ದಲಿತರು ಚಹಾ ಕುಡಿದ ಕಪ್ ನ್ನು ತೊಳೆದ ತಹಶೀಲ್ದಾರ್ | ಅಸ್ಪೃಶ್ಯತೆಯ ವಿರುದ್ಧ ಜಾಗೃತಿಯ ಸಮರ ಸಾರಿದ ದಕ್ಷ ಅಧಿಕಾರಿ
ಗದಗ: ಅಸ್ಪೃಶ್ಯತಾ ಆಚರಣೆಯ ಬಗ್ಗೆ ಬಹಳಷ್ಟು ಜನರು ಭಾಷಣ ಬಿಗಿಯುತ್ತಾರೆ. ಆದರೆ ಅಸ್ಪೃಶ್ಯತಾ ಆಚರಣೆ ನಿಲ್ಲಬೇಕಾದರೆ ಏನು ಮಾಡಬೇಕು ಎನ್ನುವುದು ಬಹುತೇಕ ಜನರಿಗೆ ಇನ್ನೂ ತಿಳಿದಿಲ್ಲ.ಅಸ್ಪೃಶ್ಯತೆ ಆಚರಣೆಯ ವಿರುದ್ಧ ಹೋರಾಟ ಇಂದು ನಿನ್ನೆಯದ್ದಲ್ಲ. ಆದರೆ, ಇದನ್ನು ಇಲ್ಲಿಯವರೆಗೆ ನಿಲ್ಲಿಸಲು ಕೂಡ ಸಾಧ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಹಶೀಲ್ದಾರ್ ಆಶಪ್ಪ ಪೂಜಾರ ಅವರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.
ತಹಶೀಲ್ದಾರ್ ಆಶಪ್ಪ ಅವರು ಪರಿಶಿಷ್ಟ ಜಾತಿ ಜನಾಂಗದವರು ಕುಡಿದ ಚಹಾದ ಕಪ್ ನ್ನು ತೊಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ಅಸ್ಪೃಶ್ಯತೆಯನ್ನು ಕಳೆಯ ಬೇಕಾದರೆ, ಪ್ರತಿಯೊಬ್ಬರು ಸ್ವಯಂ ಆಗಿ ಬದಲಾಗಬೇಕು ಎನ್ನುವ ಸಂದೇಶವನ್ನು ನೀಡಿದ್ದಾರೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂಬ ವಿಚಾರ ತಿಳಿದ ಆಶಪ್ಪ ಪೂಜಾರ ಅವರು ಗುರುವಾರ ಗ್ರಾಮಕ್ಕೆ ತೆರಳಿ ಅಸ್ಪೃಶ್ಯತೆ ಎಂಬ ವಿಚಿತ್ರ ಮಾನಸಿಕತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಹಾರೋಗೇರಿ ಗ್ರಾಮದಲ್ಲಿ ಬಹಳ ದಿನಗಳ ಹಿಂದೆ ದಲಿತರಿಗೆ ಚಹಾ ಅಂಗಡಿ ಒಳಗೆ ಪ್ರವೇಶಿ ಹಾಗೂ ಕ್ಷೌರ ಮಾಡುವುದನ್ನು ನಿಷೇಧಿಸಲಾಗಿತ್ತು. ಪರಿಶಿಷ್ಟ ಜಾತಿಯವರ ಮನೆಯಯಲ್ಲಿ ಯಾರಾದರೂ ಸಾವನ್ನಪ್ಪಿದರೆ, ನಾವು ದೊಡ್ಡ ಜಾತಿಯವರು ಎನ್ನುವ ವಿಚಿತ್ರ ಮಾನಸಿಕತೆ ಹೊಂದಿರುವ ಜನರು ಊರಿನಲ್ಲಿರುವ ಚಹಾದ ಅಂಗಡಿಗಳನ್ನು ಮುಚ್ಚುತ್ತಿದ್ದರು.
ಗ್ರಾಮದಲ್ಲಿ ತಾಂಡವವಾಡುತ್ತಿರುವ ಅಸ್ಪೃಶ್ಯತಾ ಆಚರಣೆಯ ನಿವಾರಣೆಗಾಗಿ ಪಣತೊಟ್ಟಿರುವ ತಹಶೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುಧೀರ್ ಕುಮಾರ್ ಬೆಂಕಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯ ಕುಮಾರ ಯಲಿವಾಳ ಜಾಗೃತಿ ಸಭೆ ನಡೆಸಿದರು. ಬಳಿಕ ಪರಿಶಿಷ್ಟ ಜಾತಿಯವರು ಕುಡಿದ ಚಹಾದ ಕಪ್ ನ್ನು ತಾವು ತೊಳೆಯುವ ಮೂಲಕ ಅಸ್ಪೃಶ್ಯತೆಗೆ ಸವಾಲೊಡ್ಡಿದರು.
ಅಸ್ಪೃಶ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇದೆ. ಆದರೆ ಅಸ್ಪೃಶ್ಯತೆ ಬಗ್ಗೆ ಗೊತ್ತಿದ್ದು ಕೂಡ ಅದನ್ನು ಆಚರಿಸುವವರಿಗೆ, ಪರಿಶಿಷ್ಟ ಜಾತಿಯವರನ್ನು ವಿನಾ ಕಾರಣ ಅವಮಾನಿಸುವವರನ್ನು ಒದ್ದು ಒಳ ಹಾಕಿ. ಕಂಬಿ ಎಣಿಸುವಂತೆ ಮಾಡಬೇಕಾದ ಅಗತ್ಯ ಇದೆ. ಈ ಒಂದು ಕೆಲಸ ಮಾತ್ರವೇ ಅಸ್ಪೃಶ್ಯತೆ ಆಚರಿಸುವವರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಜನರು ಮಾತನಾಡುತ್ತಿದ್ದಾರೆ. ಇದೇ ವೇಳೆ ಅಸ್ಪೃಶ್ಯತೆಯ ಆಚರಣೆಯ ವಿರುದ್ಧ ಜಾಗೃತಿ ಮೂಡಿಸಿದ ಆಶಪ್ಪ ಪೂಜಾರಿ ಅವರ ಸಾಮಾಜಿಕ ಕಳಕಳಿಯ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.