ದೇವರ ಮೂರ್ತಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ದಂಡ: ದಂಡ ಕಟ್ಟದಿದ್ದರೆ ಗ್ರಾಮದಿಂದ ಬಹಿಷ್ಕಾರ!

ಕೋಲಾರ: ಗ್ರಾಮ ದೇವತೆಯ ಮೆರವಣಿಗೆಯ ವೇಳೆ ದಲಿತ ಕುಟುಂಬಕ್ಕೆ ಸೇರಿದ ಬಾಲಕನೋರ್ವ ದೇವರ ಮೂರ್ತಿ ಮುಟ್ಟಿದಕ್ಕೆ ಆತನ ಕುಟುಂಬಕ್ಕೆ 60 ಸಾವಿರ ದಂಡ ಕಟ್ಟುವಂತೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚೇತನ್ ಎಂಬ ಬಾಲಕನ ಕುಟುಂಬಕ್ಕೆ ಜಾತಿ ಪೀಡೆಗಳು ಬೆದರಿಕೆ ಹಾಕಿದ್ದು, ಇದರಿಂದಾಗಿ ಬಾಲಕನ ಕುಟುಂಬ ಕಂಗಾಲಾಗಿದೆ.
ಮೂರು ದಿನಗಳ ಹಿಂದೆ ಹುಳ್ಳೇರಹಳ್ಳಿ ಗ್ರಾಮದಲ್ಲಿ ದೇವಾಲಯವೊಂದನ್ನ ಪ್ರತಿಷ್ಟಾಪನೆ ಮಾಡಲಾಗಿತ್ತು. ಈ ಹಿನ್ನಲೆ ಗ್ರಾಮದಲ್ಲಿ ಭೂದೇವಿಯ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ರು. ಉತ್ಸವದ ವೇಳೆ ದಲಿತ ಕುಟುಂಬಕ್ಕೆ ಸೇರಿದ ಚೇತನ್ ಎಂಬ ಯುವಕ ಉತ್ಸವದ ವೇಳೆ ದೇವರನ್ನ ಮುಟ್ಟಿದ ಎಂಬ ಕಾರಣ ಮುಂದಿಟ್ಟುಕೊಂಡು ಆತನಿಗೆ ಬೆದರಿಕೆ ಹಾಕಲಾಗಿದೆ.
ದಂಡ ಕಟ್ಟದಿದ್ದರೆ ಬಾಲಕನ ಕುಟುಂಬವನ್ನು ಊರಿನಿಂದ ಬಹಿಷ್ಕರಿಸುವುದಾಗಿ ಪುಂಡರು ಬೆದರಿಕೆ ಹಾಕಿದ್ದು, ಇದರಿಂದಾಗಿ ಬಾಲಕನ ಕುಟುಂಬವನ್ನು ಭಯ ಭೀತಗೊಳಿಸಲಾಗಿದೆ. ಇನ್ನೊಂದೆಡೆ ಘಟನೆ ಸಂಬಂಧ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಡಿಸಿದ್ದು, ಸರ್ಕಾರ ಏನು ಮಾಡ್ತಿದೆ? ಎಂದು ಪ್ರಶ್ನಿಸುತ್ತಿದ್ದಾರೆ. “ನಿಮ್ಮ ದೇವರಿಗೆ ದಲಿತರು ಆಗುವುದಿಲ್ಲ, ದಲಿತರು ಕಟ್ಟುವ ದಂಡದ ದುಡ್ಡು ಆಗುತ್ತಾ?” ಎಂದು ಆಕ್ರೋಶದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಪೊಲೀಸರ ವೈಫಲ್ಯದಿಂದಾಗಿ ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ. ಅಸ್ಪೃಷ್ಯತೆ ಆಚರಣೆಯಂತಹ ಘಟನೆಗಳು ನಡೆದಾಗ ಪೊಲೀಸರು ರಾಜಿ ಮೂಲಕವೇ ಪ್ರಕರಣಗಳನ್ನು ಮುಗಿಸಲು ಮುಂದಾಗುತ್ತಾರೆ. ಇದರಿಂದಾಗಿ ಆರೋಪಿಗಳ ರಕ್ಷಣೆ ಮಾಡುವಂತಹ ಕೆಲಸಗಳು ನಡೆಯುತ್ತವೆ ಎನ್ನುವ ಆಕ್ರೋಶಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿವೆ.
ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ ಅಂತ ಅಮೃತ ಮಹೋತ್ಸವ ಆಚರಣೆ ಮಾಡಿದರೂ, ಈಗಲೂ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಆಳುವ ಸರ್ಕಾರಗಳು ಅಸ್ಪೃಷ್ಯತೆ ತಡೆಗೆ ಕಠಿಣವಾದ ಕಾನೂನನ್ನು ತರುವ ಅಗತ್ಯವಿದೆ ಎನ್ನುವ ಮಾತುಗಳು ಇದೀಗ ವ್ಯಾಪಕವಾಗಿ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka