ಡಾ.ಡಾಮಿನಿಕ್ ಹೊಸ ಆಯಾಮಗಳ ಚಿಂತಕ - Mahanayaka
10:08 PM Thursday 12 - December 2024

ಡಾ.ಡಾಮಿನಿಕ್ ಹೊಸ ಆಯಾಮಗಳ ಚಿಂತಕ

dominic
26/12/2022

  • ಧಮ್ಮಪ್ರಿಯಾ, ಬೆಂಗಳೂರು

ಒಬ್ಬ ವ್ಯಕ್ತಿಯ ಬಗ್ಗೆ ಒಂದು ವಿಚಾರದ ಬಗ್ಗೆ ಒಂದು ವಸ್ತುವಿನ ಬಗ್ಗೆ ಒಂದು ಸ್ಥಳದ ಬಗ್ಗೆ ನಾವು ಒಮ್ಮೆ ಚರ್ಚೆಗೆ ಕುಳಿತಾಗ ನಮ್ಮ ಆಲೋಚನೆಯ ಕ್ರಮಗಳೇ ವಿಭಿನ್ನವಾಗಿರುತ್ತವೆ ಎಂದರೆ ತಪ್ಪಾಗಲಾರದು. ನಾವು ಮಂಡಿಸುವ ವಿಚಾರಗಳು ಬೇರೊಬ್ಬರ ಚಿಂತನೆಯ ಮಂಥನದಲ್ಲಿ ವಿಮರ್ಶೆಗಳಿಗೆ  ಒಳಪಟ್ಟರೆ, ಬೇರೆಯವರ ಮಂಡನಾ ಕ್ರಮ, ವಸ್ತು, ವಿಷಯ, ನಿರೂಪಣಾ ಕ್ರಮ ನಮಗೆ ಮಾರ್ಗದರ್ಶನವಾಗಬಹುದು.  ಇದು ಚಿಂತನಕಾರರ, ಹೊಸ ಹೊಸ ಚಿಂತನೆಗಳ ಪರಿಪಕ್ವತೆ ಹಾಗೂ ಸಿದ್ಧಮಾದರಿಗಳ ಬದಲಿಸುವ ಹೊಸ ಆಲೋಚನೆಯ ಕ್ರಮಗಳೆಂದರೆ  ತಪ್ಪಾಗಲಾರದು.

ಇಂದು ಈ ವಿಚಾರದ ಬಗ್ಗೆ ಮಾತನಾಡಲು ನನಗೆ ಬಹಳ ಸ್ಪೂರ್ತಿ ಹಾಗೂ ಉತ್ಸುಕದಾಯಕರಾದವರು ನನ್ನ ಗುರುಗಳು, ಹೆಸರಾಂತ ಖ್ಯಾತ ವಿಮರ್ಶಕರು, ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ  ಪ್ರಾದ್ಯಾಪಕರು, ಪ್ರಸ್ತುತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (ಕೋಲಾರ) ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಯುತ ಡಾ.ಡಾಮಿನಿಕ್ ಡಿ ರವರೊಡನೆ ಸುಮಾರು ವರ್ಷಗಳಿಂದ ಉತ್ತಮ ಒಡನಾಟವಿದ್ದರೂ ಕಳೆದ ಬುಧವಾರ ( 21-12-2022) ರಂದು ಸುಮಾರು ಒಂದು ತಾಸು ಅವರೊಟ್ಟಿಗೆ ಕಾಲ ಕಳೆಯುವ ಭಾಗ್ಯ ನನಗೆ ದೊರೆತದ್ದು ಬಹಳ ಖುಷಿಯಾಯಿತು,

ಡಾಮಿನಿಕ್ ಎಂದರೆ ಅವರು ಕೆಲವರಿಗೆ  ಮಾತ್ರ ಒಬ್ಬ ವ್ಯಕ್ತಿಯಾಗಿ ಕಾಣುತ್ತಾರೆ, ಆದರೆ ನನ್ನಂಥಹ ಗ್ರಾಮೀಣ ಭಾಗದಿಂದ  ಮಾಯಾನಗರಿಗೆ ಬಂದ ಎಷ್ಟೋ ಯುವಕರಿಗೆ ಆ ಹೆಸರೇ ಒಂದು ಸ್ಪೂರ್ತಿ, ಮಾರ್ಗದರ್ಶನ, ಹೊಸ ತಲೆಮಾರಿನ ಹೊಸ ಚಿಂತನೆ, ಹೊಸ ಬದುಕನ್ನು ಕಟ್ಟುವ ಒಂದು ಅಡಿಗಲ್ಲು, ಹೊಸ ಆಲೋಚನಾ ಕ್ರಮದ ಮಾರ್ಗಸೂಚಿ, ನವ ಭಾರತದ ಚಿಂತನ ಕ್ರಮದ ಒಂದು ಮೈಲಿಗಲ್ಲಾಗಿ ಕಾಣುತ್ತಾರೆ.  ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೊಸ ಪರಿಕಲ್ಪನೆಯ ಒಂದು ಸೃಷ್ಟಿಯ ರೂಪವೇ ಡಾಮಿನಿಕ್ ಎಂದರೆ ತಪ್ಪಾಗಲಾರದು. ಹಾಗಾಗಿ  ಅವರು ವ್ಯಕ್ತಿಯಾಗಿ ನಮಗೆ ಕಾಣದೆ ಒಂದು ಚಿಂತನೆಯ ಆಲೋಚನಾ ಕ್ರಮವಾಗಿ ಕಾಣುತ್ತಾರೆ.

ಡಾಮಿನಿಕ್ ಬಗ್ಗೆ ನನಗೆ ಇಷ್ಟೆಲ್ಲಾ ಹೇಳಬೇಕು ಅನಿಸಿದ್ದು ನಾನು ಗ್ರಾಮೀಣ ಪ್ರದೇಶದ ಒಬ್ಬ ದಲಿತ ಸಮುದಾಯದ ಹುಡುಗನಾಗಿದ್ದು ಕನಕಪುರ ರೂರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ 1999 ರಲ್ಲಿ ನನಗೆ ಇವರ ಪರಿಚಯವಾಯಿತು, ನಾವು ಅಂದು ಮಾತನಾಡುತ್ತಿದ್ದ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಫುಲೆ,ಶಾಹು  ಇವರುಗಳು ನಮಗೆ ಬದುಕನ್ನು ಕೊಟ್ಟವರು ನಮ್ಮ ಪೂರ್ವಿಕರು ಎಂದೆಲ್ಲಾ ಮಾತನಾಡುತ್ತಿದ್ದೆವು, ಜೊತೆಗೆ ಗಾಂಧೀಜಿಯ ಸಿದ್ಧಾಂತಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ಒಂದು ಹೋರಾಟದ ಪಡೆಯೇ ನಮ್ಮೊಡನೆ ಇತ್ತು. ಸಂವಾದ (NGO) ಅಂದರೆ ಕೇವಲ ಅಲ್ಲಿ ಕುಳಿತು ಹರಟೆ ಹೊಡೆಯಬಹುದು, ಒಂದಿಷ್ಟು ಮಾತನಾಡಬಹುದೆಂದು ಕಾಲಹರಣ ಮಾಡುತ್ತಿದ್ದ ನಮಗೆ ಸಾಮಾಜಿಕ ಜವಾಬ್ದಾರಿ, ತಳ ಸಮುದಾಯಗಳ ಬದುಕು,  ಲಿಂಗತಾರತಮ್ಯ, ಅರಣ್ಯ ಸಂರಕ್ಷಣೆ, ವ್ಯಕ್ತಿ ಸಿದ್ಧಾಂತಗಳ ಬಗ್ಗೆ ಸಣ್ಣದಾಗಿ ಬೆಂಕಿ ಹಚ್ಚಿ ಹೊಸ ಆಲೋಚನೆಯ ಕ್ರಮವನ್ನು ಹುಟ್ಟು ಹಾಕಿದ ಚಿಂತಕ ನಮ್ಮ ಡಾಮಿನಿಕ್.

ಇಂಗ್ಲೀಷ್ ನಲ್ಲಿ ಕೇವಲ 35 ಅಂಕಗಳನ್ನು ತೆಗೆಯಲು  ಕಷ್ಟಪಡುತ್ತಿದ್ದ ನನ್ನಂಥಹ ಗ್ರಾಮೀಣ ಪ್ರದೇಶದ ದಲಿತ ಶೋಷಿತರ  ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣವನ್ನು ನೀಡಿ ಜಡ್ಡು ಹಿಡಿದ ಸಮಾಜಕ್ಕೆ ಸೆಡ್ಡು ಹೊಡೆದು ನಿಂತು, ನಿಷ್ಠೆಯಿಂದ ಬದುಕಲು ಮಾರ್ಗತೋರಿದಾತರು ನಮ್ಮ ಡಾಮಿನಿಕ್.  ಇಂದು ನಾಡಿನಾದ್ಯಂತ ಕನ್ನಡ ಸಾಹಿತ್ಯದಲ್ಲಿ ಹೊಸ ಚಿಂತನೆ ಪ್ರಾರಂಭವಾಗಿದೆ ಎಂದರೆ ಅದೆಷ್ಟೋ ಸ್ನೇಹಬಳಗ, ಚಿಂತಕರ ಒಡನಾಟ, ವಿದ್ಯಾರ್ಥಿಗಳ ದಂಡು ಇವರನ್ನು ಸದಾ ಸ್ಮರಿಸುತ್ತಿರುವುದು ಬಹಳ ಸಂತೋಷಕರವಾದ ವಿಚಾರ.ಇದು ನನಗೂ ನನ್ನಂಥಹ ಸಾವಿರಾರು ವಿದ್ಯಾರ್ಥಿಗಳಿಗೂ ಬಹಳ ಖುಷಿಕೊಡುವ ವಿಚಾರ.

ಕೆಲವೊಮ್ಮೆ ನಮ್ಮ ಸ್ನೇಹಿತರು ನಾನು ಮಾತನಾಡಲು ಪ್ರಾರಂಭಿಸಿದಾಗ ಅದರ  ಶೈಲಿ, ವಿಚಾರಗಳ ಕುರಿತು ಮಾಡುವ ಚರ್ಚೆ ಎಲ್ಲವನ್ನೂ ಗಮನಿಸಿ ನೀವು ಇವನ್ನೆಲ್ಲಾ ಹೇಗೆ ಕಲಿತದ್ದು ಎಂದು ಕೇಳಿದಾಗ, ನಾನು ತೋರಿದ ವ್ಯಕ್ತಿ ಡಾಮಿನಿಕ್. ಆದರೆ ಇವರ ಹೆಸರು ಹೇಳುತ್ತಿದ್ದಂತೆ ಕೆಲವರಲ್ಲಿ ಹುಬ್ಬೇರುವ ಕಣ್ಣುಗಳನ್ನು ಕಂಡರೆ, ಮತ್ತೆ ಕೆಲವು ಸ್ನೇಹಿತರು ಅವರು ಮಾತನಾಡುವ ಶೈಲಿ, ಪದಗಳ ಬಳಕೆಯನ್ನು ಇನ್ನಷ್ಟು ಸರಳೀಕರಿಸಿ ಮಾತನಾಡಿದರೆ ಬಹಳ ಒಳ್ಳೆಯದು, ಹಾಗೂ ಅವರ ಕೆಲವು ಆಲೋಚನೆಯ ಕ್ರಮಗಳು ನಮ್ಮಲ್ಲಿ ತಳಮಳ ಸೃಷ್ಟಿಯನ್ನುಂಟುಮಾಡುತ್ತವೆ. ಆದರೂ ನೀವು ಹೇಗೆ ಅವರನ್ನು ಅರ್ಥೈಸಿಕೊಳ್ಳುತ್ತೀರೋ ನಮಗಂತೂ ತುಂಬಾನೇ ಕಷ್ಟ ಎಂದು ಪೆಚ್ಚುಮೋರೆಯಿಂದ ಹೇಳಿದ್ದು ಉಂಟು,  ಅಂತಹ ಸ್ನೇಹಿತರಿಗೆ ನೀವು ವೈದಿಕ ಪರಂಪರೆಯ ಸನಾತನಿಗಳು ನಮ್ಮ ಮೇಲೆ ಶತಮಾನಗಳಿಂದ ಹೇರುತ್ತಾ ಬಂದಿರುವ ಸಿದ್ಧಾಂತಗಳು, ಆಚರಣೆಗಳಿಗೆ ಗಂಟು ಬಿದ್ದು ಸಿದ್ಧಮಾದರಿಯ ಬದುಕನ್ನು ಅಪ್ಪಿಕೊಂಡು ಬದುಕುತ್ತಿರುವುದೇ ನಿಮ್ಮಲ್ಲಿನ ಕಳವಳಕ್ಕೆ ಕಾರಣವೇ ಹೊರತು, ಅದಕ್ಕೆ ಇಂತಹ ಮಹಾನ್ ಚಿಂತಕರು ಕಾರಣರಲ್ಲಾ ಎಂದು ಹೇಳಬೇಕಾದ ಜವಾಬ್ದಾರಿ ನನ್ನದಾಯಿತು.

ಇಂದಿನ ಯುವಕರು ಇದುವರೆಗೂ ಸಿದ್ಧಮಾದರಿಯ ಓದಿನ ಕ್ರಮದಲ್ಲಿ ಬದುಕುತ್ತಾ ಅದೇ ವಿಚಾರಗಳನ್ನು ವೇದಿಕೆಗಲ್ಲಿ ಗೋಷ್ಠಿಗಳಲ್ಲಿ, ಚರ್ಚಾಕೂಟಗಳಲ್ಲಿ ವಿಚಾರಗಳನ್ನು ಮಂಡನೆ ಮಾಡುತ್ತಾ ದೊಡ್ಡ ವಿಚಾರವಂತರಂತೆ ಬೀಗುವ ವ್ಯಕ್ತಿಗಳಿಗೆ ಡಾಮಿನಿಕ್ ರವರ ಚಿಂತನೆಗಳು ಆಲೋಚನೆಗಳು ಅವರ ಹೊಸ ಹೊಸ ಆಯಾಮಗಳು ನಿಮಗೆಲ್ಲಾ ಹೊಸದರಂತೆ ಕಾಣುವುದರಲ್ಲಿ ತಪ್ಪೇನಿಲ್ಲಾ.  ನೀವುಗಳು ಸಮಾಜಮುಖಿಯ ಚಿಂತಕರಾಗಿ, ತಳ ಸಮುದಾಯಗಳ ಮೇಲೆ ಏರಿರುವಂತಹ ಕಟ್ಟಳೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಬಿಡುಗಡೆ ಮಾಡುವ ದಿಕ್ಕಿನಲ್ಲಿ ಯೋಚಿಸುವ ಚಿಂತಕರಾಗಬೇಕೇ ಹೊರತು, ಸರಳೀಕರಿಸಿಕೊಳ್ಳಬೇಕು, ಶೈಲಿ ಬದಲಾಗಬೇಕು, ಎನ್ನುವುದರಲ್ಲಿ ಯಾವುದೇ ಹುರುಳಿಲ್ಲಾ ಎಂದು ಹೇಳಿದ ಎಷ್ಟೋ ಸಂದರ್ಭಗಳು ನನಗೆ ಬಂದೊದಗಿವೆ.

ಡಾಮಿನಿಕ್ ರವರು  ಪೆರಿಯಾರ್ ವಿಚಾರವಾಗಿ ನನ್ನೊಡನೆ ಮಾತನಾಡಿದಾಗ ಪೆರಿಯಾರ್ ರವರು ವೈದಿಕ ಪರಂಪರೆಯನ್ನು ಸರಳೀಕರಿಸಿ ಸಾರ್ವತ್ರೀಕರಣಗೊಳಿಸುವಾಗ ಸಿದ್ಧಮಾದರಿಯ ನಿಲುವುಗಳನ್ನು ಜನಮಾನಸದಿಂದ ತೊಡೆದುಹಾಕಲು ಒಂದು ಚಳುವಳಿಯನ್ನೇ ಮಾಡಬೇಕಾಯಿತು, ಇದು ಇಂದಿನ ಯುವಕರಾದ ನೀವುಗಳು ಅದನ್ನು ಅರ್ಥೈಸಿಕೊಳ್ಳುವ ಕ್ರಮವನ್ನು  ಬದಲಿಸಿಕೊಳ್ಳಬೇಕಾಗಿದೆ ಎಂದಾಗ ನನಗೆ ಬಹಳ ಆಶ್ಚರ್ಯವಾಯಿತು.  ಅಲ್ಲಿವರೆಗೂ ಪೆರಿಯಾರ್ ಅಂದರೆ ಬ್ರಾಹ್ಮಣರ ವಿರುದ್ಧ, ಅವರ ವ್ಯವಸ್ಥೆಯ ವಿರುದ್ಧ ಹೋರಾಡಿದ ವ್ಯಕ್ತಿಯಂತೆ ಕಾಣುತ್ತಿದ್ದವರು ಕೊನೆಗೆ ಪೆರಿಯಾರ್ ಬ್ರಾಹ್ಮಣರ ವಿರುದ್ಧ ಹೋರಾಡಿದವರಲ್ಲಾ ಬ್ರಾಹ್ಮಣತ್ವದ ವಿರುದ್ಧ ವೈದಿಕ ಪರಂಪರೆಯ ವಿರುದ್ಧ ಹೋರಾಡಿದ ವ್ಯಕ್ತಿ ಹಾಗೂ ಒಂದು ಬೌದ್ಧಿಕ ಶಕ್ತಿ ಎಂದು ಅರ್ಥವಾಗತೊಡಗಿತು.

ಇಂದು ಡಾಮಿನಿಕ್ ಬಗೆಗಾಗಲಿ ಅವರು ಚರ್ಚಿಸುವ ವಿಚಾರವಾಗಲಿ, ಭೂತಕಾಲದಲ್ಲಿ ಸಿದ್ಧಮಾದರಿಯಂತಿದ್ದ ವೈದಿಕ ವಿಚಾರಗಳನ್ನು ಹೊಸದಾದ ನೋಟ ಕ್ರಮದಲ್ಲಿ ವರ್ತಮಾನಕ್ಕೆ ಅರ್ಥೈಸುವ ಕ್ರಮಗಳು ಇಂದಿನ ಹೊಸ ಓದುಗರಿಗೆ ಬಹಳ ಅನಿವಾರ್ಯವಾಗಿದೆ.  ಸಿದ್ಧ ಮಾದರಿಯ ಓದನ್ನೇ ಇಟ್ಟುಕೊಂಡು ವರ್ತಮಾನಕ್ಕೆ ತರುವಾಗ ಪ್ರತೀ ಓದುಗನು ಭವಿಷ್ಯವಾಗಬೇಕು, ಸಮಾಜದಲ್ಲಿ ಜಡ್ಡುಹಿಡಿದಿರುವ ಕಟ್ಟಲೆಗಳನ್ನು ಸಡಿಲಗೊಳ್ಳಬೇಕು, ನವ ಭಾರತದಲ್ಲಿ ನವ ತರುಣರು ತಮ್ಮ ಓದನ್ನು ಅರ್ಥೈಸಿಕೊಳ್ಳುವ ದಿಕ್ಕು ಬದಲಾಗಬೇಕೆನ್ನುವುದು ಇವರ ಹಂಬಲವೇ ಹೊರತು ಬೇರೆ ಯಾವುದೇ ವಿಚಾರಗಳನ್ನು, ಸಿದ್ಧ ಮಾದರಿಯ ವ್ಯವಸ್ಥೆಯನ್ನು ಅಪಮಾನಿಸುವುದು ಹೀಯ್ಯಾಳಿಸುವ ಕೆಲಸ ನಮ್ಮದಲ್ಲ ಎನ್ನುವುದು ಅಕ್ಷರಸಹ ಸತ್ಯವಾದದ್ದು,

ಹೀಗೆ ಒಂದು ತಾಸು  ನಾನು ಅವರೊಡನೆ ಮಾತನಾಡುತ್ತಿರುವಾಗ ಅವರು ಪ್ರಮುಖವಾಗಿ ನನ್ನೊಡನೆ ಹಂಚ್ಚಿಕೊಂಡ ಪ್ರಮುಖವಾದ ನಾಲ್ಕು ವಿಚಾರಗಳೆಂದರೆ

  1. ಭೂತಕಾಲದ ವೈದಿಕ ಪರಂಪರೆಯನ್ನು ವರ್ತಮಾನದಲ್ಲಿ ಅರ್ಥೈಸಿಕೊಂಡು ಭವಿಷತ್ ಕಾಲಕ್ಕೆ ಅದನ್ನು ವರ್ಗಾಯಿಸುವುದು.
  2. ವರ್ತಮಾನದಲ್ಲಿ ಆಚರಣೆಗಳಾಗಿ ಮಾರ್ಪಾಡುಗೊಂಡವುಗಳನ್ನು ಹೇಗೆ ಪ್ರತಿಷ್ಠಾಪಿಸಬೇಕು.
  3. ಪ್ರತಿಷ್ಠಾಪಿಸಿದ ವಿಚಾರಗಳನ್ನು ಅಥವಾ ವ್ಯವಸ್ಥೆಯನ್ನು ಹೇಗೆ ಸಮಾನ್ಯಕರಿಸಬೇಕು.
  4. ಈಗೆ ಸಾಮಾನ್ಯವಾದ ವಿಚಾರಗಳು ಹಾಗೂ ಒಂದು ವ್ಯವಸ್ಥೆ ಹೇಗೆ ಸಾರ್ವಜನಿಕವಾಗುತ್ತಾ ಹೋಗುತ್ತದೆ.

ಈ ವಿಚಾರಗಳು ನನಗೆ ಇವರ ಆಲೋಚನೆಯ ಕ್ರಮ ಎಷ್ಟು ವಿಶಾಲವಾದದ್ದು ಎಂದು ಯೋಚಿಸುತ್ತಾ ದಿಗ್ಭ್ರಮೆಗೊಳಿಸಿತು. ಇದರ ಜೊತೆಗೆ ಸಮುದಾಯ ಮಟ್ಟದ ದೈವತ್ವವನ್ನು ರಾಷ್ಟ್ರಮಟ್ಟಕ್ಕೆ ದೈವೀಕರಿಸಿ ಸರ್ವಜನಾಂಗದ ಆಚರಣೆಯನ್ನು ಸಮಾನ್ಯಕರಿಸಿದ್ದನ್ನು ವಿವರಿಸಿದಾಗ ಬಹಳ ರೋಮಾಂಚನವಾಯಿತು.  ಇದು ಇಂದಿನ ಯುವ ಪೀಳಿಗೆಗೆ, ಹೊಸ ಹೊಸ ಓದುಗರಲ್ಲಿ ಹುಟ್ಟುಹಾಕಬೇಕಾದ ಅನಿವಾರ್ಯತೆ ಇದೆಯೆನಿಸಿತು. ಇಂದಿನ ಓದುಗ ಸಮುದಾಯವು ಬೋಧಕ ಸಮುದಾಯದೊಡನೆ ಬೆರೆತು ಹೊಸ ಮಾದರಿಯ ಓದನ್ನು ಅರ್ಥೈಸುವಿಕೆಯನ್ನು ಕಲಿಯಬೇಕಾಗಿದೆ.ಎನಿಸಿತು.  ಶಿಕ್ಷಣಪದ್ಧತಿಯಲ್ಲಿ ಸಿದ್ಧಮಾದರಿಯ ಬದಲು ವರ್ತಮಾನದ ಪರಿಸ್ಥಿತಿಯನ್ನು ಭವಿಷ್ಯತ್ತಿಗೆ ಹೇಗೆ ನೀಡಬೇಕಾಗಿದೆ ಎಂದು ಚಿಂತಿಸುವ ಕಾರ್ಯವನ್ನು ನಮ್ಮ ಓದುಗರು ಮಾಡಬೇಕಾಗಿದೆ ಅದು ಅವರ ಜವಾಬ್ದಾರಿ ಕೂಡ.

ಭೂತಕಾಲದ ವೈದಿಕ ಪರಂಪರೆ ಕೇವಲ ಪಟ್ಟಭದ್ರಹಿತಾಸಕ್ತಿಗಳ ಕಪಿ ಮುಷ್ಠಿಯ ಅಧಿಕಾರವಾಗಿತ್ತೇ ವಿನಃ ಸರ್ವ ಜನಾಂಗದ ಬಿಡುಗಡೆಯಾಗಿರಲಿಲ್ಲಾ.!!!  ಅದು ಬುದ್ಧನ ಕಾಲಮಾನದಲ್ಲಿ ತನ್ನ ಸ್ವರೂಪವನ್ನು ಬದಲಿಸಿಕೊಂಡು ಸ್ವಲ್ಪ ಮಟ್ಟಿನ ವೈಜ್ಞಾನಿಕ ರೂಪವನ್ನು ತಾಳುತ್ತಾ ಸಾಮಾನ್ಯ ಜನರಿಗೆ ಅರ್ಥೈಸಲು ಪೂರಕವಾಯಿತು. ನಂತರ ಕಾಲಘಟ್ಟದಲ್ಲಿ ಬಸವಣ್ಣ 12 ನೇ ಶತಮಾನಕ್ಕೆ ಬಂದಾಗ ವೈದಿಕ ಪರಂಪರೆಯ ಅನಿಷ್ಟತೆಯನ್ನು ಪ್ರಶ್ನಿಸುತ್ತಾ ವಚನಗಳ ರೂಪದಲ್ಲಿ ದಾಖಲೀಕರಣ ಮಾಡಲು ಸಾಧ್ಯವಾದದ್ದೇ, ಇಂದು ವರ್ತಮಾನದಲ್ಲಿ ನಾವು ಹಿಂದಿನ ಅನಿಷ್ಟ ಪದ್ದತಿಗಳನ್ನು ವರ್ತಮಾನದಲ್ಲಿ ಚರ್ಚಿಸಿ ಮತ್ತಷ್ಟು ಹೊಡೆದುಹಾಕಲು  ಸಾಧ್ಯವಾಯಿತು.  ನಂತರ  ಭಾರತಕ್ಕೆ ಇಂಗ್ಲೀಷ್ ಶಿಕ್ಷಣ ಜಾರಿಯಾದಂತಹ ಸಂದರ್ಭದಲ್ಲಿ ಅಂಬೇಡ್ಕರ್, ಶಾಹುಮಹಾರಾಜ್, ಮಹಾತ್ಮ, ಜ್ಯೋತಿ ಬಾ ಫುಲೆ,  ಬರೋಡಾದ ಗಾಯಕವಾಡ್,  ನಾಲ್ವಡಿ ಕೃಷ್ಣರಾಜ ಒಡೆಯರ್,  ಪೆರಿಯಾರ್ ನಾರಾಯಣ ಗುರು  ಇವರುಗಳು ವೈದಿಕ ಪರಂಪರೆಯನ್ನು ವರ್ತಮಾನದಲ್ಲಿ ಅನುಭವಿಸುತ್ತಾ ಅದರಿಂದಾದ ಕಹಿ ಅನುಭವಗಳನ್ನು ಮುಂದಿನ ಪೀಳಿಗೆ ಉಣಬಾರದೆಂದು  ಭವಿಷ್ಯತ್ತಿಗೆ ಹೊಸದೊಂದು ಬಿಡುಗಡೆಯ ಚಿಂತನೆ, ಆಲೋಚನೆಯ ಕ್ರಮ,  ಜೀವನಾ ಶೈಲಿಯ ರೀತಿ,  ಶಿಕ್ಷಣದಲ್ಲಿ ಹೊಸದೊಂದ್ದು ಕ್ರಾಂತಿಯನ್ನು ಮಾಡುತ್ತ  ಭವಿಷ್ಯತ್ತಿಗೆ ಬಿಟ್ಟು ಹೋದರು, ಅಂತಹ ಆಲೋಚನೆಯ ಕ್ರಮವನ್ನು ಇಂದಿನ ಓದುಗ ಸಮುದಾಯ  ಅರ್ಥಮಾಡಿಕೊಳ್ಳುವಲ್ಲಿ  ಬೋಧಕ ಸಮುದಾಯ ಅರ್ಥ ಮಾಡಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ  ಅನಿವಾರ್ಯತೆಯಾಗಿದೆ.

ಇನ್ನು ಪ್ರತಿಷ್ಠಾಪನೆಯ ವಿಚಾರಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಇಡೀ ವ್ಯವಸ್ಥೆಯನ್ನು ಆಡಳಿತ ರೂಢ ವ್ಯವಸ್ಥೆಯಾಗಿ ಪರಿವರ್ತಿಸಿಕೊಂಡು  ತನಗೆ ಅನಿಸಿದ್ದನ್ನು ಅಧಿಕಾರದ ಮೂಲಕ  ಹಿಡಿತವನ್ನು ಸಾಧಿಸುತ್ತಾ  ಹೊಸಮಾದರಿಯ  ವ್ಯವಸ್ಥೆಯನ್ನು ಮತ್ತೆ ಸೃಷ್ಠಿಮಾಡುವ ಒಂದು ಹೊಸ  ಕ್ರಮವಾಗಿದೆ,  ವೈದಿಕರು ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಪರಂಪರೆಯನ್ನೇ,ಹಾಗೂ  ಮತ್ತೆ ಅವೈಜ್ಞಾನಿಕ ಪದ್ದತಿಯ ಆಚರಣೆಯನ್ನೇ  ಜನಸಾಮಾನ್ಯರಲ್ಲಿ ರೂಢಿಗತಗೊಳಿಸಿ ಮಂದಿರ, ಮಠ, ಮಾನ್ಯಗಳೆಂದು ಸೃಷ್ಟಿಸಿ ಮತ್ತೆ ಪ್ರತಿಷ್ಠಾಪಿಸಲು ಸಿದ್ಧರಿದ್ದಾಗ  ನಮ್ಮಲ್ಲಿ  ಆಲೋಚನೆಯ ಕ್ರಮಗಳು ಬದಲಾಗಿ  ವೈಜ್ಞಾನಿಕ ಸತ್ಯತೆಗಳ ಕಡೆಗೆ ನಾವು ಮುಖಮಾಡಿ ನಿಲ್ಲಬೇಕಾದ ಅನಿವಾರ್ಯತೆ ನಮ್ಮ ಓದುಗರಲ್ಲಿ ಬರಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸತೊಡಗಿದರು.

ಸಾಮಾನ್ಯಕರಿಸುವ ವಿಚಾರವಾಗಿ ಮಾತನಾಡುತ್ತಾ ವಸುದೈವ ಕುಟುಂಬಕಂ ಎಲ್ಲರೂ ಒಂದೇ ಕುಟುಂಬದ ಮಕ್ಕಳು.ಭಾರತದ ಇತಿಹಾಸದ ಪುಟಗಳಲ್ಲಿ ನಾವೆಲ್ಲಾ ಒಂದು ನಾವೆಲ್ಲಾ ಹಿಂದೂ ಎಂದು ಒಂದು ಧರ್ಮವನ್ನು ಎಲ್ಲರಿಗೂ ಸಾಮಾನ್ಯಕರಿಸಿ ಹೇಳುತ್ತಾ ಹೊರಟ ವೈದಿಕರ ಮನಸ್ಥಿತಿ  ಸಾಮಾನ್ಯ ಜನರಲ್ಲಿ ಸಾಮಾನ್ಯಕರಣಗೊಂಡು ಮಾನಸಿಕವಾಗಿ ಬಿಡಿಸಲಾರದ ಕೊಂಡಿಯಾಗಿ ಬೇಡಿಯಾ ವ್ಯವಸ್ಥೆಯಾಗಿ ರೂಪುಗೊಂಡಿತು,  ಈ ಮಾನಸಿಕ  ಸಂದಿಗ್ಧತೆಗಳು  ಎಲ್ಲರಲ್ಲೂ  ಬೇಡಿಯ ಕೊಂಡಿಗಳಾದರು ಸಹ ಎಲ್ಲಾ ಜನರಲ್ಲಿಯೂ ಇದೇ ನಿಜವಾದ ಜೀವನವೆಂದು ಸಹಜವಾದ ವ್ಯವಸ್ಥೆಯೆಂದು ಸುಮ್ಮನಾಗುವ ಪರಿಸ್ಥಿತಿ ಬಂದೊದಗಿತು.  ಇಂತಹ ಹೇಳಿಕೆಗಳು ತದನಂತರಲ್ಲಿ ಸಾರ್ವರ್ತ್ರಿಕಗೊಳ್ಳುವ ಸಹಜ ಪ್ರಕ್ರಿಯೆಗಳಾಗತೊಡಗಿದವು.

ವಸುದೈವಕುಟುಂಬಕಂ, ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎನ್ನುವ ಸಿದ್ಧ ಮಾದರಿಯ ಹೇಳಿಕೆಗಳು ಇಂದಿಗೂ ಹಾಗೆ ಪಾಲನೆಯಾಗುತ್ತಾ ಇಲ್ಲಿನ ತಳ ಸಮುದಾಯದ, ಶೋಷಿತ ಜನ ಸಾಮಾನ್ಯರಿಗೆ ತಲುಪಬೇಕಾ ಸವಲತ್ತುಗಳು ಅವಕಾಶಗಳು ಸಿಗಬೇಕಾಗಿದ್ದ ಸ್ಥಾನಮಾನಗಳ ಬಗ್ಗೆ ಕಿಂಚಿತ್ತೂ ಯೋಚನೆಯನ್ನು ಮಾಡದೆ ಹಾಗೆಯೇ ಕಾಪಾಡಿಕೊಳ್ಳುವ ವೈದಿಕ ಶಾಹಿ ನಿಲುವುಗಳು ಇಂದಿಗೂ ನಮ್ಮೊಡನೆ ನಮಗರಿವಿಲ್ಲದೆಯೇ  ಹಾಗೆಯೇ ಇವೆ, ಇವುಗಳನ್ನು ನಾವು ಅರ್ಥೈಸುವಲ್ಲಿ ವಿಪುಲವಾದರೆ ವರ್ತಮಾನಕ್ಕೆ ಯಾವ ಕೊಡುಗೆಯು ಇಲ್ಲದಂತಾಗುತ್ತದೆ.  ಈ ವೈದಿಕಶಾಹಿಯ ಆಚರಣೆಗಳು ಸಾರ್ವತ್ರೀಕರಣ ಗೊಳ್ಳುವ ಮೊದಲು ನಮ್ಮ ಯುವ ಓದುಗ ಮಿತ್ರರ ದಂಡು ತಯಾರಾಗಿ ಅದನ್ನು ಮುಂದಿನ ಪೀಳಿಗೆಗೆ ಅರ್ಥೈಸಬೇಕಾಗಿದೆ.

ಸಾಮಾನ್ಯ ಜನರು  ಈ ಸಾರ್ವತ್ರೀಕರಣ ವ್ಯವಸ್ಥೆಯಲ್ಲಿ  ದೈವವನ್ನು, ದೈವತ್ವದ ಕಲ್ಪನೆಯನ್ನು  ಸಾಮಾಜಿಕ ವ್ಯವಸ್ಥೆಯಲ್ಲಿ ಜೀವನದ ಕ್ರಮದಲ್ಲಿ ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ಆಚರಣೆಯನ್ನು  ರಾಷ್ಟ್ರೀಕರಣದ ನೆಪದಲ್ಲಿ ತಳ ಸಮುದಾಯಗಳ ಆಚರಣೆಗಳನ್ನು  ರಾಷ್ಟಮಟ್ಟದಲ್ಲಿ  ವೈದಿಕ ಪರಂಪರೆಯ ಪ್ರತಿರೂಪಗಳೆಂದು  ಪ್ರತಿಷ್ಠಾಪಿಸುತ್ತಾ  ಎಲ್ಲರೂ  ಒಂದೇ  ಎನ್ನುವ ಹಾಗೆ ಪ್ರತಿಬಿಂಬಿಸಿ  ಸಿದ್ಧಮಾದರಿಯನ್ನು ಹಾಗೆ ಕಾಪಾಡಿಕೊಳ್ಳುವ  ಹುನ್ನಾರವೆನ್ನಬಹುದು.

ಹೀಗೆ ಹಲವಾರು ವಿಚಾರಗಳನ್ನು ಚರ್ಚಿಸುವಾಗ ನನಗೆ ಹೊಸತನಗಳು, ಹೊಸ ಹೊಸ ಆಲೋಚನೆಯ ದಿಕ್ಕುಗಳು, ಯೋಚನೆಯ ಕ್ರಮಗಳು, ಅರ್ಥೈಸುವಿಕೆಯ ರೀತಿ, ಮಂಡನೆ ಮಾಡುವ ವಿಚಾರಗಳು, ಭೂತದಿಂದ ವರ್ತಮಾನಕ್ಕೆ ತಂದು ಭವಿಷ್ಯತ್ತಿಗೆ ಅದನ್ನು ಹೊಸ ಬದಲಾವಣೆಯಾಗಿ ವರ್ಗಾಯಿಸಬೇಕಾದ ಜವಾಬ್ದಾರಿ ಇಂದಿನ ಬೋಧಕರು,ಕಲಿಯುವ ಯುವಕರು,ಬರೆಯುವ ಬರಹಗಾರರು,  ಓದಿನ ಕ್ರಮದಲ್ಲಿ ಬದಲಾವಣೆಯಾಗಬೇಕಾದ ಓದುಗರು, ಎಲ್ಲರಲ್ಲಿಯೂ ಬದಲಾವಣೆಯಾಗಿ ನವಭಾರತ ನಿರ್ಮಾಣವಾಗಬೇಕಾಗಿದೆ.  ತಳ ಸಮುದಾಯಗಳು ಶೋಷಿತ ಜನಾಂಗ, ಅವಕಾಶ ವಂಚಿತ ಜನ, ಸಿದ್ಧ ಮಾದರಿಯ ಬದುಕಿಗೆ ಅವಲಂಬಿತರಾದ ಚಿಂತಕರು, ಎಲ್ಲರೂ ಈ ವರ್ತಮಾನಕ್ಕೆ ಬೇಕಾದದ್ದನ್ನು ನೀಡುವ ರುವಾರಿಗಳಾಗಿದ್ದರೆಂದು ತಿಳುಸುತ್ತಾ ನಮ್ಮ ಒಂದು ತಾಸಿನ ಚರ್ಚೆಯನ್ನು ಮುಕ್ತಯಗೊಳಿಸಿದೆವು.

ಡಾಮಿನಿಕ್ ಎಂದರೆ ವ್ಯಕ್ತಿಯಲ್ಲಾ ಅದು ವಿಚಾರಗಳ ಆಗರ, ಹೊಸ ತಲೆಮಾರಿಗೆ ಹೊಸ ಆಲೋಚನೆ, ಹೊಸ ನೋಟ ಕ್ರಮ, ಹೊಸ ಅರ್ಥೈಸುವಿಕೆ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ