ಧಾರ್ಮಿಕ ಸಂಕೇತಗಳೂ ಮತಾಧಾರಿತ ಅಸ್ಮಿತೆಯೂ
ಮಾನವತೆಯ ಆಗರವಾಗಬೇಕಾದ ಶಾಲೆಗಳು ಅಸ್ಮಿತೆಗಳ ಸಂಘರ್ಷದ ತಾಣಗಳಾಗಬೇಕೇ ?
- ನಾ ದಿವಾಕರ
ಭಾರತವನ್ನು ಮತ್ತು ಭಾರತೀಯರ ಮನಸುಗಳನ್ನು ದಟ್ಟವಾಗಿ ಆವರಿಸಿರುವ ಸಾಂಸ್ಕೃತಿಕ ರಾಜಕಾರಣದ ಸೂಕ್ಷ್ಮ ನೆಲೆಗಳು ಈಗ ಸಮಸಮಾಜದ ಅಡಿಪಾಯವನ್ನೇ ಅಲುಗಾಡಿಸುವಂತೆ ಕಾಣುತ್ತಿದೆ. ಮತ, ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಜನಸಾಮಾನ್ಯರ ನಿತ್ಯ ಜೀವನದಲ್ಲಿ ಬಹುದೊಡ್ಡ ತೊಡಕಿನಂತೆ ಕಾಣತೊಡಗಿವೆ. ಅಸ್ಮಿತೆಗಳ ಮೂಲಕವೇ ಮಾನವ ಸಮಾಜದಲ್ಲಿ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಒಂದು ಸಾಂಸ್ಕೃತಿಕ ಅನಿವಾರ್ಯತೆಯನ್ನು ನಾವೇ ನಮ್ಮ ಸುತ್ತಲೂ ನಿರ್ಮಿಸಿಕೊಂಡುಬಿಟ್ಟಿದ್ದೇವೆ ಎನಿಸುತ್ತದೆ. ಸ್ವಾತಂತ್ರ್ಯಾನಂತರದಲ್ಲಿ ಭಾರತವನ್ನು ಒಂದು ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡ ಡಾ ಬಿ ಆರ್ ಅಂಬೇಡ್ಕರ್, ಗಾಂಧಿ, ನೆಹರೂ ಮತ್ತಿತರ ನೇತಾರರಿಗೆ ಜಾತ್ಯತೀತತೆ ಕೇವಲ ಒಂದು ರಾಜಕೀಯ ಘೋಷಣೆ ಅಥವಾ ಸಾಧನವಾಗಿ ಕಂಡಿರಲಿಲ್ಲ. ಅದು ಭಾರತವನ್ನು ಕುವೆಂಪು ಕವಿವಾಣಿಯಂತೆ “ಸರ್ವ ಜನಾಂಗದ ಶಾಂತಿಯ ತೋಟ”ವನ್ನಾಗಿ ರೂಪಿಸುವ ಮಾರ್ಗವಾಗಿ ಕಂಡಿತ್ತು.
ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ತಮ್ಮ ನಿತ್ಯ ಜೀವನದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಯಾವುದೇ ಒಂದು ನಿರ್ದಿಷ್ಟ ಮತ, ಧರ್ಮ, ಅಥವಾ ಜಾತಿಯ ನೆಲೆಗಳಲ್ಲಿ ಗುರುತಿಸಿಕೊಂಡರೂ, ಸಾಮಾಜಿಕ ನೆಲೆಯಲ್ಲಿ ಎಲ್ಲವನ್ನೂ ಬದಿಗಿಟ್ಟು, ಒಂದು ಮಾನವೀಯ ಸಮ ಸಮಾಜವನ್ನು ಕಟ್ಟುವ ಕನಸಿನೊಂದಿಗೇ ಭಾರತದ ಸಂವಿಧಾನವನ್ನೂ ರಚಿಸಲಾಗಿದೆ. ವಿಭಿನ್ನ ಕಾರಣಗಳಿಗಾಗಿ ಜಾತ್ಯತೀತ ಮೌಲ್ಯಗಳು ರಾಜಕೀಯ ಪರಿಷ್ಕರಣೆಗೊಳಪಟ್ಟು, ವಿಕೃತವಾಗಿರುವುದು ದಿಟವೇ ಆದರೂ, ಸಂವಿಧಾನ ಶಿಲ್ಪಿಗಳ ಉನ್ನತ ಧ್ಯೇಯಗಳು ಮತ್ತು ಜಾತ್ಯತೀತೆಯ ಮೌಲ್ಯಗಳು ಶಿಥಿಲವಾಗದಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆ ಈ ದೇಶದ ಜನತೆಯ ಮೇಲಿದೆ, ಯುವ ಪೀಳಿಗೆಯ ಮೇಲಿದೆ. ಕಾನೂನು ನಿಯಮಗಳ ಮೂಲಕ ಜಾತ್ಯತೀತತೆಯನ್ನು ಜನಜೀವನದಲ್ಲಿ ಅಳವಡಿಸಲಾಗುವುದಿಲ್ಲವಾದರೂ ಭಾರತದ ಸಂವಿಧಾನದಲ್ಲಿ ಆಳುವ ಪ್ರಭುತ್ವವು ಒಂದು ಸಮ ಸಮಾಜವನ್ನು ನಿರ್ಮಿಸುವ ಹಾದಿಯಲ್ಲಿ ಹೇಗೆ ಜಾತ್ಯತೀತ ಮೌಲ್ಯಗಳನ್ನು ಸಂರಕ್ಷಿಸಬೇಕು ಎನ್ನುವುದಕ್ಕೆ ಸಾಕಷ್ಟು ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತದೆ.
ಎಲ್ಲ ಮತಗಳನ್ನೂ, ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನೂ ಸಮಾನವಾಗಿ ನೋಡುವ ಆಳುವ ವರ್ಗಗಳ ಜಾತ್ಯತೀತ ನಿಲುವುಗಳು ಈಗಾಗಲೇ ಸಾಕಷ್ಟು ಭಗ್ನವಾಗಿದ್ದು ಕಳೆದ ಏಳು ವರ್ಷಗಳಲ್ಲಿ ಈ ಅನುಕೂಲಕರ ಪರಿಕಲ್ಪನೆಯನ್ನೇ ಅಲ್ಲಗಳೆಯುವ ಪ್ರಯತ್ನಗಳು ನಡೆಯುತ್ತಿವೆ. ಈ ಸಮಾನವಾಗಿ ನೋಡುವ ಹಾದಿಯಲ್ಲೇ ಎಲ್ಲ ಮತಾಚರಣೆಗಳನ್ನು ಮತ್ತು ಧಾರ್ಮಿಕ ಕಟ್ಟಳೆಗಳನ್ನು ಸಮಾನವಾಗಿ ಮಾನ್ಯ ಮಾಡುವ ಒಂದು ಪ್ರವೃತ್ತಿಯೂ ಭಾರತದ ಜಾತ್ಯತೀತ ಪರಂಪರೆಯಲ್ಲಿ ಬೆಳೆದುಬಂದಿದೆ. ಮತಾಚರಣೆಗಳು ಮತ್ತು ಧಾರ್ಮಿಕ ಆಚಾರ ವಿಚಾರಗಳನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿ, ವೈಚಾರಿಕ ಮನೋಭಾವದ ನೆಲೆಯಲ್ಲಿ ನಿಷ್ಕರ್ಷೆ ಮಾಡುವ ಒಂದು ವಿವೇಕಯುತ ಮಾರ್ಗವನ್ನು ಅನುಸರಿಸುವುದರ ಮೂಲಕ ನಾಗರಿಕರ ನಿತ್ಯ ಜೀವನದಲ್ಲಿ ಸಮಾನತೆಯ ಆಶಯಗಳನ್ನು ಸಾಧಿಸುವುದು ಸಾಧ್ಯ. ಈ ವೈಚಾರಿಕತೆಗೆ ಮತ್ತು ವೈಜ್ಞಾನಿಕ ಧೋರಣೆಗೆ ಮತಾಚರಣೆ ಮತ್ತು ಶಾರ್ಮಿಕ ಕಟ್ಟುಪಾಡುಗಳೇ ತೊಡಕಾಗಿ ಪರಿಣಮಿಸಿವೆ.
ತಾವು ವಿಧಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಟ್ಟಳೆಗಳು, ಹೇರುವ ಆಚರಣಾತ್ಮಕ ವಿಧಿ ವಿಧಾನಗಳು ಸದಾ ಕಾಲಕ್ಕೂ ಶ್ರೇಷ್ಠವಾದುದು ಎಂಬ ಅಹಮಿಕೆಯೊಂದಿಗೇ ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಮತಗಳು ಜನಸಾಮಾನ್ಯರನ್ನು ಆಕರ್ಷಿಸುತ್ತವೆ. ಈ ಶ್ರೇಷ್ಠತೆಯ ಮೇಲರಿಮೆಯ ಪರಿಣಾಮವಾಗಿಯೇ ಅನ್ಯಮತಗಳನ್ನು ನಿಕೃಷ್ಟವಾಗಿ ನೋಡುವ ಮನೋಭಾವವನ್ನೂ ಅಂತರ್ಗತವಾಗಿರುವಂತೆ ಬೆಳೆಸಲಾಗುತ್ತದೆ. ಆಚರಣೆಗಳಿಂದಾಚೆಗೂ ಒಂದು ಮತ ಬದುಕುಳಿಯಲು ಸಾಧ್ಯ ಎನ್ನುವ ವಾಸ್ತವವನ್ನು ಮನಗಾಣಲು ಒಪ್ಪದ ಎಲ್ಲ ಮತಗಳ ಸಾಂಸ್ಥಿಕ ನೆಲೆಗಳು ತಮ್ಮ ಮತೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಆಚರಣೆಗಳ ಮೂಲಕ, ವಿಧಿವಿಧಾನಗಳ ಮೂಲಕ ಅಸ್ಮಿತೆಯ ಚಿಹ್ನೆಗಳನ್ನು ಹೇರಲಾರಂಭಿಸುತ್ತವೆ. ಈ ಚಿಹ್ನೆಗಳನ್ನೊಪ್ಪದ ಮನಸುಗಳು ಬಹಿಷ್ಕೃತವಾಗುವ ಸಂಭವವೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮತಾಚರಣೆಯನ್ನೊಪ್ಪದ ಮತ್ತು ಧಾರ್ಮಿಕ ಕಟ್ಟಳೆಗಳನ್ನು ವಿರೋಧಿಸುವ ಒಂದು ಹೊಸ ಪೀಳಿಗೆ ಎಲ್ಲ ಕಾಲಘಟ್ಟದಲ್ಲೂ ತನ್ನ ಗಟ್ಟಿ ಧ್ವನಿಯನ್ನು ದಾಖಲಿಸುತ್ತಲೇ ಬಂದರೂ, ಈ ಧ್ವನಿಗಳನ್ನು ಅಡಗಿಸುವ ಸಲುವಾಗಿಯೇ ಸಾಂಸ್ಕೃತಿಕ ರಾಜಕಾರಣವು ಅಸ್ಮಿತೆ ಆಧಾರಿತ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟುಗಳನ್ನು ನಿರ್ಮಿಸುತ್ತಾ ಬಂದಿದೆ.
ತಮ್ಮ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಉಪನ್ಯಾಸದಲ್ಲಿ ರಾಷ್ಟ್ರಕವಿ ಕುವೆಂಪು “ ಮತ ನಮಗೊಂದು ದೊಡ್ಡ ಬಂಧನವಾಗಿದೆ, ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ,,,, ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕ ಕಟ್ಟಳೆಗಳ ಕಾಟವಾಗಿದೆ ,,,” ಎಂದು ಹೇಳುತ್ತಲೇ ತಮ್ಮ ವಿಶ್ವಮಾನವ ಸಂದೇಶವನ್ನು ಸಾರುತ್ತಾರೆ. ಇದೇ ಉಪನ್ಯಾಸದಲ್ಲಿ ಕುವೆಂಪು ಅವರು “ ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉಳಿಗಾಲವಿಲ್ಲ,,,,, ಮತಾಂಧತೆ, ಮತಭ್ರಾಂತಿ, ಮತದ್ವೇಷ ಮತ್ತು ಮತಸ್ವಾರ್ಥತೆ ಇವು ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಕ್ಕೆ ಕೊಟ್ಟ ಕೊಡಲಿ ಪೆಟ್ಟು ,,,,,” ಎಂದು ಹೇಳುತ್ತಾರೆ. ಮತಶ್ರದ್ಧೆಗೂ, ಮತಾಚರಣೆಗೂ ಮತ್ತು ಮತೀಯ ಭಾವನೆಗಳಿಗೂ ಇರುವ ಸೂಕ್ಷ್ಮ ಎಳೆಯ ಅಂತರವನ್ನು ಗ್ರಹಿಸದೆ ಹೋದರೆ ಯಾವುದೇ ಮತ ಆದರೂ ಮತಾಂಧರ ತಂಗುದಾಣವಾಗಿಬಿಡುತ್ತದೆ. ಜಾತ್ಯತೀತೆಯ ಮೌಲ್ಯಗಳನ್ನೂ ಈ ನೆಲೆಯಲ್ಲೇ ಗ್ರಹಿಸಬೇಕಲ್ಲವೇ ?
ಮತಶ್ರದ್ಧೆ ಹೆಚ್ಚಾದಂತೆಲ್ಲಾ ಮತಾಚರಣೆಯಲ್ಲಿರಬಹುದಾದ ಅಥವಾ ಧಾರ್ಮಿಕ ಆಚರಣೆಗಳಲ್ಲಿರಬಹುದಾದ ಅವೈಚಾರಿಕತೆಯನ್ನು ಅನುಸರಿಸುವ ಜನಸಮುದಾಯಗಳ ಮೇಲೆ ಹೇರುವ ಒಂದು ಪ್ರವೃತ್ತಿಯನ್ನು ಸಾಂಸ್ಥಿಕ ಮತಗಳಲ್ಲಿ ಕಾಣಬಹುದು. ಸಾಂಸ್ಥಿಕವಲ್ಲದ ಹಿಂದೂ ಮತದಲ್ಲೂ ಸಹ ವೈದಿಕ ಆಚರಣೆಗಳ ಮೂಲಕ, ಕಟ್ಟಳೆಗಳ ಮೂಲಕ, ನಂಬಿಕೆಗಳ ಮೂಲಕ ಈ ಆಚರಣೆಗಳನ್ನು ಹೇರುವುದನ್ನು ಕಾಣುತ್ತಿದ್ದೇವೆ. ಹಲವು ಜಾತಿಗಳ ಒಕ್ಕೂಟದಂತಿರುವ ಹಿಂದೂ ಎನ್ನಲಾಗುವ ಒಂದು ಮತವನ್ನು ಸಾಂಸ್ಥೀಕರಿಸುವ ಧ್ಯೇಯದೊಂದಿಗೇ ಹಿಂದುತ್ವ ಮತ್ತು ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಹುಟ್ಟುಹಾಕಿರುವ ಸಂಘಪರಿವಾರ, ತನ್ನ ಈ ಕಾರ್ಯಸೂಚಿಯಲ್ಲಿ, ಅನ್ಯಮತ ದ್ವೇಷವನ್ನೂ ಒಂದು ಭಾಗವಾಗಿಯೇ ಪರಿಗಣಿಸುತ್ತದೆ. ಹಾಗಾಗಿಯೇ ಧಾರ್ಮಿಕ ಆಚರಣೆಗಳೊಂದಿಗೇ ಕೆಲವು ಚಿಹ್ನೆಗಳೂ ಸಹ ಮತೀಯ ಅಸ್ಮಿತೆಯನ್ನು ಸ್ಥಾಪಿಸುವ ಸಂಕೇತವಾಗಿಬಿಡುತ್ತವೆ.
ಸಾಮಾನ್ಯವಾಗಿ ಜನಸಂಸ್ಕೃತಿಯಲ್ಲಿ ಅಥವಾ ನೆಲಮೂಲ ಸಂಸ್ಕೃತಿಯಲ್ಲಿ ಬೇರುಬಿಟ್ಟಿರುವ ಕೆಲವು ಸಾಂಸ್ಕೃತಿಕ ಆಚರಣೆಗಳನ್ನು, ಚಿಹ್ನೆಗಳನ್ನು ತಾನು ವಶಪಡಿಸಿಕೊಂಡು ಅದನ್ನೇ ತನ್ನ ಧಾರ್ಮಿಕ ಸಂಕೇತಗಳನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿಯನ್ನು ಎಲ್ಲ ಮತಗಳ ಇತಿಹಾಸದಲ್ಲೂ ಗುರುತಿಸಬಹುದು. ಹಿಂದೂ ಎನ್ನಲಾಗುವ ಮತದಲ್ಲೂ ಇದು ಅಪವಾದವೇನಲ್ಲ. ಈ ಪ್ರಯತ್ನದ ಒಂದು ಭಾಗವಾಗಿಯೇ ಕುಂಕುಮ, ಬಳೆ, ಸೀರೆ, ತಾಳಿ, ಕಾಲುಂಗುರ ಮುಂತಾದ ಜನಸಂಸ್ಕೃತಿಯ ಚಿಹ್ನೆಗಳನ್ನು ಹಿಂದೂ ಮತದ ಧಾರ್ಮಿಕ ಅಸ್ಮಿತೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಚಿಹ್ನೆಗಳನ್ನು ಧರಿಸದವರನ್ನು ಬಹಿಷ್ಕೃತರನ್ನಾಗಿ ಕಾಣುವ ಮೂಲಕ, ಧಿಕ್ಕರಿಸುವವರನ್ನು ತಿರಸ್ಕಾರದಿಂದ ದ್ವೇಷಿಸುವ ಮೂಲಕ ಹಿಂದೂ ಮತವನ್ನು ಅನುಸರಿಸುವವರಲ್ಲೇ ವಿಭಜನೆಯ ಗೋಡೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಂಘಪರಿವಾರ ಕಾರ್ಯಪ್ರವೃತ್ತವಾಗಿದೆ. ಮತ್ತೊಂದೆಡೆ ಈ ಚಿಹ್ನೆಗಳನ್ನು ಮತೀಯ ಚೌಕಟ್ಟಿನಿಂದ ಹೊರಗಿಟ್ಟು ಜನಸಮುದಾಯಗಳ ಸಾಂಸ್ಕೃತಿಕ ನೆಲೆಗಳಲ್ಲಿ ಗುರುತಿಸುವ ಮನಸುಗಳನ್ನು ‘ ಹಿಂದೂ ವಿರೋಧಿ ’ ಎಂದು ವಿಂಗಡಿಸುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ.
ಹೀಗೆ ಗುರುತಿಸಿಕೊಳ್ಳುವ ಮೂಲಕವೇ ಅನ್ಯಮತದ ಧಾರ್ಮಿಕ ಚಿಹ್ನೆಗಳಿಗೂ ಒಂದು ನಿಷ್ಕೃಷ್ಟ ವ್ಯಾಖ್ಯಾನ ನೀಡಿ ಆ ಚಿಹ್ನೆಗಳನ್ನು ಧರಿಸುವವರಿಗೆ ಮುಖಾಮುಖಿಯಾಗುವ ಒಂದು ವಿಕೃತ ಧೋರಣೆಯನ್ನು ಸಂಘಪರಿವಾರ ಅನುಸರಿಸುತ್ತಿದೆ. ವ್ಯಕ್ತಿಗತ ನೆಲೆಯಲ್ಲಿ ಬಿಂಬಿಸಲಾಗುವ ಧಾರ್ಮಿಕ ಚಿಹ್ನೆ ಮತ್ತು ಸಂಕೇತಗಳನ್ನೇ ಸಾಮುದಾಯಿಕ ಅಸ್ಮಿತೆಗಳನ್ನಾಗಿ ಪರಿವರ್ತಿಸುವ ಒಂದು ಪರಂಪರೆಯನ್ನೇ ಕುಂಕುಮಧಾರಿ ಭಜರಂಗದಳ ಕಾರ್ಯಕರ್ತರಲ್ಲಿ, ಹಿಂದೂ ಸೇನೆಯ ಯುವಕರಲ್ಲಿ ಗುರುತಿಸಬಹುದು. ಇದೇ ಸಂಕೇತಗಳನ್ನು ಮಹಿಳಾ ಸಮುದಾಯದ ಮೇಲೆ ಹೇರುವ ಮೂಲಕ, ಮಹಿಳೆಯರನ್ನು ಮತೀಯ ಪುರುಷಪ್ರಧಾನ ವ್ಯವಸ್ಥೆಯ ಚೌಕಟ್ಟಿನಲ್ಲಿ ಬಂಧಿಸಿಡಲಾಗುತ್ತದೆ. ಈ ಬೆಳವಣಿಗೆಗೆ ಪ್ರತಿಯಾಗಿ ಬೆಳೆದುಬಂದ ವಿರೋಧಿ ನೆಲೆಗಳೊಂದಿಗೇ, ಮತೀಯ ಚೌಕಟ್ಟಿನಲ್ಲೇ ಧಾರ್ಮಿಕ ಆಚರಣೆಗಳ ಮೂಲಕ ಅಸ್ಮಿತೆಯನ್ನು ಗುರುತಿಸಿಕೊಳ್ಳುವ ಒಂದು ಪವೃತ್ತಿಯನ್ನು ಇಸ್ಲಾಂ ಅನುಯಾಯಿಗಳಲ್ಲೂ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ವ್ಯಕ್ತಿಯ ಮತಶ್ರದ್ಧೆಯನ್ನು ಬಿಂಬಿಸುವಂತಹ ಧಾರ್ಮಿಕ ಚಿಹ್ನೆ/ಸಂಕೇತಗಳು ಸಮುದಾಯದ ಅಸ್ತಿತ್ವವನ್ನೇ ನಿರ್ಧರಿಸುವಂತಾದಾಗ ಸಹಜವಾಗಿಯೇ ಮತಾಚರಣೆಗಳು ಧಾರ್ಮಿಕ ಸ್ವರೂಪ ಪಡೆಯುತ್ತವೆ ಹಾಗೆಯೇ ಆಚರಣೆಗಳ ಚೌಕಟ್ಟಿನಲ್ಲಿ ಬಂಧಿಸಲ್ಪಡುತ್ತವೆ. ಈ ಆಚರಣೆಗಳನ್ನು ಧಿಕ್ಕರಿಸುವುದೇ ಮತೀಯ ಚೌಕಟ್ಟಿನಲ್ಲಿ ವಿದ್ರೋಹದಂತೆ ಪರಿಗಣಿಸಲ್ಪಡುತ್ತದೆ. ಮತೀಯ ಅಸ್ಮಿತೆ ಮತ್ತು ಧಾರ್ಮಿಕ ಆಚರಣೆಗಳು ಪರಸ್ಪರ ಪೂರಕವಾಗಿಯೇ ಚಲಿಸಬೇಕು ಎನ್ನುವ ನಿರ್ಬಂಧಗಳನ್ನು ಹೇರುವ ಮೂಲಕ ಮತೀಯ ಶ್ರೇಷ್ಠತೆಯನ್ನೂ ಪ್ರತಿಪಾದಿಸಲಾಗುತ್ತದೆ. ಈ ಬೆಳವಣಿಗೆಗಳ ನಡುವೆಯೇ ಮತಾಚರಣೆಯ ಚೌಕಟ್ಟಿನಲ್ಲೇ ಧಾರ್ಮಿಕ ಚಿಹ್ನೆಗಳನ್ನು ಧಿಕ್ಕರಿಸುವ ವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗುತ್ತದೆ. ಮತಶ್ರದ್ಧೆಯನ್ನು ಮತಾಂಧತೆಯ ತಳಪಾಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಹೆಚ್ಚು ಪ್ರತಿಗಾಮಿ ಕಾರ್ಯಾಚರಣೆಗಳಿಗೆ ಎಡೆಮಾಡಿಕೊಡುತ್ತದೆ.
ಪ್ರಸ್ತುತ ಸಂದರ್ಭದಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶವೆಂದರೆ, ಹಿಂದೂ, ಕ್ರೈಸ್ತ ಮತ್ತು ಇಸ್ಲಾಂ ಮೂರೂ ಮತಗಳ ಧಾರ್ಮಿಕ ಸಂಸ್ಥೆಗಳು ಮಹಿಳೆಯರನ್ನೇ ಸಂಸ್ಕೃತಿಯ ವಾಹಕರಾಗಿ, ಸಂರಕ್ಷಕರಾಗಿ ಮತ್ತು ಭಂಜಕರಾಗಿಯೂ ಪರಿಗಣಿಸುತ್ತವೆ. ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದು ಬಿಂಬಿಸಲಾಗುವ ಕುಂಕುಮ, ಬಳೆ, ತಾಳಿ, ಕಾಲುಂಗುರ ಇತ್ಯಾದಿಗಳು ಮೂಲತಃ ಜನಸಂಸ್ಕೃತಿಯ ಒಂದು ಭಾಗವಾಗಿಯೇ ಬೆಳೆದುಬಂದಂತಹವು. ಈ ಚಿಹ್ನೆಗಳನ್ನು ಹಿಂದೂ ಮತದ ಧಾರ್ಮಿಕ ಸಂಕೇತಗಳನ್ನಾಗಿ ವಶಪಡಿಸಿಕೊಂಡು ಬಳಸಿಕೊಳ್ಳುವುದನ್ನೂ ಶತಮಾನಗಳಿಂದ ಕಾಣುತ್ತಿದ್ದೇವೆ. ಮಹಿಳೆಯರ ನಡುವೆಯೇ ಶ್ರೇಷ್ಠ-ಕನಿಷ್ಠ ತರತಮಗಳ ಗೋಡೆಗಳನ್ನು ನಿರ್ಮಿಸಲು ತಾಳಿ, ಕುಂಕುಮ, ಬಳೆ, ಕಾಲುಂಗುರ ಮುಂತಾದ ಸಾಂಸ್ಕೃತಿಕ ಚಿಹ್ನೆಗಳನ್ನು ಧಾರ್ಮಿಕ ಸಂಕೇತಗಳನ್ನಾಗಿ ಪರಿವರ್ತಿಸಲಾಗಿದೆ. ಮುತ್ತೈದೆ-ವಿಧವೆ ಎಂಬ ವಿಭಜನಾತ್ಮಕ ವ್ಯಕ್ತಿನಿಷ್ಠ ಅಸ್ಮಿತೆಗಳನ್ನು ಈ ಸಂಕೇತಗಳು ಕಾಪಾಡಿಕೊಂಡುಬರುತ್ತವೆ. ಈ ವಿಭಜನೆಗಳು ಮೂಲತಃ ಮಹಿಳೆಯರನ್ನು ಪುರುಷಾಧಿಪತ್ಯದ ಅಧೀನರನ್ನಾಗಿರಿಸುವ ಒಂದು ತಂತ್ರವಷ್ಟೇ ಆದರೂ ಈ ನಿಯಮಗಳಿಗೆ ಧಾರ್ಮಿಕ ಸಂಹಿತೆಗಳ ಹೊದಿಕೆಯನ್ನು ತೊಡಿಸುವ ಮೂಲಕ ಮಹಿಳೆಯರ ಶೋಷಣೆ ಮತ್ತು ಅಧೀನತೆಯನ್ನು ಶಾಶ್ವತಗೊಳಿಸಲಾಗುತ್ತದೆ. ಹಾಗಾಗಿಯೇ ಈ ಸಂಹಿತೆಗಳನ್ನು ಕಟ್ಟಳೆಗಳನ್ನಾಗಿ ಮಾಡುವ ಮನುಸ್ಮೃತಿ ಹಿಂದುತ್ವವಾದಿಗಳಿಗೆ ಮತ್ತು ವೈದಿಕಶಾಹಿಗೆ ಹೆಚ್ಚು ಅಪ್ಯಾಯಮಾನವಾಗುತ್ತದೆ.
ಇಸ್ಲಾಂ ಮತವನ್ನು ಅಥವಾ ಮತಾಚರಣೆಯನ್ನು ಪ್ರತಿನಿಧಿಸುವ ಧಾರ್ಮಿಕ ಚಿಹ್ನೆಗಳು ಮತ್ತು ಸಂಕೇತಗಳು ಇಸ್ಲಾಂ ಪೂರ್ವದ ಅಥವಾ ಜನಸಂಸ್ಕೃತಿಯ ಒಂದು ಭಾಗವಾಗಿಯೇ ಬೆಳೆದುಬಂದಿರುತ್ತದೆ ಅಥವಾ ಅಂದಿನ ಕಾಲಘಟ್ಟದ ಸಾಂಸ್ಕೃತಿಕ ನೆಲೆಗಳಿಗೆ ಪ್ರತಿರೋಧದ ನೆಲೆಯಾಗಿ ರೂಪುಗೊಂಡಿರುತ್ತದೆ. ಇದೇ ಚಿಹ್ನೆಗಳನ್ನೇ ಮುಸ್ಲಿಂ ಧಾರ್ಮಿಕ ಸಂಕೇತಗಳನ್ನಾಗಿ ಬಳಸಿರಬಹುದಾದ ಸಾಧ್ಯತೆಗಳಿವೆ. ಈ ಚಿಹ್ನೆ ಅಥವಾ ಸಂಕೇತಗಳನ್ನು ಇಸ್ಲಾಂ ಮತದ ಅನುಯಾಯಿಗಳ ಮೇಲೆ ಹೇರುವ ಪ್ರಯತ್ನಗಳೂ ಸಹ ಸ್ವಾಭಾವಿಕವಾಗಿಯೇ ನಡೆದುಬಂದಿವೆ. ಇಸ್ಲಾಮಿಕ್ ಸಮಾಜವೂ ಮೂಲತಃ ಪುರುಷ ಪ್ರಧಾನ ವ್ಯವಸ್ಥೆಯನ್ನೇ ಪೋಷಿಸುವುದರಿಂದ ಇಲ್ಲಿಯೂ ಮಹಿಳೆಯರೇ ಸಂಸ್ಕೃತಿಯ ವಾಹಕರು-ರಕ್ಷಕರು ಮತ್ತು ಭಂಜಕರಾಗಿ ಕಾಣುತ್ತಾರೆ. ಹಿಜಾಬ್/ಬುರ್ಖಾ ಧರಿಸದ ಮಹಿಳೆ ಧರ್ಮ-ಸಂಸ್ಕೃತಿ ಭಂಜಕಳಾಗಿ ಕಾಣುತ್ತಾಳೆ. ವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ನೋಡಿದಾಗ ಇಲ್ಲಿಯೂ ಸಹ ಮಹಿಳೆಯನ್ನು ಪರಾಧೀನಳನ್ನಾಗಿಸುವ ಪುರುಷಪ್ರಧಾನ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಏಕೆಂದರೆ ಇದೇ ರೀತಿಯ ಧಾರ್ಮಿಕ ಸಂಕೇತಗಳು, ಚಿಹ್ನೆಗಳು ಪುರುಷರಿಗೆ ಅನ್ವಯಿಸುವಂತಿದ್ದರೂ ಅದನ್ನು ಹೇರಲು ಸಮಾಜ ಮುಂದಾಗುವುದಿಲ್ಲ. ಸಂಸ್ಕೃತಿ ಮತ್ತು ಧರ್ಮರಕ್ಷಣೆಯ ಉತ್ತರದಾಯಿತ್ವವನ್ನು ಮತ್ತೆ ಮಹಿಳೆಗೇ ನೀಡಲಾಗುತ್ತದೆ.
ಹಿಂದೂ ಮತ್ತು ಇಸ್ಲಾಂ ಮತಗಳಲ್ಲಿನ ಈ ಪಿತೃಪ್ರಧಾನ ವ್ಯವಸ್ಥೆ ಮತ್ತು ಪುರುಷ ಪ್ರಧಾನ ಧೋರಣೆಯನ್ನು ಹಿಮ್ಮೆಟ್ಟಿಸದ ಹೊರತು ಮಹಿಳಾ ವಿಮೋಚನೆ ಪರಿಪೂರ್ಣವಾಗುವುದಿಲ್ಲ. ಮತೀಯ ಅಸ್ಮಿತೆಯನ್ನೇ ಪ್ರಧಾನವಾದ ಸಾಮುದಾಯಿಕ ಅಸ್ತಿತ್ವದ ನೆಲೆಯನ್ನಾಗಿ ಪರಿಗಣಿಸುವ ಹಿಂದೂ ಮತ್ತು ಇಸ್ಲಾಂ ಮತದ ಧಾರ್ಮಿಕ ನಾಯಕರು ಇಂತಹ ಜನಸಂಸ್ಕೃತಿಯ ಚಿಹ್ನೆಗಳನ್ನೇ ತಮ್ಮ ಧಾರ್ಮಿಕ ಸಂಕೇತಗಳನ್ನಾಗಿ ಬಳಸಿಕೊಳ್ಳುವ ಮೂಲಕ ಧಾರ್ಮಿಕ ಆಧಿಪತ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿರುತ್ತಾರೆ. ಈ ಪ್ರಯತ್ನಗಳು ಸಾಮಾಜಿಕ-ರಾಜಕೀಯ ವಲಯದಲ್ಲಿ ಪರಸ್ಪರ ಸಂಘರ್ಷದಲ್ಲಿ ತೊಡಗಿದಾಗ ಈ ಚಿಹ್ನೆಗಳೇ ಸಾಮುದಾಯಿಕ ಅಸ್ತಿತ್ವದ ಪ್ರಶ್ನೆಯಾಗಿಬಿಡುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಹಿಜಾಬ್ ಸುತ್ತಲಿನ ವಿವಾದದಲ್ಲೂ ಇದನ್ನೇ ನೋಡುತ್ತಿದ್ದೇವೆ.
ಹೆಣ್ಣುಮಕ್ಕಳು “ ಶಾಲೆಗೆ ಹಿಜಾಬ್ ಧರಿಸಿ ಬರುವುದು ಅಶಿಸ್ತು ಶಾಲಾ ಕಾಲೇಜು ಧರ್ಮವನ್ನು ಆಚರಿಸುವ ಸ್ಥಳವಲ್ಲ ” ಎಂದು ರಾಜ್ಯ ಶಿಕ್ಷಣ ಸಚಿವರು ಹೇಳಿದ್ದಾರೆ. ಹಿಜಾಬ್ ಧರಿಸಿ ಬರುವುದು ಧರ್ಮದ ಆಚರಣೆ ಎಂದಾದರೆ ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಧರಿಸಿ ಬರುವುದನ್ನೂ ಹಾಗೆಯೇ ಪರಿಗಣಿಸಬೇಕಲ್ಲವೇ ? ಸರ್ಕಾರದ ಸಾಮ್ಯದಲ್ಲಿರುವ ಯಾವುದೇ ಸಂಸ್ಥೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ನಿರ್ದಿಷ್ಟ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿದ್ದರೂ, ಶಾಲಾ ಕಾಲೇಜುಗಳಲ್ಲಿ ಸರಸ್ವತಿ ಪೂಜೆ, ಗಣಪತಿ ಪೂಜೆ, ಗಣಹೋಮ ಮುಂತಾದ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಲೇ ಬರಲಾಗಿದೆ. ಇವೆಲ್ಲವನ್ನೂ ನಿಲ್ಲಿಸಲು ಸಚಿವರಿಂದ ಸಾಧ್ಯವೇ ? ಉಡುಪಿಯ ಶಾಲೆಯಲ್ಲಿ ಹಿಜಾಬ್ ಧರಿಸಿ ಬರುವ ಹುಡುಗಿಯರಿಗೆ ಪ್ರವೇಶ ನಿರಾಕರಿಸಿರುವುದೇ ಸಂವಿಧಾನ ಉಲ್ಲಂಘನೆಯಾಗಿದೆ. ಹಿಜಾಬ್ ಧರಿಸುವುದರಿಂದ ಧರ್ಮವನ್ನು ಆಚರಿಸಿದಂತಾಗುವುದಿಲ್ಲ, ಬದಲಾಗಿ ಅದು ಮತಾಚರಣೆಯ ಸಂಕೇತವಾಗಿ ನೋಡಬೇಕಾಗುತ್ತದೆ. ಹಿಂದೂ, ಸಿಖ್ , ಕ್ರೈಸ್ತ ಮತದ ಮಕ್ಕಳಿಗೆ ತಮ್ಮ ಮತದ ಧಾರ್ಮಿಕ ಚಿಹ್ನೆಗಳನ್ನು ಧರಿಸಿ ಶಾಲೆಗೆ ಬರುವ ಹಕ್ಕು ಇರುವಂತೆಯೇ ಮುಸ್ಲಿಂ ಹೆಣ್ಣುಮಕ್ಕಳಿಗೆ ಇರಬೇಕಾಗುತ್ತದೆ.
ಹಾಗಾಗಿ ಉಡುಪಿ ಶಾಲೆಯಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕಿನ ನೆಲೆಯಲ್ಲಿ ಒಪ್ಪಲಾಗುವುದಿಲ್ಲ. ಹಾಗೆಯೇ ಈ ಹಕ್ಕನ್ನು ಸಮರ್ಥಿಸಿಕೊಳ್ಳಲು ಹಿಂದೂಗಳಿಗೆ ಕೇಸರಿ ಶಾಲು ಹೊದ್ದು ಬರಲು ಅವಕಾಶ ನೀಡುವುದು ಅಸಾಂವಿಧಾನಿಕ ಎನಿಸಿಕೊಳ್ಳುತ್ತದೆ. ಇಲ್ಲಿ ಪ್ರಶ್ನೆ ಇರುವುದು ನಾಲ್ಕು ಗೋಡೆಗಳ ನಡುವೆ ಇರಬೇಕಾದ ಧಾರ್ಮಿಕ ಆಚರಣೆಗಳನ್ನು, ಚಿಹ್ನೆ ಮತ್ತು ಸಂಕೇತಗಳನ್ನು ಸಾಂಸ್ಥೀಕರಿಸುವ ಹಿಂದೂ ಮತ್ತು ಇಸ್ಲಾಂ ಮತಾನುಯಾಯಿಗಳ ಧೋರಣೆಯ ಬಗ್ಗೆ. ಹಿಂದೂ ಬಾಲಕಿಯರ ಮೇಲೆ ಹೇಗೆ ಧಾರ್ಮಿಕ ಚಿಹ್ನೆ ಮತ್ತು ಸಂಕೇತಗಳನ್ನು ಹೇರಲಾಗಿ ಸಾಂಸ್ಥೀಕರಣಗೊಳಿಸಲಾಗಿದೆಯೋ ಹಾಗೆಯೇ ಮುಸ್ಲಿಂ ಬಾಲಕಿಯರೂ ಧಾರ್ಮಿಕ ಒತ್ತಡಗಳಲ್ಲೇ ಸಿಲುಕಿರುತ್ತಾರೆ. ಹಿಂದೂ ಹೆಣ್ಣುಮಕ್ಕಳು ತಮ್ಮ ಧಾರ್ಮಿಕ ಸಂಕೇತವನ್ನು ಹೊತ್ತು ಬರುವ ಅಧಿಕಾರ ಹೊಂದಿರುವುದೇ ಆದರೆ ಮುಸ್ಲಿಂ ಬಾಲಕಿಯರಿಗೂ ಸಂವಿಧಾನ ಈ ಹಕ್ಕು ನೀಡುತ್ತದೆ.
ದುರಂತ ಎಂದರೆ ರಾಜಕೀಯ ಅಖಾಡಾದಲ್ಲಿದ್ದ ಸಾಂಸ್ಕೃತಿಕ ಸಂಘರ್ಷ ಈಗ ಭವಿಷ್ಯದ ಪೀಳಿಗೆಯನ್ನು ರೂಪಿಸುವ ಶಾಲಾ ಆವರಣಕ್ಕೆ ಬಂದಿದೆ. ವಿದ್ಯಾರ್ಜನೆಗಾಗಿ ಬರುವ ಎಳೆಯ ಮನಸುಗಳ ನಡುವೆ ಮತ್ತಷ್ಟು ಕಂದಕಗಳನ್ನು, ಭದ್ರ ಗೋಡೆಗಳನ್ನು ನಿರ್ಮಿಸುವ ಇಂತಹ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕಿದೆ. ಪ್ರಪಂಚಕ್ಕೆ ಕಣ್ಣು ತೆರೆಯುವ ಸಮಯದಲ್ಲೇ ಇಂತಹ ವಿಕೃತ ಜಗತ್ತಿಗೆ ಮುಖಾಮುಖಿಯಾಗುವ ಯುವ ಪೀಳಿಗೆ ಒಂದು ಸೌಹಾರ್ದಯುತ, ಸಮನ್ವಯದ ಸಮಾಜವನ್ನು ಕಟ್ಟುವಲ್ಲಿ ಎಷ್ಟರ ಮಟ್ಟಿಗೆ ನೆರವಾಗುತ್ತಾರೆ ಎಂಬ ಪ್ರಶ್ನೆ ನಮ್ಮನ್ನ ಕಾಡಬೇಕಿದೆ. ಇದು ಹಿಜಬ್ ಮತ್ತು ಕೇಸರಿ ಶಾಲು ನಡುವಿನ ಸಂಘರ್ಷವಲ್ಲ. ಎರಡು ಮತಗಳ ಮತಾನುಯಾಯಿಗಳ ನಡುವಿನ ಸಂಘರ್ಷ. ಶಾಲಾ ಆವರಣ ಈ ಸಂಘರ್ಷಕ್ಕೆ ಭೂಮಿಕೆಯಾಗುವುದು ಬೇಕಿಲ್ಲ. ಸಂವಿಧಾನದ ಮೂಲ ಆಶಯವನ್ನು ಗಮನಿಸಿದಾಗ ಈ ಎರಡೂ ಮತಗಳ ಧಾರ್ಮಿಕ ಸಂಕೇತ ಮತ್ತು ಚಿಹ್ನೆಗಳಿಂದ ಹೊರತಾದ ಒಂದು ಶಾಲಾ ವಾತಾವರಣವನ್ನು ನಿರ್ಮಿಸುವುದು ನಮ್ಮ ಜಾತ್ಯತೀತ ಧ್ಯೇಯ ಆಗಿರಬೇಕಲ್ಲವೇ ? ಇದು ನಮ್ಮಿಂದ ಸಾಧ್ಯವೇ ? ಈ ಪ್ರಶ್ನೆ ಪ್ರಜ್ಞಾವಂತರಾದ ನಮ್ಮನ್ನು ಕಾಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬ್ರೇಕಿಂಗ್ ನ್ಯೂಸ್: ವೀಕೆಂಡ್ ಕರ್ಪ್ಯೂ ರದ್ದು: ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ
ಅಕ್ರಾ ಬಳಿ ಭಾರೀ ಸ್ಫೋಟ: 17 ಸಾವು, 59 ಮಂದಿಗೆ ಗಾಯ