ಬಿಬಿಕೆ ಒಟಿಟಿ ಮನೆಯಲ್ಲಿ 5 ಅತ್ಯಂತ ಅವಿಸ್ಮರಣೀಯ ಆಚರಣೆಗಳು - Mahanayaka
5:07 PM Wednesday 11 - December 2024

ಬಿಬಿಕೆ ಒಟಿಟಿ ಮನೆಯಲ್ಲಿ 5 ಅತ್ಯಂತ ಅವಿಸ್ಮರಣೀಯ ಆಚರಣೆಗಳು

bigg boss ott
13/09/2022

ಬೆಂಗಳೂರು: ಕನ್ನಡಿಗರ ಮನೆ ಮಾತಾಗಿರುವ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಮನೆಯೊಳಗಿರುವ ಸ್ಪರ್ಧಿಗಳು ಕೆಲವೊಂದು ಅವಿಸ್ಮರಣೀಯ ಕ್ಷಣಗಳನ್ನು ಅತ್ಯಂತ ಸಂತಸದಿಂದ ಆಚರಿಸಿಕೊಂಡಿದ್ದಾರೆ. ಇನ್ನೇನು ಫೈನಲ್ ಸನಿಹವಾಗುತ್ತಿದ್ದು, ಮನೆಯಲ್ಲಿ ಆಚರಿಸಲಾಗಿರುವ ಕೆಲವು ಸುಂದರ ಕ್ಷಣಗಳ ಝಲಕ್ ಇಲ್ಲಿದೆ:


ಜಶ್ವಂತ್ ರ ಹುಟ್ಟುಹಬ್ಬ:

ಬಿಗ್ ಬಾಸ್ ಒಟಿಟಿ ಕನ್ನಡ ಜರ್ನಿಯು ಜಶ್ವಂತ್ ಅವರ ಹುಟ್ಟುಹಬ್ಬದೊಂದಿಗೆ ಆರಂಭವಾಯಿತು. ಇದು ಮನೆಯ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ಈ ಸೀಸನ್ ಅತ್ಯಂತ ವಿಜೃಂಭಣೆಯಿಂದ ಆರಂಭವಾಯಿತು. ಅಲ್ಲದೇ, ಕಾರ್ಯಕ್ರಮವನ್ನು ಒಂದು ಪರಿಪೂರ್ಣವಾದ ಐಸ್ ಬ್ರೇಕಿಂಗ್ ಸೆಶನ್ ಆಗಿ ಪರಿವರ್ತನೆಯಾಗಿತ್ತು!


ಸ್ವಾತಂತ್ರ್ಯ ದಿನಾಚರಣೆ 2022:

ಸ್ಪರ್ಧಿ ರೂಪೇಶ್ ಅವರ ಹುಟ್ಟುಹಬ್ಬದ ನಂತರ ಸ್ಪರ್ಧಿಗಳೆಲ್ಲರೂ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಂತಸದಿಂದ ಆಚರಿಸಿದರು. ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದರು. ಇದು ಸ್ಪರ್ಧಿಗಳು ಎಂದಿಗೂ ಮರೆಯಲಾಗದಂತಹ ಮತ್ತೊಂದು ಅವಿಸ್ಮರಣೀಯ ಕ್ಷಣವಾಗಿತ್ತು.


ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ!

ಎಲ್ಲರೂ ಅತ್ಯಂತ ಕಾತುರದಿಂದ ಕಾಯುವ ಹಬ್ಬವೆಂದರೆ ಗೌರಿ-ಗಣೇಶ ಹಬ್ಬ. ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಈ ಹಬ್ಬದ ದಿನದಂದು ಬಿಬಿಕೆ ಒಟಿಟಿ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಎಲ್ಲರೂ ಸಾಂಪ್ರದಾಯಿಕವಾಗಿ ಹೊಸ ಬಟ್ಟೆ ತೊಟ್ಟು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ನಮಿಸಿದರು. ಪ್ರತಿದಿನ ಸ್ಪರ್ಧೆಯ ಹೆಸರಿನಲ್ಲಿ ಪರಸ್ಪರ ಹೋರಾಟ, ಕಿತ್ತಾಟಗಳಲ್ಲಿ ಮುಳುಗಿಹೋಗಿದ್ದ ಸ್ಪರ್ಧಿಗಳಿಗೆ ಹಬ್ಬದ ಸಂದರ್ಭದಲ್ಲಿ ಬಿಡುವು ದೊರೆತು ಎಲ್ಲರೂ ಒಟ್ಟಾಗಿ ಸೇರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.


ಬಿಗ್ ಬಾಸ್ ಸ್ಪರ್ಧಿಗಳಿಗೆ ಆಶ್ಚರ್ಯ ತಂದ ತಮ್ಮ ಕುಟುಂಬ ಸದಸ್ಯರ ವಿಡಿಯೋ ಮೆಸೇಜ್ ಗಳು!

ಯಾವಾಗಲೂ ಬಿಗ್ ಬಾಸ್ ನಲ್ಲಿ ಆಶ್ಚರ್ಯಗಳ ಮೇಲೆ ಆಶ್ಚರ್ಯಗಳು ಉಂಟಾಗುತ್ತವೆ. ಮೊದಲನೆ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಆಶ್ಚರ್ಯವನ್ನು ನೀಡಿತು. ಹಬ್ಬದ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ಅವರ ಕುಟುಂಬ ಸದಸ್ಯರು ಶುಭ ಕೋರುವ ವಿಶೇಷ ವಿಡಿಯೋ ಮೆಸೇಜ್ ಗಳನ್ನು ಸಿದ್ಧಪಡಿಸಿ ಮನೆಯಲ್ಲಿ ತೋರಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಸ್ಪರ್ಧಿಗಳು ತಮ್ಮ ನೆಚ್ಚಿನ ಕುಟುಂಬ ಸದಸ್ಯರನ್ನು ನೋಡುವ ಅವಕಾಶವನ್ನು ಪಡೆದರು.


ರೂಪೇಶ್ ಶೆಟ್ಟಿಯಿಂದ ಕಿಚ್ಚ ಸುದೀಪ್ ಗೆ ಹಾಡು ಅರ್ಪಣೆ

ಬಿಗ್ ಬಾಸ್ ಕಾರ್ಯಕ್ರಮದ ಹೋಸ್ಟ್ ಮತ್ತು ಮೆಂಟರ್ ಆಗಿರುವ ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ ಅಚ್ಚುಮೆಚ್ಚು. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಶುಭಾಶಯಗಳನ್ನು ಕೋರಿದರು. ಅವರಿಗಾಗಿಯೇ ಹಾಡುಗಳನ್ನು ರಚಿಸಿ ಅರ್ಪಣೆ ಮಾಡುವುದು, ವಿಶೇಷ ಮೆಸೇಜ್ ಗಳನ್ನು ಕಳುಹಿಸುವುದು ಸೇರಿದಂತೆ ಇನ್ನಿತರೆ ವಿಧಾನಗಳಲ್ಲಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನು ಕೋರಲಾಗುತ್ತದೆ. ಈ ಸಂದರ್ಭವನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ರೂಪೇಶ್ ಶೆಟ್ಟಿ `ಕಿಚ್ಚ ಅಣ್ಣ’ನಿಗಾಗಿ ಒಂದು ವಿಶೇಷವಾದ ರ್ಯಾಪ್ ಹಾಡನ್ನು ಬರೆದು ಹಾಡಿ ಅರ್ಪಣೆ ಮಾಡಿದರು.
ಬಿಬಿಕೆ ಒಟಿಟಿ ಮನೆ ಇನ್ನೇನು ಫೈನಲ್ ಹಂತಕ್ಕೆ ಸಮೀಪಿಸುತ್ತಿದೆ. ಇಲ್ಲಿ ಕಾಲ ಕಳೆದ ಅವಿಸ್ಮರಣೀಯ ಕ್ಷಣಗಳು ಎಲ್ಲಾ ಸ್ಪರ್ಧಿಗಳಿಗೂ ವಿಶೇಷವೆನಿಸಿವೆ. ಮುಂಬರುವ ದಿನಗಳಲ್ಲಿ ಇಂತಹ ಹತ್ತಾರು ಅವಿಸ್ಮರಣೀಯ ಎನಿಸುವಂತಹ ಕ್ಷಣಗಳು ಬರಲಿವೆ ಎಂಬ ವಿಶ್ವಾಸವಿದೆ.

ಇತ್ತೀಚಿನ ಸುದ್ದಿ