ದಿಲ್ಲಿಯಲ್ಲಿ ಗಣರಾಜ್ಯ ಪಥ ಸಂಚಲನ: ನೌಕಾಪಡೆ ತಂಡವನ್ನು ಮುನ್ನಡೆಸಲಿರುವ ಮಂಗಳೂರಿನ ದಿಶಾ ಅಮೃತ್
ಮತ್ತೊಮ್ಮೆ ಗಣರಾಜ್ಯೋತ್ಸವ ಬರ್ತಿದೆ. ಅದಕ್ಕಾಗಿ ಭರದ ಸಿದ್ದತೆ ನಡೆಯುತ್ತಿದೆ. ಈ ಹೊತ್ತಲ್ಲಿ ಹೊಸತೊಂದು ಮಾಹಿತಿ ಸಿಕ್ಕಿದೆ. ಗಣರಾಜ್ಯೋತ್ಸವ ಪ್ರಯುಕ್ತ ದಿಲ್ಲಿಯಲ್ಲಿ ನಡೆಯಲಿರುವ ಕರ್ತವ್ಯ ಪಥದಲ್ಲಿ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಮಂಗಳೂರಿನ ಯುವತಿ ದಿಶಾ ಅಮೃತ್ ನೌಕಾಪಡೆ ತಂಡವನ್ನು ಮುನ್ನಡೆಸಲಿದ್ದಾರೆ.
ಯೆಸ್. ಈ ತುಕಡಿಯು 144 ಯುವ ನಾವಿಕರನ್ನು ಒಳಗೊಂಡಿದೆ. ನಾರಿ ಶಕ್ತಿ ಸ್ತಬ್ದಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರ್ಗಳು ಭಾಗವಹಿಸಲಿದ್ದಾರೆ. ದಿಶಾ ಅಮೃತ್ ಜೊತೆಗೆ ಮತ್ತೊಬ್ಬ ಮಹಿಳಾ ಅಧಿಕಾರಿ, ಸಬ್ ಲೆಫ್ಟಿನೆಂಟ್ ವಲ್ಲಿ ಮೀನಾ ಎಸ್ ಕೂಡಾ ಜೊತೆಯಲ್ಲಿರುತ್ತಾರೆ.
ಅಂದಹಾಗೇ 29 ವರ್ಷದ ಲೆಫ್ಟಿನೆಂಟ್ ಕಮಾಂಡರ್ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿಯಾಗಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಮೃತ್ 2008 ರಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ನ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು.
ದಿಶಾ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ. ಅವರಿಗೆ ನೌಕಾ ಪಡೆಯ ಅಧಿಕಾರಿಯಾಗಬೇಕು ಎಂಬ ಆಸೆ ಬಾಲ್ಯದಲ್ಲೇ ಇತ್ತು. ದಿಶಾ ಅವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿಯವರೆಗೆ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಕಲಿತರು. ನೌಕಾಪಡೆ ಸೇರಬೇಕೆಂಬ ಹಂಬಲ ಈಡೇರಿಸಿಕೊಳ್ಳಲು ಹೈಸ್ಕೂಲ್ ನಲ್ಲಿದ್ದಾಗಲೇ ಎನ್ಸಿಸಿ ಗೆ ಸೇರಿದ್ದರು. ಆಗ ಕೆನರಾ ಕಾಲೇಜಿನಲ್ಲಿ ಎನ್ ಸಿಸಿ ಇರಲಿಲ್ಲವಾದ ಕಾರಣ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದರು.
ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿಯುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೇ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. 2016 ರಲ್ಲಿ ನೌಕಾಪಡೆಗೆ ಸೇರಿದ್ದು, 2017 ರಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಡಾರ್ನಿಯರ್ ಏರ್ ಕ್ರಾಫ್ಟ್ ಅನ್ನು ಚಲಾಯಿಸುತ್ತಿದ್ದರು. ಇವಿಷ್ಟು ದಿಶಾರ ಬ್ಯಾಕ್ ಗ್ರೌಂಡ್.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw