ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ: ರಮೇಶ್ ಜಾರಕಿಹೊಳಿಗೆ ಡಿ.ಕೆ.ಶಿವಕುಮಾರ್ ತಿರುಗೇಟು - Mahanayaka
5:05 AM Wednesday 11 - December 2024

ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ: ರಮೇಶ್ ಜಾರಕಿಹೊಳಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

dk shivakumar ramesh jarakiholi
13/03/2023

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕುರಿತು ಆಧಾರರಹಿತ ಆರೋಪ ಮಾಡುತ್ತಾ ಬಾಯಿಗೆ ಬಂದಂತೆ ಮಾತನಾಡುವ ಮೆಂಟಲ್ ಗಿರಾಕಿಗಳ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷ ಹಿನಾಯ ಪರಿಸ್ಥಿತಿಯಲ್ಲಿದ್ದು, ಬಿಜೆಪಿ ಸಚಿವರಿಗೆ ಸಿ.ಡಿ. ತೋರಿಸಿ ಪಕ್ಷಕ್ಕೆ ಕರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳು ಸದಾಶಿವನಗರ ನಿವಾಸದ ಬಳಿ ಸೋಮವಾರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಏನೇನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಲಿ. ನಿಮ್ಹಾನ್ಸ್ ಸೇರಬೇಕಾದ ಗಿರಾಕಿಗಳು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ’ ಎಂದು ತಿರುಗೇಟು ನೀಡಿದರು.

ಡಿ.ಕೆ. ಶಿವಕುಮಾರ್ ಅವರ ಕೈಗೆ ರಾಜ್ಯ ಸಿಕ್ಕರೆ ಡಿ.ಕೆ. ಶಿವಕುಮಾರ್ ಟೋಲ್ ಎಂಬ ಮತ್ತೊಂದು ಟೋಲ್ ಹಾಕುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ಟೋಲ್ ವಿಚಾರವಾಗಿ ಮಾತನಾಡುವುದೇ ಆದರೆ, ಸದ್ಯಕ್ಕೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ವಿಚಾರವಾಗಿ ಮಾತನಾಡೋಣ. ಮಿಕ್ಕ ವಿಚಾರವನ್ನು ನಂತರ ಮಾತನಾಡೋಣ’ ಎಂದರು.

ಧೃವನಾರಾಯಣ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಡ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಧೃವನಾರಾಯಣ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಇನ್ನು ಪಕ್ಷದ ಟಿಕೆಟ್ ಹಂಚಿಕೆ ವಿಚಾರವಾಗಿ ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರಾದ ಧೃವನಾರಾಯಣ ಅವರ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ನಮ್ಮ ನಾಯಕರಿಗೆ ಯಾವ ಸಲಹೆ ನೀಡಬೇಕೋ ನೀಡಿದ್ದೇನೆ. ಧೃವನಾರಾಯಣ ಅವರಂತಹ ಕಾರ್ಯಾಧ್ಯಕ್ಷರನ್ನು ಕಳೆದುಕೊಂಡಿರುವುದು ಇಡೀ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಆ ಆಘಾತದಿಂದ ನಾವಿನ್ನೂ ಹೊರಬರಲು ಸಾಧ್ಯವಾಗಿಲ್ಲ. ಸಂಘಟನೆ ಶಕ್ತಿ, ತಾಳ್ಮೆ, ನಿಷ್ಠೆ, ಸೌಮ್ಯ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರು ಧೃವನಾರಾಯಣ ಅವರು. ಅವರ ಆತ್ಮಕ್ಕೆ ಶಾಂತಿ ಸಿಗುವಂತಹ ಕೆಲಸವನ್ನು ಪಕ್ಷ ಮಾಡಲಿದೆ’ ಎಂದು ತಿಳಿಸಿದರು.

ಪಕ್ಷದ ಟಿಕೆಟ್ ಪಟ್ಟಿ ಅಂತಿಮವಾಗುವುದು ಯಾವಾಗ ಎಂದು ಕೇಳಿದಾಗ, ‘ಮಾ.16 ರಂದು ಇಲ್ಲಿ ಒಂದು ಸಭೆ ಕರೆದಿದ್ದು, ಮಾ.17ರಂದು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಅಂತಿಮ ತೀರ್ಮಾನವಾಗಲಿದೆ’ ಎಂದು ತಿಳಿಸಿದರು.

ಪ್ರಧಾನಮಂತ್ರಿಗಳು ರೌಡಿ ಶೀಟರ್ ಗೆ ಕೈಮುಗಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರ ಪಕ್ಷ, ಅವರಿಗೆ ಯಾರು ಬೇಕೋ ಅವರನ್ನು ಸೇರಿಸಿಕೊಂಡಿದ್ದಾರೆ. ಅವರು ಸ್ಯಾಂಟ್ರೋ ರವಿ ಅವರನ್ನಾದರೂ ಸೇರಿಸಿಕೊಳ್ಳಲಿ, ಫೈಟರ್ ರವಿ ಅವರನ್ನಾದರೂ ಸೇರಿಸಿಕೊಳ್ಳಲಿ, ಅತ್ಯಾಚಾರಿಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಲಿ, ಲಂಚಕೋರರನ್ನಾದರೂ ಇಟ್ಟುಕೊಳ್ಳಲಿ. ಅದು ಅವರ ಪಕ್ಷದ ವಿಚಾರ. ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ’ ಎಂದು ಕೇಳಿದರು.

ರಾಜಾಜಿನಗರದ ಆಕಾಂಕ್ಷಿಗಳು ತಮ್ಮನ್ನು ಭೇಟಿ ಮಾಡಿ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡುವುದು ಬೇಡ ಎಂಬ ಬೇಡಿಕೆ ಇಟ್ಟಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಅವರಿಗೆ ಟಿಕೆಟ್ ನೀಡುತ್ತಿದ್ದೇವೆ ಎಂದು ಯಾರು ಹೇಳಿದರು? ಪಕ್ಷದ ಅನುಕೂಲಕ್ಕೆ ತಕ್ಕಂತೆ ಪಕ್ಷ ತೀರ್ಮಾನ ಮಾಡಲಿದೆ. ಯಾರ ಬೆದರಿಕೆಗೂ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ. ಪಕ್ಷ ಈ ವಿಚಾರವಾಗಿ ಯಾವ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ’ ಎಂದರು.

ಮಂಡ್ಯವನ್ನು ರಾಷ್ಟ್ರದಲ್ಲಿ ಮಾದರಿ ಜಿಲ್ಲೆ ಮಾಡುವುದಾಗಿ ಪ್ರಧಾನಿ ಹೇಳಿದ್ದಾರಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಮಂಡ್ಯದಲ್ಲಿ ಮೋದಿ ಅವರು ಯಾರ ಬಗ್ಗೆ ಮಾತನಾಡಿದ್ದಾರೆ, ಯಾರ ಬಗ್ಗೆ ಮಾತನಾಡಿಲ್ಲ ಎಂದು ನಾನು ಹೇಳಬೇಕಾಗಿಲ್ಲ, ಮಾಧ್ಯಮಗಳು ವರದಿ ಮಾಡಿವೆ. ಜನರಿಗೆ ಅದು ತಿಳಿದಿದೆ’ ಎಂದು ತಿಳಿಸಿದರು.

ಕೆಪಿಟಿಸಿಎಲ್ ನೌಕರರು ವಿದ್ಯುತ್ ಕಡಿತ ಮಾಡಿ ಕೆಲಸಕ್ಕೆ ಗೈರಾಗಿ ವೇತನ ಪರಿಷ್ಕರಣೆಗೆ ಒತ್ತಾಯಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ  ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ