ಡಿವೋರ್ಸ್ ಬಳಿಕವೂ ಮಾಜಿ ಪತಿಗೆ ಕಿರುಕುಳ ನೀಡಿ ಜೈಲುಪಾಲಾದ ಸೌದಿ ಮಹಿಳೆ
ಜೆಡ್ಡಾ: ವಿಚ್ಛೇದನದ ಬಳಿಕವೂ ಆತನಿಗೆ ಪತ್ನಿಯ ಕಾಟ ತಪ್ಪಲಿಲ್ಲ. ವಿಚ್ಛೇದನದಿಂದ ಪತಿ-ಪತ್ನಿಯರಿಬ್ಬರು ದೂರವಾದರೂ ಅವರ ನಡುವೆ ಸಂಘರ್ಷ ಮುಂದುವರಿದ ಘಟನೆ ನಡೆದಿದ್ದು, ಮಹಿಳೆ ತನ್ನ ಮಾಜಿ ಪತಿಗೆ ವಾಟ್ಸಾಪ್ ನಲ್ಲಿ ನಿಂದನೆ ಮಾಡಿ, ಜೈಲು ಪಾಲಾಗಿದ್ದಾಳೆ.
ಏಳು ವರ್ಷದ ಹಿಂದೆ ಸೌದಿಯ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ವಿಚ್ಛೇದನದ ಬಳಿಕವೂ ತನ್ನ ಮಾಜಿ ಪತಿಗೆ ವಾಟ್ಸಾಪ್ ಸಂದೇಶದಲ್ಲಿ ಮಾನಹಾನಿಕರ ಹಾಗೂ ನಿಂದನೆ, ಬೆದರಿಕೆಗಳನ್ನು ಹಾಕಿದ್ದಾಳೆ ಎಂದು ಪತಿ ಆರೋಪಿಸಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
“ನೀನೊಬ್ಬ ಸರ್ವಾಧಿಕಾರಿ, ನನ್ನನ್ನು ನೀನು ಅವಮಾನಿಸಿದ್ದಿ, ನೀನೊಬ್ಬ ಭಾವನೆಗಳಿಲ್ಲದ ರೋಬೋಟ್, ಸೈಕೋ, ಮೋಸಗಾರ ಎಂಬಂತಹ ಸಂದೇಶಗಳು ಹಾಗೂ ಕೆಟ್ಟ ಎಮೋಜಿಗಳನ್ನು ಕಳುಹಿಸಿ ತನ್ನ ಮಾಜಿ ಪತ್ನಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಪತಿ ನ್ಯಾಯಾಲಯದಲ್ಲಿ ದೂರಿದ್ದು, ಇದಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಸಂದೇಶಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾನೆ.
ಮಾಜಿ ಪತಿ ಎಲ್ಲ ದಾಖಲೆಗಳನ್ನು ಇಷ್ಟುಕೊಂಡು ದೂರು ನೀಡಿದ್ದರಿಂದಾಗಿ ಇದೀಗ ಮಾಜಿ ಪತ್ನಿ ಸಂಕಷ್ಟಕ್ಕೆ ಸಿಲುಕಿದ್ದು, ಜೈಲುಪಾಲಾಗಿದ್ದಾಳೆ. ಮದುವೆಯ ಬಳಿಕ ಇವರ ಸಂಬಂಧ ಸರಿ ಹೊಂದಿರಲಿಲ್ಲ. ಹೀಗಾಗಿ 7ವರ್ಷಗಳ ಹಿಂದೆ ಡಿವೋರ್ಸ್ ಪಡೆದುಕೊಂಡು ಬೇರೆ ಬೇರೆಯಾಗಿದ್ದರೂ, ಇವರ ಜಗಳ ಇನ್ನೂ ನಿಂತಿಲ್ಲ. ಪತಿ ನೇರವಾಗಿ ಸಿಗದೇ ಇದ್ದಾಗ ವಾಟ್ಸಾಪ್ ನಲ್ಲಿ ಪತ್ನಿ ನಿಂದಿಸಿದ್ದಾಳೆ.