ಕನ್ನಡದಲ್ಲಿ ಒಳ್ಳೆಯ ಓದುಗರು, ಪ್ರೇಕ್ಷಕರನ್ನು ರೂಪಿಸುವ ಕೆಲಸ ಮಾಡಬೇಕಿದೆ: ನಿರ್ದೇಶಕ ಪಿ.ಶೇಷಾದ್ರಿ

ಬೆಳ್ತಂಗಡಿ; ಕನ್ನಡದಲ್ಲಿ ಒಳ್ಳೆಯ ಓದುಗರನ್ನು, ಪ್ರೇಕ್ಷಕರನ್ನು ರೂಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಹಿತ್ಯ ಸಮ್ಮೇಳನದ 90ನೆಯ ಅಧಿವೇಶನದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಉತ್ತಮ ಅಭಿರುಚಿಯಿರುವ ಓದುಗರನ್ನು ಹಾಗೂ ಪ್ರೇಕ್ಷಕರನ್ನು ರೂಪಿಸುವಲ್ಲಿ ನಾವು ಎಡವಿದ್ದೇವೆ ಮೊದಲು ಒಳ್ಳೆಯ ಅಭಿರುಚಿಗಳನ್ನು ರೂಪಿಸಿದರೆ ಆಗ ಉತ್ತಮ ಕೃತಿಗಳು, ಸಿನಿಮಾಗಳು ಬರಲು ಸಾಧ್ಯವಿದೆ ಎಂದರು. ನಾವು ಇಂದು ಒಂದು ಸಂದಿಗ್ದ ಕಾಲದಲ್ಲಿದ್ದೇವೆ ಎಂದರು.
ನಮ್ಮಲ್ಲಿ ಇಂದು ಎಲ್ಲರನ್ನೂ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿದೆ. ದೇಶದಲ್ಲಿನ ಪ್ರತಿಯೊಬ್ಬ ಸಾಧಕರನ್ನೂ ಜಾತಿಗೆ ಧರ್ಮಕ್ಕೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿದೆ. ಇದೊಂದು ದುರಂತವಾಗಿದೆ ಎಂದ ಅವರು ಸಾಧನೆ ಮಾಡಿದವರೆಲ್ಲರೂ ನಮ್ಮವರಾಗಬೇಕು ಅದಕ್ಕೆ ಇಂತಹ ಎಲ್ಲರನ್ನೂ ಒಟ್ಟು ಸೇರಿಸುವ ಸಮ್ಮೇಳನಗಳು ನಡೆಯಬೇಕಾದ ಅನಿವಾರ್ಯತೆ ಇದೆ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರಿನ ಹಿರಿಯ ವಿದ್ವಾಂಸರಾದ ಡಾ.ಹೆಚ್.ವಿ. ನಾಗರಾಜ ರಾವ್ ಸಾಹಿತ್ಯ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ, ಅದನ್ನು ಮನುಷ್ಯನಿಂದ ಬೇರ್ಪಡಿಸಲಾಗದು ಎಂದರು.
ಸಾಹಿತ್ಯ ಎಂದಿಗೂ ನಾಶಪಡಿಸುವ ಕಾರ್ಯವನ್ನು ಮಾಡಬಾರದು ಅದು ಮನಸ್ಸನ್ನು ಅರಳಿಸುವ ಕುತೂಹಲ ಕೆರಳಿಸುವಂತಿರಬೇಕು ಎಂದರು.
ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಕೃತಿಗಳು ಬಂದಿದೆ. ಜಗತ್ತಿನ ಯಾವುದೇ ಭಾಷೆಗಳಿಂದ ಕಡಿಮೆಯಿಲ್ಲದ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಬಂದಿದೆ ಎಂದು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂದಿನ ದಿನಗಳಲ್ಲಿ ಸಾಹಿತ್ಯದ ಪರಿಭಾಷೆ ಬದಲಾಗಿದೆ. ಮುದ್ರಿತ ಪುಸ್ತಕಗಳನ್ನು ಕೊಂಡುಕೊಳ್ಳುವವರು ಕಡಿಮೆಯಾಗಿದ್ದಾರೆ ಅವುಗಳ ಸ್ಥಾನವನ್ನು ಡಿಜಿಟಲ್ ಮಾದ್ಯಮ, ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಗಳು ಪಡೆದಿದೆ. ಆ ಮೂಲಕ ಸಾಹಿತ್ಯ ರಚನೆಯಾಗುತ್ತಿದ್ದು ಯುವ ಪೀಳಿಗೆ ಅವುಗಳತ್ತ ಆಕರ್ಷಿತರಾಗಿ ಓದುತ್ತಿರುವುದು ಸಂತಸದ ವಿಚಾರವಾಗಿದೆ. ಯುವ ಪೀಳಿಗೆಯನ್ನು ಮತ್ತೆ ಮುದ್ರಿತ ಸಾಹಿತ್ಯದೆಡೆಗೆ ಕರೆತರುವ ಪ್ರಯತ್ನವನ್ನು ಮಾಡಬೇಕಾಗಿದೆ ಅದಕ್ಕಾಗಿ ಹೆಚ್ಚು ವಾಸ್ತವಿಕವಾದ ಲೇಖನಗಳು, ಸಣ್ಣ ಕಥೆಗಳು, ಹನಿಗವನಗಳು, ಹಾಸ್ಯ ಲೇಖನಗಳು ಸೇತುಬಂಧದಂತೆ ಕಾರ್ಯ ನಿರ್ವಹಿಸುತ್ತದೆ. 500, 600ಪುಟಗಳ ಬೃಹತ್ ಗ್ರಂಥಗಳ ರಚನೆಗಿಂತ ಸಂಕ್ಷಿಪ್ತವಾದ ಪುಸ್ತಕಗಳು ಈಗಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ ಎಂದರು.
ಸಮ್ಮೇಳನದಲ್ಲಿ ಸಾಹಿತ್ಯದಿಂದ ವ್ಯಕ್ತಿತ್ವ ನಿರ್ಮಾಣ ಎಂಬ ವಜಚಾರದ ಬಗ್ಗೆ ಸತ್ಯೇಶ್ ಎನ್.ಬೆಳ್ಳೂರು ಅವರು, ಸಾಹಿತ್ಯ ಮತ್ತು ಮಾಧ್ಯಮ ವಜಚಾರದ ಬಗ್ಗೆ ರವೀಂದ್ರ ಭಟ್ಟ ಐನಕ್ಕೆ ಅವರೂ, ಸಾಹಿತ್ಯ ಹಾಗೂ ಸಾಮರಸ್ಯ ಎಂಬ ವಿಚಾರದ ಬಗ್ಗೆ ಡಾ.ಗೀತಾ ವಸಂತ ಅವರು ಪ್ರಬಂಧ ಮಂಡಿಸಿದರು.
ಡಿ.ಹರ್ಷೇಂದ್ರ ಕುಮಾರ್ ಉಪನ್ಯಾಸಕರನ್ನು ಸನ್ಮಾನಿಸಿದರು. ಡಿ.ಶ್ರೇಯಸ್ ಕುಮಾರ್ ಹಾಗೂ ಪೂರಣ್ ವರ್ಮ ಅವರು ಅಧ್ಯಕ್ಷರ ಹಾಗೂ ಉದ್ಘಾಟಕರ ಸನ್ಮನ ಪತ್ರ ವಾಚಿಸಿದರು. ಡಾ.ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ದಿವಾ ಕೊಕ್ಕಡ ವಂದಿಸಿದರು.
ಈ ಸಂದರ್ಭದಲ್ಲಿ ಡಾ. ಹೆಗ್ಗಡೆಯವರ ಬರಹಗಳ ಸಂಗ್ರಹ ಧರ್ಮದರ್ಶನ ಗ್ರಂಥ ಬಿಡುಗಡೆಗೊಳಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದ್ದು ನಾಡಿಲ್ಲೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಜಾನಪದ ಕಲಾವಿದರು ಆಗಮಿಸಿದ್ದು ತಮ್ಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಜನರೇ ತುಂಬಿ ಹೋಗಿದ್ದಾರೆ. ಗೌರಿ ಮಾರುಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka