ಅಸಮಾನ ಸಮಾಜ ಸೃಷ್ಟಿಸಿದ ದೇವರಿಗೆ ಕಲ್ಲೆಸೆದ ಅಲೆಮಾರಿ ಯುವಕ!
ನವದೆಹಲಿ: ಈ ಯುವಕನ ಕೆಲಸ ಕಾನೂನು ಬಾಹಿರವಾಗಿದ್ದರೂ, ನ್ಯಾಯಯುತವಾದದ್ದೇ ಬಿಡಿ ಎಂಬಂತಾಗಿದೆ. 28 ವರ್ಷದ ಯುವಕನೋರ್ವ ದೇವರ ಮೇಲೆ ತನ್ನ ಮುಗ್ಧ ಸಿಟ್ಟು ತೋರಿಸಲು ಹೋಗಿ ಜೈಲುಪಾಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮನುಷ್ಯರ ಹಣೆಬರಹ ಬರೆಯುವುದು ದೇವರು ಎಂದು ಪಂಡಿತರುಗಳು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಇದು ಸಾರ್ವಜನಿಕವಾಗಿ ಎಲ್ಲರು ಮಾತನಾಡುವಾಗ ಸಾಮಾನ್ಯವಾಗಿ ದೇವರು ಬರೆದಂತೆ ಆಗುವುದು ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಇಂತಹ ಪುಂಗಿಗಳನ್ನು ಸತ್ಯ ಎಂದು ನಂಬಿರುವ ಓರ್ವ ಮುಗ್ಧ ಯುವಕ ದೇವರ ಮೇಲೆ ತನ್ನ ಕೋಪ ಪ್ರದರ್ಶಿಸಿದ್ದಾನೆ.
28 ವರ್ಷ ವಯಸ್ಸಿನ ವಿಕ್ಕಮಲ್, ತನಗೆ ಒಂದು ಒಳ್ಳೆಯ ಜೀವನ ಇರಬೇಕಿತ್ತು ಎಂದು ಅಂದುಕೊಂಡಿದ್ದಾನೆ. ಆದರೆ ಆತ ಅಲೆಮಾರಿಯಾಗಿದ್ದ. ಕಸ ಹಾಯ್ದುಕೊಂಡು ಜೀವನ ನಡೆಸುತ್ತಿದ್ದ ಆತನಿಗೆ ಸಹಜವಾಗಿಯೇ ದೇವರ ಮೇಲೆ ಕೋಪ ಬಂದಿದೆ. ತನ್ನ ಈ ದುರಾವಸ್ಥೆಗೆ ದೇವರೇ ಕಾರಣ ಎಂದು ಕೋಪಗೊಂಡ ಆತ ದೇವಸ್ಥಾನಕ್ಕೆ ಕಲ್ಲೆಸೆದಿದ್ದು, ನಿನ್ನಿಂದಾಗಿ ನನ್ನ ಬದುಕು ನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಶುಕ್ರವಾರ ರಾತ್ರಿ ದೇವಸ್ಥಾನದಲ್ಲೇ ತಂಗಿದ್ದ ರಂಜೀತ್ ಫತಾಕ್ ಹೆಸರಿನ ವ್ಯಕ್ತಿಯಿಂದ ಈ ವಿಚಾರ ತಿಳಿದುಬಂದಿದೆ. ಅವರ ದೂರಿನ ಆಧಾರದ ಮೇಲೆ ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ವಿಕ್ಕಿ ದೇವಸ್ಥಾನದ ಹೊರಗಡೆ ನಿಂತು ಕಲ್ಲು ಎಸೆದಿರುವುದು ಅದರಲ್ಲಿ ಸೆರೆಯಾಗಿದ್ದು, ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.