ನಾರಾಯಣ ನೇತ್ರಾಲಯದ ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ - Mahanayaka

ನಾರಾಯಣ ನೇತ್ರಾಲಯದ ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ

dr bhujang shetty
20/05/2023

ಬೆಂಗಳೂರು: ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಇಂದು ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಡಾ. ಭುಜಂಗ ಶೆಟ್ಟಿ ಅವರು ಮನೆಗೆ ತೆರಳಿದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿದ್ದರು.

ಎಂದಿನಂತೆ ಕರ್ತವ್ಯಕ್ಕೆ‌ ಹಾಜರಾಗಿ ರೋಗಿಗಳ ತಪಾಸಣೆ ಮಾಡಿದ ಡಾ. ಭುಜಂಗ ಶೆಟ್ಟಿ, ಸಂಜೆ ಮನೆಗೆ ಹೋಗಿ ಮನೆಯಲ್ಲಿ  ಜಿಮ್​ನಲ್ಲಿ ವ್ಯಾಯಾಮ ಮಾಡಿದ್ದರು. ಆಗ ಅವರು ಹೃದಯಾಘಾತಕ್ಕೆ ಒಳಗಾಗಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಆಸ್ಪತ್ರೆಗೆ ಕರೆತರುವ ವೇಳೆ ಹೃದಯ ಬಡಿತ ನಿಂತು ಹೋಗಿದ್ದು, ಆಸ್ಪತ್ರೆಯಲ್ಲಿ ಸಿಪಿಆರ್​​ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಸದ್ಯ ಮೃತದೇಹ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದಲ್ಲಿ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಂಡು ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸುವ ಮೂಲಕ ಮಧುಮೇಹವನ್ನು ಸಂಪೂರ್ಣವಾಗಿ ಡಾ.ಭುಜಂಗಶೆಟ್ಟಿ ಅವರು ಗೆದ್ದಿದ್ದರು. ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಳ್ಳುವಂತೆ ಅನೇಕರಿಗೆ ಅವರು ಸಲಹೆ ನೀಡಿದ್ದರು.

ಡಿ.ಕೆ. ಶಿವಕುಮಾರ್ ಸಂತಾಪ:

ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

“ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು.

ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು.

ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೆ 2010 ರಲ್ಲಿ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ