ದಲಿತ ಯುವಕನ ಹತ್ಯೆ ಪ್ರಕರಣ: ನಾಳೆ ಧರ್ಮಸ್ಥಳ ಪೊಲೀಸ್ ಠಾಣಾ ಚಲೋ ಜಾಥಾ
ಬೆಳ್ತಂಗಡಿ: ಶಿಬಾಜೆಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ, ಆರೋಪಿಗಳನ್ನು ಹಾಗೂ ಆರೋಪಿಗಳನ್ನು ರಕ್ಷಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣಾ ಚಲೋ ಕಾರ್ಯಕ್ರಮ ಸೋಮವಾರ(ಜನವರಿ 23) ನಡೆಯಲಿದೆ.
ಶಿಬಾಜೆಯಲ್ಲಿ ಶ್ರೀಧರ ಎಂಬ ದಲಿತ ಯುವಕನ ಕೊಲೆಯಾಗಿದ್ದು ಕೊಲೆ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಕಾರ್ಯಕ್ಕೆ ತನಿಖಾಧಿಕಾರಿ ಬಂಟ್ವಾಳ ಡಿ.ವೈ ಎಸ್.ಪಿ ಮುಂದಾಗಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಬೇಕು, ಕೊಲೆಯಾದ ಯುವಕ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು, ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದ ಶಿಬಾಜೆ ಗ್ರಾಮ ಪಂಚಾಯತು ಅಧ್ಯಕ್ಷನ ವಿರುದ್ದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
ಧರ್ಮಸ್ಥಳ ನೇತ್ರಾವತಿಯಿಂದ ಪೊಲೀಸ್ ಠಾಣೆಯ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ಠಾಣೆಯ ಎದುರು ಪ್ರತಿಭಟನೆ ನಡೆಯಲಿದೆ. ದಲಿತ ಸಂಘಟನೆಗಳ ಮುಖಂಡರುಗಳಾದ ಮಾವಳ್ಳಿ ಶಂಕರ್, ಎಂ.ದೇವದಾಸ್, ಚಂದು ಎಲ್. ಸೇರಿದಂತೆ ಹಲವರು ಮುಖಂಡರುಗಳು ಭಾಗವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ರ್ಯಾಲಿಗೆ ಚಾಲನೆ ಸಿಗಲಿದೆ. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw