ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ “ದೊಡ್ಡಣ್ಣ ಇನ್ನಿಲ್ಲ” ಎಂಬ ಸುದ್ದಿಯ ಅಸಲಿಯತ್ತೇನು ಗೊತ್ತಾ?
ಸಿನಿಡೆಸ್ಕ್: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಸಾವಿನ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಸ್ವತಃ ದೊಡ್ಡಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.
ಕಿಡಿಗೇಡಿಗಳು ಯಾರೋ ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ಹಾಕಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದರು. ಇದನ್ನು ಓದಿ ಬಹಳಷ್ಟು ಜನರು ಗಾಬರಿಯಾಗಿ ನನಗೆ ಕಾಲ್ ಮಾಡಿದ್ದರು. ಆದರೆ ನಿಮ್ಮೆಲ್ಲರ ಹಾರೈಕೆಯಿಂದ ನಾನು ಕ್ಷೇಮವಾಗಿದ್ದೇನೆ ಎಂದು ದೊಡ್ಡಣ್ಣ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗಿನಿಂದಲೇ ದೊಡ್ಡಣ್ಣ ಇನ್ನಿಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು. ದೊಡ್ಡಣ್ಣ ಜನಪ್ರಿಯ ನಟನಾಗಿರುವ ಹಿನ್ನೆಲೆಯಲ್ಲಿ ಈ ಮೆಸೇಜ್ ವೇಗವಾಗಿ ಹರಡಿದೆ.
ದೊಡ್ಡಣ್ಣ ಅವರ ನೂರಾರು ಅಭಿಮಾನಿಗಳು ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಹೀಗಾಗಿ ದೊಡ್ಡಣ್ಣ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ದೊಡ್ಡಣ್ಣ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ಈ ಸುದ್ದಿಯಿಂದ ನನ್ನ ಆಯುಷ್ಯ ಜಾಸ್ತಿ ಆಯಿತು. ನಾನು ಆರೋಗ್ಯದಿಂದಿದ್ದೇನೆ ಎಂದು ದೊಡ್ಡಣ್ಣ ಹೇಳಿದರು.