ಇನ್ನಿಲ್ಲ: ಡಿಎಂಡಿಕೆ ಮುಖ್ಯಸ್ಥ, ಖ್ಯಾತ ನಟ ವಿಜಯಕಾಂತ್ ನಿಧನ
ನಟ ಮತ್ತು ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ (71) ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್ -19 ಪರೀಕ್ಷೆ ನಡೆಸಿದ ನಂತರ ಅವರು ವೆಂಟಿಲೇಟರ್ ನಲ್ಲಿದ್ದರು ಎಂದು ಅವರ ಪಕ್ಷ ತಿಳಿಸಿದೆ. ಆದಾಗ್ಯೂ, ಆಸ್ಪತ್ರೆಯ ಹೇಳಿಕೆಯಲ್ಲಿ ಅವರಿಗೆ ನ್ಯುಮೋನಿಯಾ ಇತ್ತು ಎಂದು ಉಲ್ಲೇಖಿಸಲಾಗಿದೆ. “ನ್ಯುಮೋನಿಯಾ ಇದ್ದುದರಿಂದ ಆಸ್ಪತ್ರೆಗೆ ದಾಖಲಾದ ನಂತರ ಕ್ಯಾಪ್ಟನ್ ವಿಜಯಕಾಂತ್ ವೆಂಟಿಲೇಟರ್ ನಲ್ಲಿದ್ದರು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅವರು ಡಿಸೆಂಬರ್ 28, 2023 ರಂದು ಬೆಳಿಗ್ಗೆ ನಿಧನರಾಗಿದ್ದಾರೆ.
ನಿರಂತರ ಆರೋಗ್ಯ ತಪಾಸಣೆಗಾಗಿ ವಿಜಯನಾಥ್ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ, ವಿಜಯಕಾಂತ್ “ಆರೋಗ್ಯವಾಗಿದ್ದಾರೆ” ಮತ್ತು ಪರೀಕ್ಷೆಗಳ ನಂತರ ಮನೆಗೆ ಮರಳುತ್ತಾರೆ ಎಂದು ಪಕ್ಷ ಹೇಳಿತ್ತು.
ಡಿಎಂಡಿಕೆ ಮುಖ್ಯಸ್ಥರನ್ನು ಈ ಹಿಂದೆ ನವೆಂಬರ್ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಉಸಿರಾಟದ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
154 ಚಲನಚಿತ್ರಗಳಲ್ಲಿ ನಟಿಸಿದ್ದ ವಿಜಯಕಾಂತ್ ಅವರು ಚಲನಚಿತ್ರೋದ್ಯಮದಲ್ಲಿ ಯಶಸ್ವಿ ವೃತ್ತಿಜೀವನ ನಡೆಸಿ ನಂತರ ರಾಜಕೀಯ ಪ್ರವೇಶ ಮಾಡಿ ಪ್ರಮುಖರಾಗಿ ಗುರುತಿಸಿಕೊಂಡಿದ್ದರು.
ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿ ವಿರುದಾಚಲಂ ಮತ್ತು ರಿಷಿವಂಡಿಯಂ ಕ್ಷೇತ್ರಗಳನ್ನು ಪ್ರತಿನಿಧಿಸಿ ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದಾಗ ಅವರ ರಾಜಕೀಯ ಜೀವನ ಉತ್ತುಂಗಕ್ಕೇರಿತು. ಇತ್ತೀಚಿನ ವರ್ಷಗಳಲ್ಲಿ ವಿಜಯಕಾಂತ್ ಅವರ ಆರೋಗ್ಯವು ಹದಗೆಟ್ಟಿತ್ತು.