1 ಮತದ ಮೌಲ್ಯ ತಿಳಿಸಿಕೊಟ್ಟ ಧ್ರುವ-ಮೊದಲ-ಕೊನೆಯ ಚುನಾವಣೆಯಲ್ಲಿ ಸೋಲಿನ ಮೂಲಕ ಪಯಣ ಅಂತ್ಯ - Mahanayaka
7:21 AM Thursday 12 - December 2024

1 ಮತದ ಮೌಲ್ಯ ತಿಳಿಸಿಕೊಟ್ಟ ಧ್ರುವ–ಮೊದಲ–ಕೊನೆಯ ಚುನಾವಣೆಯಲ್ಲಿ ಸೋಲಿನ ಮೂಲಕ ಪಯಣ ಅಂತ್ಯ

dhruvanarayan
11/03/2023

ಚಾಮರಾಜನಗರ: ಮೃಧು ಭಾಷಿ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ವ್ಯಕ್ತಿತ್ವ, ಸದಾ ಅಭಿವೃದ್ಧಿ, ಜನರ ಜೊತೆ ಇರುತ್ತಿದ್ದ ರಾಜಕಾರಣಿ ಎಂದು ಹೆಸರು ಪಡೆದಿದ್ದ ಧ್ರುವ ಇಡೀ ದೇಶಕ್ಕೆ 1 ಮತದ ಮೌಲ್ಯವನ್ನು ತೋರಿಸಿಕೊಟ್ಟವರು.

2004 ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿ ಎಂಎಲ್ ಎ ಚುನಾವಣೆಗೆ ನಿಂತಿದ್ದ ಧ್ರುವನಾರಾಯಣ ಕೇವಲ 1 ಮತದ ಅಂತರದಿಂದ ಪ್ರತಿಸ್ಪರ್ಧಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಮಣಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.

ತಾನು ಮತ ಹಾಕದಿದ್ದರೇ ರಾಜ್ಯ ಏನು ಬದಲಾಗಲ್ಲ ಎಂಬ ಮನಸ್ಸಿನ ಜನರಿಗೆ ಒಂದು ಮತದ ಅಂತರದಲ್ಲಿ ವಿಧಾನಸಭೆ ಪ್ರವೇಶಿಸಿ  ಮತಕ್ಕಿರುವ ಬೆಲೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದರು. ಅಂದು ರಾಜ್ಯದಲ್ಲಿ ಅತಿ ಹೆಚ್ಚಿನ ಮತದ ಅಂತರದಿಂದ ಗೆದ್ದ ಕೃಷ್ಣ ಬೈರೇಗೌಡ ಹಾಗೂ ಕಡಿಮೆ ಮತದ ಅಂತರದಿಂದ ಗೆದ್ದು ಬೀಗಿದ್ದ ಧ್ರುವನಾರಾಯಣ ಅವರಿಬ್ಬರನ್ನೂ ಕರೆದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸನ್ಮಾನಿಸಿದ್ದು ಇಂದು ಇತಿಹಾಸ.

ಈಡೇರಲಿಲ್ಲ 3ನೇ ಬಾರಿ ಎಂಎಲ್ ಎ ಆಗುವ ಬಯಕೆ:

ಇನ್ನೇನೂ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಸಕಲ‌ ತಯಾರಿಯನ್ನೂ ನಡೆಸಿದ್ದರು. ಅವರಿಗೇ ಕಾಂಗ್ರೆಸ್ ಟಿಕಟ್ ಫೈನಲ್ ಎಂಬ ವಾತಾವರಣ, ಗೆಲ್ಲುವ ವಿಶ್ವಾಸ ಎರಡೂ ಕಾಂಗ್ರೆಸ್ ಪಾಳೇಯದಲ್ಲಿ ಮನೆ ಮಾಡಿತ್ತು. ಅಷ್ಟರಲ್ಲಾಗಲೇ, ಅವರ ನಿಧನ ಕಾಂಗ್ರೆಸ್ ಗೆ ಬರಸಿಡಿಲನ್ನೇ ಬಡಿದಿದೆ.

ಮೊದಲ–ಕೊನೆಯ ಚುನಾವಣೆಯಲ್ಲಿ ಸೋಲು:

70-80ರ ದಶಕದಲ್ಲಿ ವಿದ್ಯಾರ್ಥಿ ಕಾಂಗ್ರೆಸ್‌ ಮೂಲಕ ರಾಜಕೀಯ ಜೀವನ ಆರಂಭಿಸಿ ಬಳಿಕ ರಾಜಶೇಖರಮೂರ್ತಿ ಅವರ ಗರಡಿಯಲ್ಲಿ ಪಳಗಿ 1999 ರಲ್ಲಿ ಬಿಜೆಪಿ ಚಿಹ್ನೆಯಡಿ ಸಂತೇಮರಹಳ್ಳಿ ಕ್ಷೇತ್ರದಿಂದ ಎ.ಆರ್‌.ಕೃಷ್ಣಮೂರ್ತಿ  ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ, 2004 ರಲ್ಲಿ ಅದೇ ಕ್ಷೇತ್ರದಿಂದ ಎಆರ್ ಕೆ ಅವರನ್ನು 1 ಮತದ ಅಂತರದಲ್ಲಿ ಸೋಲಿಸಿ ಶಾಸಕರಾದರು. ಸಂತೇಮರಹಳ್ಳಿ ಕ್ಷೇತ್ರ ರದ್ದಾಗಿ ಕೊಳ್ಳೇಗಾಲ ಮೀಸಲು ಕ್ಷೇತ್ರ ಉದಯಿಸಿದ್ದರಿಂದ 2008 ರಲ್ಲಿ ಕೊಳ್ಳೇಗಾಲದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಅದಾದ ನಂತರ 2009, 2014 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದ ಧ್ರುವ  2019 ರಲ್ಲಿ ಎದುರಿಸಿದ್ದ ಲೋಕ ಚುನಾವಣೆಯೇ ಅವರ ಕೊನೆಯ ಚುನಾವಣೆ ಆಗಿತ್ತು.‌ ಮೊದಲ ಹಾಗೂ ಕೊನೆಯ ಚುನಾವಣೆಯಲ್ಲಿ ಸೋಲು ಕಂಡು  ಪ್ರಕೃತಿಯ ಆಟದ ಮುಂದೆಯೂ ಧ್ರುವ ಸೋಲು ಅನುಭವಿಸಿ ಅಪಾರ ಅಭಿಮಾನಿಗಳು, ಕಾರ್ಯಕರ್ತರನ್ನು ಅಗಲಿದ್ದಾರೆ.

ನಂ 1 ಸಂಸದ, ಕ್ಷೇತ್ರದಲ್ಲಿ ನಿತ್ಯ ಸುತ್ತಾಟ:

ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಧ್ರುವನಾರಾಯಣ ನಂ 1 ಸಂಸದ ಎನಿಸಿಕೊಂಡಿದ್ದರು. ರಾಜ್ಯದ ಸಂಸದರುಗಳ ಪೈಕಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದು, ಸಂಸತ್ತಿನಲ್ಲಿ ಭಾಗಿಯಾಗಿದ್ದು, ಹೆಚ್ಚು ಅನುದಾನ ತಂದ ರಾಜ್ಯದ ಮೊದಲ ಸಂಸದ ಎಂಬ ಹೆಗ್ಗಳಿಕೆ ಇವರದಾಗಿತ್ತು. ಕೃಷಿ ಎಂಎಸ್ಸಿ ಮಾಡಿದ್ದ ಧ್ರುವನಾರಾಯಣ ಅವರು ಚಾಮರಾಜನಗರಕ್ಕೆ ಕೃಷಿ ಕಾಲೇಜನ್ನು ತಂದಿದ್ದರು, ಲಾ ಕಾಲೇಜು ಮಂಜೂರು ಮಾಡಿಸಿದ್ದರು. ವಸತಿ ಶಾಲೆಗಳು, ಇಂಜಿನಿಯರಿಂಗ್ ಕಾಲೇಜು ಹೀಗೆ ಅಭಿವೃದ್ಧಿ ಮೂಲಕ ಜನರ ಮನಸ್ಸಿನಲ್ಲಿ ಉಳಿದ ವಿಶೇಷ ರಾಜಕಾರಣಿ ಧ್ರುವ ಆಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ