ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಥಿಕ ಸಬಲೀಕರಣಕ್ಕೆ ಪೂರಕ: ಸುಚಿತಾ ಗುಪ್ತ
ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಕಾರ್ಯಕ್ರಮಗಳು ಗ್ರಾಮೀಣ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ ಎಂದು ನೇಶನಲ್ ಇನ್ಸೂರೆನ್ಸ್ ಕಂಪೆನಿಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕಿ ಸುಚಿತಾ ಗುಪ್ತ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆರೋಗ್ಯ ರಕ್ಷಾ ತುರ್ತು ಸಹಾಯ ನಿಧಿ ವಿತರಿಸಿ ಮಾತನಾಡಿದರು.
ನೇಶನಲ್ ಇನ್ಸೂರೆನ್ಸ್ ಕಂಪೆನಿಯಿಂದ ಆರೋಗ್ಯ ವಿಮೆಗೆ ಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಇಂದಿನ ದಿನಗಳಲ್ಲಿ ಅರೋಗ್ಯ ಸೇವೆ ಅತ್ಯಂತ ದುಬಾರಿಯಾಗಿದ್ದು ಅದರಿಂದಾಗಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಬೇಕು. ವಿಮಾ ಸೌಲಭ್ಯದ ಬಗ್ಯೆ ಸವಿವರ ಮಾಹಿತಿ, ತಿಳುವಳಿಕೆ ಎಲ್ಲರಿಗೂ ಇಂದು ಅನಿವಾರ್ಯವಾಗಿದೆ ಎಂದರು.
ಅನಿರೀಕ್ಷಿತ ಆಪತ್ತು ಬಂದಾಗ, ಆರೋಗ್ಯದಲ್ಲಿ ವ್ಯತ್ಯಾಯವಾದಾಗ ವಿಮೆ ನಮಗೆ ರಕ್ಷಣೆ ಮತ್ತು ಭರವಸೆಯನ್ನು ನೀಡುತ್ತದೆ. ಆಧುನಿಕ ವೈದ್ಯಕೀಯ ಸವಲತ್ತುಗಳ ಸದುಪಯೋಗ ಪಡೆದು, ವಿಮೆ ಮಾಡುವುದರ ಮೂಲಕ ನಮ್ಮನ್ನು ರಕ್ಷಣೆ, ಮಾಡಿಕೊಳ್ಳಬಹುದು. ವಿಮೆಯ ವ್ಯವಹಾರದಲ್ಲಿ ಲಾಭ ಮುಖ್ಯ ಅಲ್ಲ ಸೇವಾ ಮನೋಭಾವದೊಂದಿಗೆ ಹಲವು ವಿಮಾ ಕಂಪೆನಿಗಳು ಗ್ರಾಮಾಭಿವೃದ್ದಿ ಯೋಜನೆಯೊಂದಿಗೆ ಸೇರಿ ಗ್ರಾಮೀಣ ಜನರಿಗೆ ಸೇವೆ ನೀಡುತ್ತಿದೆ ಎಂದರು.
ಮಳೆ ಹಾಗೂ ಬಿಸಿಲಿನಿಂದ ಕೊಡೆ ನಮಗೆ ರಕ್ಷಣೆ ನೀಡುವಂತೆ ವಿಮೆ ಕೂಡಾ ಆಪತ್ತು ಬಂದಾಗ, ಅನಾರೋಗ್ಯ ಪೀಡಿತರಾದಾಗ ರಕ್ಷಣೆ ನೀಡುತ್ತದೆ. ಆದುದರಿಂದ ಸಂಕೋಚವಿಲ್ಲದೆ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಬೇಕು ಎಂದು ಅವರು ಸಲಹೆ ನೀಡಿದರು.
ಕೊರೊನಾ ಸಂದರ್ಭದಲ್ಲಿ ನಾಲ್ಕು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಮೆಶಿನ್ ನೀಡಿದ್ದು, ಈ ವರ್ಷ ಇನ್ನೂ ಮೂರು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಮೆಶಿನ್ ನೀಡಲಾಗುವುದು.
ಆರೋಗ್ಯ ವಿಮೆ ಮಾಡಿಸಿದವರಿಗೆ ಉಜಿರೆಯಲ್ಲಿ ಮತ್ತು ಧಾರವಾಡದಲ್ಲಿ ಇರುವ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 461 ಆಸ್ಪತ್ರೆಗಳಲ್ಲಿ ಆರೋಗ್ಯ ವಿಮೆ ಮಾಡಿಸಿದವರಿಗೆ ಚಿಕಿತ್ಸೆ ಪಡೆಯಲು ಅವಕಾಶವಿದ್ದು 33 ಜಿಲ್ಲೆಗಳಲ್ಲಿ ಆರೋಗ್ಯ ವಿಮೆ ಈಗಾಗಲೆ ಜಾರಿಯಲ್ಲಿದೆ. ಎರಡೂವರೆ ಕೋಟಿ ರೂ. ಮೊತ್ತವನ್ನು ಗಂಭೀರ ಅನಾರೋಗ್ಯ ನಿಧಿಗಾಗಿ ಮೀಸಲಿಡಲಾಗಿದೆ. ಸಂಪೂರ್ಣ ಸುರಕ್ಷಾ ವಿಮೆಗೆ 8,74,130 ಮಂದಿ ಹಾಗೂ ಆರೋಗ್ಯ ವಿಮೆಗೆ 49,25,377 ಮಂದಿ ಸೇರಿದಂತೆ ಒಟ್ಟು 57,99,507 ಮಂದಿ ಸದಸ್ಯರು ಈಗಾಗಲೆ ನೋಂದಾವಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ನೇಶನಲ್ ಇನ್ಸೂರೆನ್ಸ್ ಕಂಪೆನಿಯ ಮಹಾಪ್ರಬಂಧಕ ಪೀಟರ್ ಚಿತ್ತರಂಜನ್, ಡಿ.ಜಿ.ಎಂ. ಕೇಶವ ಮೋಹನ್ ಮತ್ತು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕಿ ಪುಷ್ಪಲತಾ, ಕೆ.ಪಿ. ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಸ್ವಾಗತಿಸಿದರು. ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಶೋತ್ತಮ ಪಿ.ಕೆ. ಧನ್ಯವಾದವಿತ್ತರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka