ದೆವ್ವ ಹಿಡಿದಿದೆ ಎಂದು ಭಾವಿಸಿ 7 ವರ್ಷದ ಬಾಲಕನನ್ನು ತಾಯಿ, ಚಿಕ್ಕಮ್ಮಂದಿರು ಹೊಡೆದೇ ಕೊಂದರು!
ಚೆನ್ನೈ: ಬಾಲಕನಿಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿ 7 ವರ್ಷದ ಮಗುವನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿ ತಿರುವಣ್ಣಾಮಲೈ ಜಿಲ್ಲೆಯ ಕಣ್ಣಮಂಗಲಂನ ಅರಾನಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ತಿಲಕ್ವತಿ ಹಾಗೂ ಆಕೆಯ ಸಹೋದರಿಯರಾದ ಭಾಗ್ಯಲಕ್ಷ್ಮೀ ಮತ್ತು ಕವಿತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. 7 ವರ್ಷದ ಬಾಲಕ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಆದರೆ, ಅಂಧ ವಿಶ್ವಾಸಿಗಳಾಗಿದ್ದ ಮನೆಯವರು, ಆತನಿಗೆ ಯಾವುದೋ ದೆವ್ವದ ಬಾಧೆ ಇದೆ ಎಂದು ಅರಿತು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಾಲಕನ ದೇಹಕ್ಕೆ ದೆವ್ವ ಹೊಕ್ಕಿದೆ ಎಂದು ಭಾವಿಸಿ ಅದನ್ನು ಬಿಡಿಸಲು ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ಮೂವರು ಆರೋಪಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಾಲಕನ ಮೃತದೇಹವನ್ನು ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನೂ ಮೂವರು ಆರೋಪಿಗಳನ್ನು ಮಾನಸಿಕ ಅಸ್ವಸ್ಥರು ಎಂದು ಹೇಳಲಾಗಿದೆ. ಹೀಗಾಗಿ ಇವರಿಗೆ ಶಿಕ್ಷೆಯಾಗುವುದು ಅನುಮಾನ ಎಂಬ ಶಂಕೆಗಳು ವ್ಯಕ್ತವಾಗಿದೆ.