ ರೀತಿಯ ಅವಮಾನಗಳಿಗೆ ರಾಜೀಯಾಗಬೇಕು ಎನ್ನುವುದು ಸಮಾಜದ ವಾಡಿಕೆಯಾಗಿದೆ. ಏಕೆಂದರೆ, ಸಮುದಾಯದ ಆಶಯಕ್ಕೆ ಧಕ್ಕೆಯಾದರೆ ಅದನ್ನು ವಿರೋಧಿಸುವ ಮನೋಧರ್ಮ ಎಲ್ಲರಲ್ಲೂ ಇರಬೇಕೆಂದೆನಿಲ್ಲವಲ್ಲ!. ಅಲ್ಲದೆ, ಎಲ್ಲರೂ ಕೆ.ಆರ್.ನಾರಾಯಣನ್ ಆಗಲು ಸಾಧ್ಯವೇ?. ದೇಶದ ಮೊದಲ ಪ್ರಜೆಯ ಪರಿಸ್ಥಿತಿಯೆ ಈಗಿರುವಾಗ ಇನ್ನೂ ಸಾಮಾನ್ಯ ಪ್ರಜೆಗಳ ಸ್ಥಿತಿ ವರ್ಣೀಸಲಸಾಧ್ಯ.
ಬಾಬಾಸಾಹೇಬ್ ಅಂಬೇಡ್ಕರ್‍ರು ವಿದ್ಯಾರ್ಥಿಯಾಗಿದ್ದಾಗ ಕುಡಿಯುವ ನೀರಿಗಾಗಿ ಎದುರಿಸಿದ್ದ ಪರಿಸ್ಥಿತಿಯನ್ನು ಇಂದಿಗೂ ದುರ್ಬಲ ಸಮುದಾಯಗಳು ಎದುರಿಸುತ್ತಿವೆ. ಹಾಗೆಯೆ, ಅಂಬೇಡ್ಕರ್‍ರು ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸಹೊದ್ಯೋಗಿಗಳಿಂದಲೂ ಕುಡಿವ ನೀರಿನ ನಿರಾಕರಣೆಯನ್ನು ಎದುರಿಸಿದ್ದರು. ಎಲ್ಲಾ ಅಸಮಾನತೆಗಳನ್ನು ಮೆಟ್ಟಿ ನಿಲ್ಲುವ ಮುನ್ನುಡಿಯಂತೆ ಮಾರ್ಚ್ 20 1927ರಲ್ಲಿ ಮಹಡ್ ಅಥವಾ ಚಾವ್ದಾರ್ ಕೆರೆ ಹೋರಾಟವನ್ನು ಬಾಬಾಸಾಹೇಬರು ನಡೆಸಿದ್ದು ಎಲ್ಲರಿಗೂ ತಿಳಿದಿದೆ. ಕೇವಲ ಕುಡಿಯುವ ನೀರಿಗೆ ಒಂದು ಜೀವವನ್ನು ಹರಣ ಮಾಡುವಷ್ಟು ಹೀನ ಮನಸ್ಸುಗಳು ನಮ್ಮ ನಡುವೆ ಬದುಕಿವೆ ಎಂದರೆ ನಾವೆಂತಹ ಸಮಾಜದಲ್ಲಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಹೀಗೆ ಪ್ರಶ್ನಿಸಿದರೆ ಇಲ್ಲಿ ನಿಮಗೆ ಬದುಕಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಮೂದಲಿಸುವ ಮನಸ್ಸುಗಳು ಇವೆ. ನಿರಂಕುಶಾಧಿಕಾರವಿರುವ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಪರಿಸ್ಥಿತಿ ಸುಭೀಕ್ಷವಾಗಿದೆ ಎಂದು ನುಡಿಯುವ ಭಕ್ತಗಣಗಳಿವೆ.
ದೇಶದಲ್ಲಿ ಜರುಗುತ್ತಿರುವ ದೌರ್ಜನ್ಯಗಳ ಅಂಕಿ ಅಂಶಗಳ ಕಡೆ ಲಕ್ಷ್ಯವಿತ್ತರೆ ವರ್ಷದಿಂದ ದೌರ್ಜನ್ಯ ಪ್ರಕರಣಗಳು ಏರುತ್ತಿವೆಯಾದರೂ ನೊಂದಾಯಿಸಿಕೊಳ್ಳುವ ಪ್ರಕರಣಗಳ ಸಂಖ್ಯೆ ಇಳಿಕೆಮುಖವಾಗಿವೆ. ಅಂದರೆ, ದುಷ್ಕøತ್ಯಗಳು ಕಡಿಮೆಯಾಗಿವೆ ಎಂದಲ್ಲ ಬದಲಿಗೆ ಪ್ರಕರಣಗಳನ್ನು ವ್ಯವಸ್ಥಿತವಾಗಿ ದಮನಮಾಡುತ್ತಿರುವ ವ್ಯವಸ್ಥೆ ನಮ್ಮದು. ಎಷ್ಟೋ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರೆ ಅಪರಾಧಿಗಳಾಗಿ ಮಾರ್ಪಟ್ಟಿರುವುದು ಕಾಣಸಿಗುತ್ತವೆ. ಭಾರತೀಯ ಬಂಧಿಖಾನೆ ಅಂಕಿ-ಅಂಶಗಳ 2020ರ ವರದಿಯನ್ವಯ 1,12,589 ಅಪರಾಧಿಗಳಿದ್ದು ಶೇ. 35%ರಷ್ಟು ಎಸ್.ಸಿ/ಎಸ್.ಟಿ ಸಮುದಾಯದ ಶೇ. 17%ರಷ್ಟು ಅಪರಾಧಿಗಳು ಮುಸ್ಲಿಂ ಸಮುದಾಯದವರಿದ್ದಾರೆ. ರಾಷ್ಟ್ರೀಯ ಅಪರಾಧಿ ದಾಖಲೆಗಳ ಸಂಸ್ಥೆಯ 2020ರ ವರದಿಯನ್ವಯ ದೇಶದಲ್ಲಿ ಜರಗುವ ದೌರ್ಜನ್ಯಗಳಲ್ಲಿ ಶೇ.25%ರಷ್ಟು(50291) ದಲಿತ ಸಮುದಾಯಗಳ ಮೇಲೆಯೆ ಜರುಗಿವೆ. ಸುಮಾರು 1.28 ಲಕ್ಷ ದೌರ್ಜನ್ಯ ಪ್ರಕರಣಗಳು ಮಕ್ಕಳ ಮೇಲೆ ಜರುಗಿರುವುದು ವಿಷಾದನೀಯ. ಒಟ್ಟಾರೆ, ಆರ್ಥಿಕವಾಗಿ ದುರ್ಬಲವಾದ ಸಮುದಾಯಗಳೆ ಅಪರಾಧಿಗಳಾಗಿರಲು ಆರ್ಥಿಕ ದುರ್ಬಲತೆ ಹಾಗೂ ಕಾನೂನಿನ ಅರಿವಿನ ಕೊರತೆ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭಾರತದಲ್ಲಿ ಹಣಬಲ ಹಾಗೂ ರಾಜಕೀಯ ಬಲವಿದ್ದವರಿಗೆ ದೊರಕುವ ನ್ಯಾಯವು ಇವೆರಡು ಇಲ್ಲದ ಸಾಮಾನ್ಯರಿಗೆ ದೊರಕುವುದಿಲ್ಲವೆಂಬುದು ನಾಣ್ನುಡಿಯಾಗಿದೆ. ಉನ್ನಾವೋ ಸಂತ್ರಸ್ತೆ, ಬಿಲ್ಕಿಸ್ ಬಾನು, ದಾನಮ್ಮ ಮೊದಲಾದ ಪ್ರಕರಣಗಳಲ್ಲಿ ದೊರೆತ ನ್ಯಾಯ ನಿರ್ಭಯ, ಹೈದರಾಬಾದ್ ದಿಶಾ ಪ್ರಕರಣಕ್ಕೆ ದೊರೆತ ನ್ಯಾಯಕ್ಕೆ ವಿರುದ್ಧವಾಗಿರವುದು ದಮನಿತ ಸಮುದಾಯಗಳ ಮೇಲೆ ಜರುಗುತ್ತಿರುವ ಅನ್ಯಾಯಗಳಿಗೆ ಸ್ಪಷ್ಟ ನಿದರ್ಶನವಾಗಿದೆ.
ನಮ್ಮ ನಡುವೆ ಎಷ್ಟೋ ಸಚಿವರು, ಸಂಸದರು ದುರ್ಬಲ ಸಮುದಾಯದವರಿದ್ದಾರೆ. ಯಾರೋಬ್ಬರು ಇಂತಹ ವಿಚಾರಗಳ ಬಗೆಗೆ ಧ್ವನಿಯೆತ್ತುವ ಗೋಜಿಗೆ ಹೋಗುವುದಿಲ್ಲ. ರಾಜಸ್ಥಾನದ ಜರುಗಿದ ಪ್ರಕರಣದಿಂದ ನೊಂದ ಅಲ್ಲಿನ ಕಾಂಗ್ರೆಸ್ ಶಾಸಕ ‘ಪನಚಂದ್ ಮೇಘವಾಲ್’ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ತಮ್ಮ ಪತ್ರದಲ್ಲಿ ದಲಿತ ಸಮುದಾಯಗಳಿಗೆ ಬಾಬಾಸಾಹೇಬರು ನೀಡಿದ್ದ ಸ್ಥಾನಮಾನಗಳು ಇಂದು ಉಳಿದಿಲ್ಲ. ಇಂತಹ ಕೃತ್ಯಗಳನ್ನು ನನ್ನಿಂದ ತಡೆಯಲಾಗಿಲ್ಲ ಆದ್ದರಿಂದ ಈ ಹುದ್ದೆಯಲ್ಲಿ ಮುಂದಿವರೆಯಲಿಚ್ಛಿಸುವುದಿಲ್ಲ ಎಂದು ಬರೆದಿದ್ದಾರೆ.
ಇದು ಒಬ್ಬ ಸಮುದಾಯದ ನಾಯಕರಾದವರಿಗೆ ಇರಬೇಕಾದ ಕನಿಷ್ಟ ಬಧ್ಧತೆಯಾಗಿದೆ. ಇದನ್ನು ಬಿಟ್ಟು ಕೇವಲ ರಾಜಕೀಯ ಲಾಭಕ್ಕಾಗಿ ಜನಾಂಗದ ನಾಯಕರೆಂದು ಬಿಂಬಿಸಿಕೊಂಡು ಸಮುದಾಯದ ಬವಣೆಯನ್ನು ನಿರ್ಲಕ್ಷಿಸುವುದು ನಾಯಕತ್ವವಾಗದು. ಇನ್ನೊಬ್ಬರ ದಾಸ್ಯಕ್ಕೆ ಒಳಗಾದ ನಾಯಕ ಎಂದೂ ತನ್ನ ಬಗ್ಗೆ ಸಮುದಾಯದ ಬಗ್ಗೆ ಧ್ವನಿ ಎತ್ತಲು ಸಕ್ತನಾಗಿರುವುದಿಲ್ಲ ಎಂಬುದು ಬಾಬಾಸಾಹೇಬರ ಕರೆಯಾಗಿತ್ತು.
ಒಟ್ಟಾರೆ, ಇನ್ನೆಷ್ಟೆ ಸ್ವಾತಂತ್ರೋತ್ಸವಗಳು ಬಂದರು ಸಮಾಜದ ಜಂಜಾಟದಲ್ಲಿ ಗತಿಸಿಹೋಗುತ್ತವೆ. ಏಕೆಂದರೆ, ಜನರು ಸದಾ ತಾಜಾ ಸುದ್ಧಿಗಳನ್ನೇ ಎದುರು ನೋಡುತ್ತಿರುತ್ತಾರೆ. ದೇಶದ ಅಭಿವೃದ್ಧಿಯತ್ತ ಕೊಂಡೊಯ್ಯುವ ಪೊಳ್ಳು ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದ ನಾಯಕರು ಕೇವಲ ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಲ್ಲಿ ತೊಡಗುವ ಮುಖೇನ ದೇಶವನ್ನು ಮಾರಲು ಹೊರಟಿರುವ ಸಂಧರ್ಭದಲ್ಲಿ ಜನರ ಗೋಳು ಕೇಳುವರ್ಯಾರು. ಹಾಗೇನಾದರೂ ಪ್ರಶ್ನಿಸಿದರೆ ಹಿಂದಿನ ಸರ್ಕಾರವನ್ನು ನೀವೇಕೆ ಪ್ರಶ್ನಿಸಲಿಲ್ಲ, ಎಲ್ಲಾ ರಾಜಕಾರಣಿಗಳೂ ಅಷ್ಟೆಯೇ ಎಂಬ ಪುಂಕಾನುಪುಂಕವಾದ ಮಾತುಗಳು ಕೇಳಿಬರುತ್ತವೆ. ಸ್ವಾತಂತ್ರ್ಯ ಹಾಗೂ ಸಂವಿಧಾನ ಬರುವ ಮೊದಲಿದ್ದ ಸಂದರ್ಭ, ಸನ್ನಿವೇಶಗಳು ಇಂದಿಗೂ ಮಾರ್ಪಾಡಾದ ರೂಪದಲ್ಲಿವೆ. ಏಕೆಂದರೆ ನಾವು ಡಿಜಿಟಲ್ ಇಂಡಿಯಾದಲ್ಲಿ ಬದುಕುತ್ತಿದ್ದೇವೆ ಅಲ್ಲವೆ? ಅವುಗಳನ್ನೂ ಗುರುತಿಸಲು ಸಂವೇದನೆಯ ಮಸೂರಬೇಕಷ್ಟೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka