ಧರ್ಮದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ | ರಾಮಮಂದಿರಕ್ಕೆ ಹಣ ಸಂಗ್ರಹ ವಿರುದ್ಧ ಕುಮಾರಸ್ವಾಮಿ ಕಿಡಿ
ಬೆಂಗಳೂರು: ಧರ್ಮದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಯಾರೋ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ರಾಮಮಂದಿರಕ್ಕೆ ಹಣ ಸಂಗ್ರಹಣೆ ಮಾಡಲು ಸಂಘಟನೆಗಳಿಗೆ ಅಧಿಕಾರ ನೀಡಿದ್ದು ಯಾರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರಿನಲ್ಲಿ ಪ್ರಾದರ್ಶಕತೆ ಇಲ್ಲದೇ ಕೆಲವರು ಲೂಟಿ ಮಾಡುತ್ತಿದ್ದಾರೆ. ಮಂದಿರ ಕಟ್ಟುತ್ತೇವೆ ಎಂದು ಹಣ ದುರುಪಯೋಗ ಮಾಡುತ್ತಿದ್ದಾರೆ. ಇದನ್ನು ನಾನು ವಿರೋಧಿಸುತ್ತೇನೆ. ನಾನು ರಾಮನಿಗೆ ಅವಮಾನ ಮಾಡಿ ಒಂದು ಪದವನ್ನೂ ಮಾತನಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರಾಮಮಂದಿರ ನಿರ್ಮಾಣ ವಿಚಾರದಲ್ಲಿ ನನ್ನ ವಿರೋಧ ಇಲ್ಲ. ನಾವು ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಾಣಗಳಿಗೆ ಕೂಡ ಹಣ ನೀಡಿದ್ದೇವೆ. ಆದರೆ ನಮ್ಮ ಮನೆಗೆ ಮೂವರು ಅಮಾಯಕರು ಬಂದಿದ್ದರು. ಒಂದು ಹೆಣ್ಣು ಮಗಳು ಬಂದಿದ್ದಳು ಅವರು ಹೇಳುವುದನ್ನು ನಾನು ಲೈಟಾಗಿ ತೆಗೆದುಕೊಂಡೆ. ದೇಶದ ಪ್ರತೀಕ ಎಂದು ಹೇಳಿ ನನ್ನ ಮೈಮೇಲೆ ಬಿದ್ದಳು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದ ಅವರು. ಇದಕ್ಕೆ ಕೂಡ ಆನ್ ಲೈನ್ ನಲ್ಲಿಯೇ ಹಣ ಸಂಗ್ರಹಿಸಬಹುದಲ್ಲವೇ? ಯಾಕೆ ಬೀದಿಯಲ್ಲಿ ಹಣ ಸಂಗ್ರಹಣೆ ಆಗುತ್ತಿದೆ? ಅಧಿಕೃತವಾಗಿ ಯಾರು ಇದ್ದಾರೋ ಅವರು ಹಣ ಸಂಗ್ರಹಕ್ಕೆ ಬರಲಿ, ಒಂದಲ್ಲ ಎರಡು ಬಾರಿ ಬೇಕಾದರೂ ಕೊಡೋಣ. ನನ್ನದು ತಾಯಿ ಹೃದಯ ಎಂದು ಕುಮಾರಸ್ವಾಮಿ ಹೇಳಿದರು.
ರಾಮನ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಲಾಗುತ್ತಿದೆ. ಈ ಹಣಕ್ಕೆ ಲೆಕ್ಕ ಕೊಡುವವರು ಯಾರು? ನಾವು ಇದನ್ನು ಪ್ರಶ್ನಿಸಿದರೆ ಪ್ರಚಾರಕ್ಕೆ ಹೇಳಿಕೆ ಕೊಡುತ್ತಿದ್ದಾರೆ ಎನ್ನುತ್ತಿದ್ದಾರೆ. ರಾಮನ ಹೆಸರಿನಲ್ಲಿ ನಾವು ರಾಜಕೀಯ ಮಾಡಿಲ್ಲ, ಧರ್ಮದ ಹೆಸರಿನಲ್ಲಿ ಹೀನಾಯ ರಾಜಕಾರಣ ಮಾಡುತ್ತಿಲ್ಲ, ಧರ್ಮದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅದನ್ನೂ ನಾವು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.