ಸ್ನೇಹಜೀವಿ –ಸಮಾಜಪರ ಚಿಂತಕ ಡಾ. ಹೆಚ್.ತುಕಾರಾಂ
- ಧಮ್ಮಪ್ರಿಯಾ, ಬೆಂಗಳೂರು
ಒಂದು ದೇಶ ಒಂದು ಭಾಷೆ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವನ್ನು ಕುರಿತು ಮಾತನಾಡಬೇಕಾದರೆ, ಮಾತನಾಡಿದ ವಿಷಯವನ್ನು ಬರವಣಿಗೆ ರೂಪಕ್ಕೆ ತರಬೇಕಾದರೆ, ಕೇವಲ ಬರೆಯಬೇಕು ಅಥವಾ ಮಾತನಾಡಬೇಕು ಎಂದುಕೊಂಡರೆ ಸಾಲದು, ಮೊದಲು ಆ ವಿಚಾರದಲ್ಲಿನ ಮುಖ್ಯ ವಸ್ತು, ವಿಷಯ ಅದರ ಘನತೆ ಎಲ್ಲವನ್ನು ನಾವು ಗಮನದಲ್ಲಿಟ್ಟುಕೊಂಡು ಹೇಗೆ ಮುಂದುವರೆಯುತ್ತೇವೆಯೋ ಹಾಗೆಯೇ ಒಬ್ಬ ವ್ಯಕ್ತಿಯಬಗ್ಗೆ ಮಾತನಾಡಬೇಕಾದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಬರವಣಿಗೆಯ ರೂಪಕ್ಕೆ ತರಬೇಕಾದರೆ, ಆ ವ್ಯಕ್ತಿಯ ವ್ಯಕ್ತಿತ್ವ ಸ್ವಭಾವ ಇತರರೊಡನೆ ಅವರಿಗಿರುವ ಅವಿನಾಭಾವ ಸಂಬಂಧ, ವ್ಯಕ್ತಿಯ ಭಾವನೆಗಳು, ಜನಪರ ಯೋಚನೆಗಳು, ಜನಾಂಗದ ಏಳಿಗೆಯ ನಿಲುವುಗಳು, ಅವರಲ್ಲಿರುವ ಸಾಮಾಜಿಕ ಅಭಿವೃದ್ಧಿಯ ಕಳಕಳಿಯ ಮನೋಭಾವನೆ, ಅವರ ಬದುಕಿನ ಮುಖ್ಯ ಅಭಿರುಚಿಗಳು ಹವ್ಯಾಸಗಳು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ಬರವಣಿಗೆ ರೂಪಕ್ಕೆ ತರುವ ಪ್ರಯತ್ನ ಮಾಡಬೇಕೆ ವಿನಹ, ಒಬ್ಬ ವ್ಯಕ್ತಿಯ ಬಗ್ಗೆ ಯಾವ ವಿಚಾರವನ್ನು ಅರಿಯದೆ ಮಾತನಾಡುವುದು ಬರವಣಿಗೆ ರೂಪಕ್ಕೆ ತರುವುದು ವ್ಯಕ್ತಿಯ ತೇಜೋವಧೆ ಮಾಡಲು ಪ್ರಯತ್ನಿಸುವುದು ಯಾವ ಬರಹಗಾರರ ಲಕ್ಷಣವಲ್ಲ.
ಈ ವಿಚಾರವನ್ನು ನಾನು ಗಮನದಲ್ಲಿಟ್ಟುಕೊಂಡು ಒಬ್ಬ ಬರಹಗಾರ, ಸ್ನೇಹಮಯಿ ಭಾವಜೀವಿ, ಕನ್ನಡ ಪರ ಹೋರಾಟಗಾರ, ಸಾಹಿತಿ, ಜನರಿಗೆ ಸದಾ ಒಳ್ಳೆಯದನ್ನೇ ಬಯಸುವ, ಎಲ್ಲಿ ತಪ್ಪುಗಳು ನಡೆದರೆ ಅವುಗಳನ್ನು ನಿಷ್ಟೂರವಾಗಿ ಖಂಡಿಸುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಅಸಮಾನತೆಯನ್ನು ಖಂಡಿಸುವ, ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಲು ಸದಾ ತುಡಿಯುವ ವ್ಯಕ್ತಿ, ಇವರು ಒಳ್ಳೆಯ ವಾಗ್ಮಿ, ಹಾಡುಗಾರ, ಸಮಾಜಮುಖಿ ಚಿಂತಕ ಇವೆಲ್ಲಾ ವಿಶಿಷ್ಟಗುಣವುಳ್ಳಾ ನನ್ನ ಹೆಮ್ಮೆಯ ಆತ್ಮೀಯರು-ಗುರು -ಮಾರ್ಗದರ್ಶಕ ನನಗೆ ಸದಾ ಒಳಿತನ್ನೇ ಹೇಳುವ – ಅದನ್ನೇ ಬಯಸುವ ನೆಚ್ಚಿನ ಸ್ನೇಹಮಯಿ ಹೆಚ್ ತುಕಾರಾಂ ರವರ ಬಗ್ಗೆ ಬರೆಯಬೇಕೆಂದರೆ ನನಗೆ ಬಹಳ ಸಂತೋಷವಾಗುತ್ತದೆ.
ಶ್ರೀಯುತ ತುಕಾರಾಂ ಮೂಲತಃ ಬೆಂಗಳೂರಿನ ಮಲ್ಲತಹಳ್ಳಿ ನಿವಾಸಿಯಾಗಿದ್ದು ತಮ್ಮ ಶಿಕ್ಷಣವನ್ನೆಲ್ಲಾ ಬೆಂಗಳೂರಿನಲ್ಲೇ ಪೂರೈಸಿದ ಉತ್ತಮ ವಿದ್ಯಾರ್ಥಿ, ಶಿಕ್ಷಕ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಉತ್ತಮ ಆಡಳಿತಗಾರ ಎನ್ನುವುದನ್ನು ನಾನು ಸುಮಾರು ವರ್ಷಗಳಿಂದಲೂ ಬಲ್ಲವನಾಗಿದ್ದೇನೆ. ಇವರು ಸದಾ ಸಂತೋಷವಾಗಿರುವ ಒಂದು ವಿಶಿಷ್ಟ ರಂಗವೆಂದರೆ ಅದುವೇ ಸ್ನೇಹಬಳಗ, ಇವರು ವಿದ್ಯಾರ್ಥಿ ದೆಸೆಯಿಂದಲೂ ಹಲವಾರು ಸ್ನೇಹಿತರನ್ನು ಹೊಂದಿದ್ದು ಅವರೆಲ್ಲರನ್ನು ಇಂದಿಗೂ ತಮ್ಮ ಒಡನಾಟದಲ್ಲಿಟ್ಟುಕೊಂಡಿರುವುದು ಬಹಳ ಅಪರೂಪದ ವ್ಯಕ್ತಿತ್ವ. ಇವರ ಗೆಳೆತನ ಎಷ್ಟರ ಮಟ್ಟಿಗೆ ಗಟ್ಟಿಯಾಗಿರುತ್ತೆ ಎಂದರೆ ಒಮ್ಮೆ ಯಾರಾದರೂ ಪರಿಚಯವಾದರೆ ಅವರೇ ಬಂದು ಇವರನ್ನು ಮತ್ತೆ ಮತ್ತೆ ಮಾತನಾಡಿಸಬೇಕು ಇವರ ಸರಳ ಸ್ವಭಾವವನ್ನು ಇಷ್ಟಪಡುವಷ್ಟರ ಮಟ್ಟಿಗೆ ಎಲ್ಲರೊಡನೆ ಉತ್ತಮ ಬಾಂಧವ್ಯದಿಂದ ಮಾತಿಗಿಳಿಯುತ್ತಾರೆ.
ಶ್ರೀಯುತರು ಸಮಾಜಮುಖಿ ಚಿಂತಕರಾಗಿದ್ದು ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ತಕ್ಷಣವೇ ವಿರೋಧಿಸುವಂತಹ ಖಂಡಿತಾವಾದಿಯಾಗಿದ್ದು ಇಂದಿಗೂ ಅಂತಹ ವ್ಯಕ್ತಿತ್ವವನ್ನೇ ಮೈಗೂಡಿಸಿಕೊಂಡು ಅದನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ, ಸ್ವಾಮಿ ವಿವೇಕಾನಂದರ ಹಾಗು ರಸಋಷಿ ಕುವೆಂಪು ರವರ ತಾತ್ವಿಕ ಚಿಂತನೆಗಳು, ಸಿದ್ಧಾಂತಗಳು, ಬರಹ- ಭಾಷಣಗಳಿಂದ ಪ್ರಭಾವಿತರಾಗಿದ್ದು ಸದಾ ವಿಚಾರಗಳನ್ನು ಮಂಡಿಸುವ ಕೆಲಸ ಮಾಡುತ್ತಿರುತ್ತಾರೆ.ಇವರು 12 ನೇ ಶತಮಾನದ ಬಸವಣ್ಣ ನವರ ಸಾಮಾಜಿಕ ಚಳುವಳಿಯ ಕ್ರಾಂತಿಯಿಂದ ಪ್ರಭಾವಿತರಾಗಿ ಬೆಂಗಳೂರು ಜಿಲ್ಲಾ ಮಟ್ಟದ ಪ್ರಥಮ ವಚನ ಸಾಹಿತ್ಯ ಸಮ್ಮೇಳನವನ್ನು ತಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ವಿಚಾರ ಗೋಷ್ಠಿ ಯಲ್ಲಿ ಸಾಹಿತಿಯಾಗಿ ಭಾಗವಹಿಸಿದ ಇವರು ಸಾಮಾಜಿಕ ಅಸಮಾನತೆ ತೊಡೆಯಬೇಕಾದರೆ ಮತ್ತೊಮ್ಮೆ ಬಸವಣ್ಣನ ವಚನ ಕ್ರಾಂತಿ ಸಾಮಾಜಿಕ ಬದಲಾವಣೆಯ ಕ್ರಾಂತಿಗೆ ನಾಂದಿ ಹಾಡಬೇಕು ಎಂದು ಕರೆಕೊಟ್ಟರು. ಇವರೂ ಸಹ ಅದರ ನಿಟ್ಟಿನಲ್ಲಿಯೇ ಇಂದಿಗೂ ಕೆಲಸ ಮಾಡುತ್ತಿದ್ದಾರೆ.
ಶ್ರೀಯುತರು ಕುವೆಂಪು ರವರ ಸಾಹಿತ್ಯಕ್ಕೆ ಮಾರುಹೋಗಿ ಕುವೆಂಪು ಯುವಕರ ಸಂಘ ವನ್ನೇ ಸ್ಥಾಪಿಸಿದರು. ಇದರ ಮೂಲಕ ಹೊಸ ಹೊಸ ಬರಹಗಾರರಿಗೆ ಪ್ರೋತ್ಸಹ ನೀಡಲು ಪ್ರತೀ ವರ್ಷ ಕುವೆಂಪು ರವರ ಕುರಿತಂತೆ ಕವಿತೆಗಳ ರಚನೆ, ಗಾಯನ, ಭಾವಗೀತೆ, ಹಾಗು ಸ್ವರಚಿತ ಕವನ ವಾಚನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಇವರ ಬಹುದೊಡ್ಡ ಕನ್ನಡ ಸಾಹಿತ್ಯ ಬೆಳವಣಿಗೆಯ ಕ್ರಾಂತಿಯಾಗಿದೆ. ಸ್ವರಚಿತ ಕವನಗಳನ್ನೇ ಇವರು ಕಾವ್ಯಮಹಂತ ಎಂಬ ಪುಸ್ತಕವನ್ನು ಹೊರತಂದು ಓದುಗ ಬಳಗವನ್ನು ಬಹಳ ಸರಳವಾಗಿ ತಲುಪಿದರು. ಕುವೆಂಪು ರವರು ಕೇವಲ ಒಂದು ವರ್ಗಕ್ಕೆ ಸೇರಿದ ಬರಹಗಾರರಲ್ಲಾ ಅವರು ವಿಶ್ವಮಾನವ ಎಲ್ಲಾ ಸಾಹಿತಿಗಳಿಗೂ ಅವರ ಸಾಹಿತ್ಯ ಪುಷ್ಠಿ ನೀಡುತ್ತದೆ ಎಂಬುದನ್ನು ಸಂಘದ ಮೂಲಕ ಪ್ರಚಾರ ಮಾಡಿದ ಕೀರ್ತಿ ತುಕಾರಾಂ ರವರಿಗೆ ಸಲ್ಲುತ್ತದೆ.
ಶ್ರೀಯುತರು ಸಾಹಿತ್ಯ ಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೆ ಸಂಗೀತ ಕ್ಷೇತ್ರದಲ್ಲಿಯೂ ನಾವು ಸರಿಸಮಾನವಾಗಿ ನಿಲ್ಲಬಲ್ಲೆವು ಎಂದು ಸಾಬೀತು ಪಡಿಸಲು ಸಿದ್ದರಾದವರು, ಅದಕ್ಕಾಗಿ ಇವರು ಹಲವಾರು ಗೆಳೆಯರೊಡಗೂಡಿ “ಗಾನಮಾಧುರ್ಯ ಸಾಂಸ್ಕೃತಿಕ ಕಲಾ ಸಂಘ” ಎಂಬ ಸಂಗೀತ ಸಂಸ್ಥೆ ನಿರ್ಮಿಸಿ ಹಲವಾರು ಹಾಡುಗಾರರಿಗೆ ಉತ್ತೇಜನ ನೀಡಲು ಮುಂದಾದರು. ಈ ಸಂಸ್ಥೆಯ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಲೆಂದು ಡಾ. ಹಂಸಲೇಖ ಹಾಗೂ ಹಾಡುಗಾರರಾದ ರಮೇಶ್ಚಂದ್ರ ರವರ ಮಾರ್ಗದರ್ಶನ ಪಡೆಯುತ್ತಾ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರು. ಇಂತಹ ಸಂಗೀತ ಸಂಸ್ಥೆ ಇಂದಿಗೂ ತನ್ನ ಕಾರ್ಯವನ್ನು ಮುಂದುವರೆಸುತ್ತಿದೆ.
ಇಂದಿನ ಸ್ಪರ್ಧಾ ಯುಗದಲ್ಲಿ ಉದ್ಯೋಗಕ್ಕಾಗಿ ಹಲವಾರು ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸ್ಪರ್ಧಾರ್ಥಿಗಳಿಗೆ ನಮ್ಮ ಕೈಲಾದ ಸಹಾಯವೆಂದು ತಿಳಿದು ಸಾಹಿತ್ಯ ಮಿತ್ರ ಎಂಬ ಕೃತಿ ರಚಿಸಿ ಹಲವಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಿದರು. ಇದರ ಸದುಪಯೋಗವನ್ನು ಹಲವಾರು ವಿದ್ಯಾರ್ಥಿಗಳು ಪಡೆದುಕೊಂಡರು.
ಶ್ರೀಯುತರು ಸಾಮಾಜಿಕ, ಸಾಹಿತ್ಯ, ಸಂಗೀತ ಕ್ಷೇತ್ರಕಷ್ಟೇ ಸೀಮಿತವಾಗದೆ ಸಿನಿಮಾ ಕ್ಷೇತ್ರದಲ್ಲಿಯೂ ಅಭಿರುಚಿಯುಳ್ಳವರಾಗಿದ್ದು ಡಾ. ರಾಜಕುಮಾರ್ ರವರ ಅಭಿಮಾನಿಯಾಗಿದ್ದರು. ಅವರು ಹಾಡಿದಂತಹ ಹಾಡುಗಳಿಗೆ, ನಟನೆಗೆ ಮನಸೋತ ಇವರು ಡಾ ರಾಜಕುಮಾರ್ ರವರ ಹೆಸರಿನಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ ಮಾಡುವುದು ಇವರ ಹವ್ಯಾಸವಾಗಿತ್ತು.ಡಾ. ರಾಜುಕುಮಾರ್ ರವರನ್ನು ಕುರಿತಂತೆ ರಚಿತವಾದ ಕವನಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪಕ್ಕೆ ತಂದು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಇಡೀ ನಾಡಿನುದ್ದಗಲಕ್ಕೂ ಹರಡಿಕೊಂಡಿದ್ದ ಡಾ. ರಾಜಕುಮಾರ್ ಅಭಿಮಾನಿಗಳನ್ನು ಒಂದು ಕಡೆ ಸೇರಿಸಿ ಕನ್ನಡದ ಮುತ್ತು ಎಂಬ ಪುಸ್ತಕವನ್ನು ಅಭಿಮಾನಿಗಳ ಕೈಗಿತ್ತರು. ಈ ಪುಸ್ತಕಕ್ಕೆ ಹೆಸರಾಂತ ಕವಿಗಳಾದ ಡಾ. ದೊಡ್ಡರಂಗೇಗೌಡ, ಸಿನಿಮಾನಟಿ ಜಯಮಾಲಾ, ಸಾ ರಾ ಗೋವಿಂದ್ ತಮ್ಮ ಅಭಿಪ್ರಾಯಗಳನ್ನು ಬರೆದುಕೊಟ್ಟು ಇವರು ಮಾಡುತ್ತಿರುವ ಕೆಲಸಕ್ಕೇ ಮೆಚ್ಚುಗೆ ವ್ಯಕ್ತಪಡಿಸಿದರು, ಇದಲ್ಲದೆ ನಾಡಿನುದ್ದಗಲದಿಂದ ಹಲವಾರು ಅಭಿಮಾನಿಗಳು ಮೆಚ್ಚುಗೆ ಪತ್ರ ಬರೆದು ಕಳಿಸಿದರು.
ಶ್ರೀಯುತರು ಸಾಮಾಜಿಕ ಕಾರ್ಯ ಮಾಡುವಂತಹ ಮನಸ್ಥಿತಿ ಉಳ್ಳವರಾದ್ದರಿಂದ ಜನಸಾಮಾನ್ಯರಿಗೆ ಅಲ್ಲಲ್ಲಿ ಆಗುತ್ತಿದ್ದಾ ತೊಡಕುಗಳನ್ನು ಮನಗಂಡು ದಿನನಿತ್ಯ ಪತ್ರಿಕೆಗಳಿಗೆ, ವಾಚಕರವಾಣಿಗೆ,ಟೀಕೆ ಟಿಪ್ಪಣಿ ಮುಂತಾದ ಅಂಕಣಕ್ಕೆ ತಮ್ಮ ಅಭಿಪ್ರಾಯ ಬರೆದು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಯಶಸ್ವಿಯಾಗುತ್ತಿದ್ದರು. ರಸ್ತೆಗಳು ಗುಂಡಿ ಬಿದ್ದಾಗ -ಡಾಂಬರೀಕರಣ ಮಾಡಿದಾಗ ಅಲ್ಲಲ್ಲಿ ಮ್ಯಾನ್ ಓಲ್ ತಲೆ ಎತ್ತಿ ನಿಂತಿದ್ದನ್ನು ಗಮನಿಸಿದ ಶ್ರೀಯುತರು ಮುಖದ ಮೊಡವೆಗಳಿಗೆ ಮುಲಾಮು ಹಚ್ಚಬಹುದು, ರಸ್ತೆಯ ಮೊಡವೆಗಳಿಗೆ ಮುಲಾಮು ಹಚ್ಚುವವರು ಯಾರು ? ಎಂದು ಬರೆದು BBMP ಅಧಿಕಾರಿಗಳ ಗಮನ ಸೆಳೆದದ್ದೂ ಉಂಟು. ಹಾಗು ರಸ್ತೆ ಬೀದಿ ದೀಪಗಳು ಹಗಲಿನ ವೇಳೆ ಉರಿಯುತ್ತಿದ್ದಾಗ ದೇಶದ ಎಷ್ಟೋ ಮನೆಗಳಿಗೆ ರಾತ್ರಿ ಸಮಯವೇ ದೀಪವಿಲ್ಲದಿದ್ದರೂ ಇಂದು ಹಾಡು ಹಗಲೇ ಬೀದಿ ದೀಪಗಳು ಜಗಮಗಿಸುತ್ತಿರುವುದನ್ನು ನೋಡಿದರೆ ಬೆಂಗಳೂರಿನ ಜನರು ಕಣ್ಣಿದ್ದು ಕುರುಡರಂತೆ ಎಂದು ಟೀಕಿಸಿ BESCOM ಅಧಿಕಾರಿಗಳ ಗಮನ ಸೆಳೆದು ಅನಾವಸ್ಯಕವಾಗಿ ಸಾರ್ವಜನಿಕ ಸಂಪತ್ತನ್ನು ಹಾಳುಮಾಡಬಾರದೆಂದು ಎಚ್ಚರಿಕೆಯ ಬರಹವನ್ನು ಬರೆದದ್ದೂ ಉಂಟು. ಹೀಗೆ ಹಲವಾರು ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ತಮ್ಮದೇ ಆದ ಒಂದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾ ಬೆಂಗಳೂರಿಗೆ ವಲಸೆ ಬಂದ ಬಡತನದ ಮಕ್ಕಳಿಗೆ , ದೀನ ದಲಿತರಿಗೆ, ಅಸಹಾಯಕ ಹೆಣ್ಣು ಮಕ್ಕಳಿಗೆ ಕಡಿಮೆ /ಉಚಿತ ವಾಗಿಯೂ ಶುಲ್ಕ ಪಡೆದು ಶಿಕ್ಷಣವನ್ನು ನೀಡಲು ಮುಂದಾದರು. ಇವರು ಎಲ್ಲಾ ರಂಗದಲ್ಲಿಯೂ ಹೆಚ್ಚು ಆಸಕ್ತಿಯನ್ನು ತೋರುವ ಕಾರಣದಿಂದ ಹಲವಾರು ಸಂಘ ಸಂಸ್ಥೆಗಳು , ಶಿಕ್ಷಣ ಸಂಸ್ಥೆಗಳು ಸ್ಥಳೀಯ ಸಂಸ್ಥೆಗಳು ಇವರನ್ನು ತಮ್ಮ ಸಂಸ್ಥೆಗೆ ಆಹ್ವಾನಿಸಿ ಸನ್ಮಾನಿಸಿ ಗೌರವಪೂರ್ವಕವಾಗಿ ನಡೆಸಿಕೊಂಡಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಇದರ ನಡುವೆಯೂ ಹಲವಾರು ಗೆಳೆಯರೊಡಗೂಡಿ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಬೇಟಿ ಮಾಡುವುದು, ಮಲೆನಾಡಿನ ಮಡಿಲಲ್ಲಿ ಸುತ್ತಾಡಿ ಬರುವುದು, ಬೆಟ್ಟ ಗುಡ್ಡಗಳ ಪ್ರದೇಶಗಳನ್ನೂ ಗೆಳೆಯರೊಡನೆ ಸುತ್ತುವುದು, ಇವರ ಬಹುದೊಡ್ಡ ಹವ್ಯಾಸವಾಗಿತ್ತು.ಸ್ಥಳಗಳನ್ನು ಸುತ್ತಾಡಿ ಬಂದ ಮೇಲೆ ಸುಮ್ಮನೆ ಕೂರುವ ಜಾಯಮಾನ ಅವರದಲ್ಲಾ, ಅದನ್ನು ಪುಸ್ತಕ ರೂಪಕ್ಕೆ ತಂದು ಲೋಕಾರ್ಪಣೆ ಮಾಡುವುದು ಶ್ರೀಯುತರ ಬಹಳ ದೊಡ್ಡ ಹವ್ಯಾಸವಾಗಿತ್ತು. ಹಾಗಾಗಿ ಇವರ ಸಾವನದುರ್ಗ ಒಂದು ಪರಿಚಯ, ಕುಮಾರ ಪರ್ವತ ಒಂದು ಚಾರಣದ ಸುತ್ತ, ಈ ಕೃತಿಗಳು ಇವರು ನಾಡಿನಲ್ಲಿ ತಿರುಗಾಡಿದ ಅನುಭವದ ಪ್ರವಾಸ ಕಥನಗಳೆಂದೇ ಕರೆಯಬಹುದು.
ಶ್ರೀಯುತರಿಗೆ ಅಪಾರ ಪ್ರಮಾಣದಲ್ಲಿ ಶಿಷ್ಯವೃಂದವಿದ್ದು ಹಲವಾರು ಶಿಷ್ಯರು ಸರ್ಕಾರದ ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ಇಂದಿಗೂ ತಮ್ಮ ಗುರುಗಳನ್ನು ಕಂಡೊಡನೆ ಎದ್ದು ನಿಂತು ನಮಸ್ಕರಿಸಿ ಸತ್ಕರಿಸಿ ಗೌರವಿಸಿವುದನ್ನು ಕಾಣಬಹುದು. ಇವರು ಶಿಷ್ಯವೃಂದವನ್ನು ಹೊಂದಿರುವಂತೆ ಹಲವಾರು ಸ್ನೇಹಬಳಗ ಹೊಂದಿದ್ದು ಒಮ್ಮೆ ಕರೆದರೆ ಸಾವಿರಾರು ಸಂಖ್ಯೆಯಲ್ಲಿ ಮನೆ ಮುಂದೆ ಬಂದು ನಿಲ್ಲುವಷ್ಟು ಉತ್ತಮ ಸ್ನೇಹಮಯಿಯಾಗಿದ್ದಾರೆ. ಇವರು ಹಲವಾರು ಶಿಷ್ಯರನ್ನು ಸ್ನೇಹಿತರನ್ನು ಹೊಂದಿರುವಂತೆ ಹಲವಾರು ಬುದ್ದಿಜೀವಿಗಳು, ಸಮಾಜ ಚಿಂತಕರು, ಸಾಹಿತಿಗಳು ನಟರು, ನಾಟಕಕಾರರು , ಜಾನಪದ ತಜ್ಞನರು, ಸಂಘ ಸಂಸ್ಥೆಯವರು, ಮಠಾಧೀಶರುಗಳ ಒಡನಾಟವು ಉಂಟು. ಶ್ರೀಯುತರು ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮಿ ಗಳ ಆಶೀರ್ವಚನಗಳನ್ನು ಆಲಿಸಿ ಮೈಗೂಡಿಸಿಕೊಡವರು. ಡಾ. ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಡಾ. ದೊಡ್ಡರಂಗೇಗೌಡ, ಡಾ ಬಸವರಾಜ ಕಲ್ಗುಡಿ, ಡಾ. ಕೂಡ್ಲುರು ವೆಂಕಟಪ್ಪ, ಎಲ್ ಎನ್ ಮುಕುಂದರಾಜ್, ಜಾಣಗೆರೆ ವೆಂಕಟರಾಮಯ್ಯ, ತಾ ಸಿ ತಿಮ್ಮಯ್ಯ, ಕರೀಗೌಡ ಬೀಚನಹಳ್ಳಿ ಪ್ರೊ ಶಿವರಾಮಯ್ಯ, ವೈ ವಿ ಲಲಿತಾಂಬ, ಹೀಗೆ ಹಲವಾರು ಚಿಂತಕರು ಬರಹಗಾರರ ಒಡನಾಟದಲ್ಲಿ ಬೆಳೆದು ಸಾಹಿತ್ಯ ಹಾಗು ಜನಪರ, ಸಮಾಜಮುಖಿ ಚಿಂತನೆಯಲ್ಲಿ ಪಕ್ವವಾದವರು. ಹೀಗೆ ತುಕಾರಾಂ ರವರ ಬಗ್ಗೆ ಹೇಳುತ್ತಾ ಹೊರಟರೆ ಅವರ ಬಗ್ಗೆ ಒಂದು ಗ್ರಂಥವನ್ನೇ ಬರೆಯಬಹುದು, ಅಷ್ಟು ಸರಳ, ಸ್ವಾಭಿಮಾನ, ಸಜ್ಜನಿಕೆ ಸಂಯಮ ಜೀವಿ ನನ್ನ ನೆಚ್ಚಿನ ತುಕಾರಾಂ. ಇವರು ತಮಗೆ ಅನಿಸಿದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಚರ್ಚಿಸುವ ವಿಶೇಷ ಗುಣವುಳ್ಳವರಾಗಿದ್ದು, ಒಮ್ಮೆ ಇವರು ತಮ್ಮ ಉನ್ನತ ವ್ಯಾಸಂಗದ ಬಗ್ಗೆ ಚರ್ಚೆ ಮಾಡಿ ಮತ್ತೆ ಸಂಶೋಧನೆಯಲ್ಲಿ ವಿದ್ಯಾರ್ಥಿಯಾಗಿ ಅಧ್ಯಯನಮಾಡಬೇಕೆಂದು ತೀರ್ಮಾನಿಸಿ ತಮ್ಮ ಜೀವನವನ್ನು ಮತ್ತೆ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಕುಪ್ಪಂ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಪಡೆದು ತಮ್ಮ ಸಂಶೋಧನೆಯ ವಿಚಾರವಾಗಿ ಮೈಸೂರು ಮಹಾರಾಜರ ಕಾಲದಲ್ಲಿ ರಾಜಸೇವಾಸಕ್ತ ರಾಗಿ ಕಾರ್ಯ ನಿರ್ವಹಿಸಿದ ಸಿ ಕೆ ವೆಂಕಟರಾಂಮಯ್ಯ ನವರ ಬದುಕು ಬರಹ ಎಂಬ ವಿಷಯದಡಿಯಲ್ಲಿ ಡಾ ಕೂಡ್ಲುರು ವೆಂಕಟಪ್ಪ ಹಾಗು ಡಾ ಬಸವರಾಜು ಕಲ್ಗುಡಿ ಯವರ ಮಾರ್ಗದರ್ಶನ ಪಡೆದು ತಮ್ಮ ಪಿ ಹೆಚ್ ಡಿ ಮಹಾ ಪ್ರಬಂಧವನ್ನು ಮಂಡಿಸಿದ ಶ್ರೀಯುತರಿಗೆ ಡಾಕ್ಟರೇಟ್ ಪದವಿ ದೊರೆಯಿತು. ಕೇವಲ ಹೆಚ್ ತುಕಾರಾಂ ಎಂದು ಪರಿಚಯವಾಗಿದ್ದವರು ನಂತರ ಡಾ. ಹೆಚ್ ತುಕಾರಾಂ ಎಂದು ಸಮಾಜಕ್ಕೆ ಪರಿಚಯವಾಗತೊಡಗಿದರು.
ಡಾ. ಹೆಚ್ ತುಕಾರಾಂ ರವರು ಇಷ್ಟೆಲ್ಲಾ ಕಾರ್ಯವೈಖರಿಯನ್ನು ನಾವು ಗಮನಿಸಿದರೆ ಇವರಿಗೆ ಗೌರವ ಡಾಕ್ಟರೇಟ್ ನೀಡಲು ಯಾವುದೇ ಸಂದೇಹವೇ ಇಲ್ಲಾ. ಇಷ್ಟೆಲ್ಲಾ ಆದ ಬಳಿಕ ಡಾ.ತುಕಾರಾಂ ರವರು ಸುಮ್ಮನೆ ಕೂರದ ವ್ಯಕ್ತಿಯಲ್ಲಾ, ಇವರು ರಾಜಕೀಯ ರಂಗವನ್ನು ಪ್ರವೇಶಿಸಿರುವುದು ನಮಗೆಲ್ಲಾ ಬಹಳ ಸಂತೋಷದ ವಿಷಯವಾಗಿದೆ. ಶ್ರೀಯುತರು ಮೂಲತಃ ರಾಜಕೀಯ ಕುಟುಂಬದಲ್ಲೇ ಬೆಳೆದು ಬಂದವರು, ಇವರ ತಂದೆ ದಿವಂಗತ ಹೊಂಬಣ್ಣ ನವರು ಅಂದಿನ ಕಾಲಕ್ಕೆ ನೇರವಾಗಿ ಎಂ ವಿ ಚಂದ್ರಶೇಖರ ಮೂರ್ತಿ ಯವರೊಡನೆ ನೇರ ಸಂಪರ್ಕದಲ್ಲಿದ್ದವರು ಹಾಗು ಸ್ಥಳೀಯವಾಗಿ ಹೆಚ್ಚು ಪ್ರಭಾವಶಾಲಿಗಳಾಗಿದ್ದವರು. ಹೊಂಬಣ್ಣನವರು ಗಾಂಧಿವಾದ ಹಾಗು ಇಂದಿರಾಗಾಂಧಿಯವರ ಆಡಳಿತದ ವೈಖರಿಯಿಂದ ಪ್ರಭಾವಿತರಾಗಿದ್ದವರು. ಇಂದು ತುಕಾರಾಂರವರು ಸಹ ಇದೇ ದಾರಿಯಲ್ಲಿ ಸಾಗಲೇಬೇಕು ಎಂದು ಪಣತೊಟ್ಟು ರಾಜಕೀಯ ರಂಗವನ್ನು ಪ್ರವೇಶಿಸಿದ್ದು ಡಿ ಕೆ ಶಿವಕುಮಾರ್ ಹಾಗು ಡಿ ಕೆ ಸುರೇಶ್ ರವರ ನಾಯಕತ್ವದಲ್ಲಿ ತಮ್ಮ ರಾಜಕೀಯ ಚದುರಂಗದಾಟಕ್ಕೆ ದುಮುಕಿದ್ದಾರೆ. ಹಾಗು ತನ್ನ ವ್ಯಾಪ್ತಿಗೆ ಬರುವಂತಹ ಎಲ್ಲಾ ಮತದಾರರನ್ನು, ಸ್ವ ಗ್ರಾಮಸ್ಥರನ್ನು, ವಿದ್ಯಾರ್ಥಿಗಳನ್ನು ಹಲವು ಸ್ಥಳೀಯ ನಾಯಕರನ್ನು, ಮಹಿಳಾ ಸಮಾಜವನ್ನು ಸಂಘಟಿಸಲು ಮುಂಜಾನೆ ಸೈಕಲ್ ಜಾಥಾ ಮಾಡುವ ಮೂಲಕ ತಮ್ಮ ಅರಿವಿನ ಕಾರ್ಯಕ್ರಮ ಕೈಗೊಂಡಿದ್ದಾರೆ. ಇವರ ಕಾರ್ಯಕ್ರಮಗಳು ಸದಾ ಯಶಸ್ವಿಯಾಗಲಿ, ಜನರಿಗೆ ಇವರ ಸಮಾನತೆಯ ಜ್ಞಾನ ಪಸರಿಸಲಿ, ಇವರ ಸಮಾಜಪರ, ಜನಪರ ಚಿಂತನೆಗಳು ಎಲ್ಲರ ಮನ ಮುಟ್ಟಲಿ, ಇವರಿಗೆ ಮತದಾರರ ಜನಸಾಮಾನ್ಯರ ಆಶೀರ್ವಾದ ಸದಾ ಇರಲಿ ಎಂದು ಹರಿಸುತ್ತೇನೆ. ಶ್ರೀಯುತರು ತಮ್ಮ ರಾಜಕೀಯ ರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದು ತಮ್ಮ ತಂದೆಯ ಕನಸನ್ನು ನನಸು ಮಾಡುವುದರ ಜೊತೆಗೆ ಎಲ್ಲಾ ಸ್ನೇಹ ಬಳಗಕ್ಕೆ, ಜನಸಾಮಾನ್ಯರಿಗೆ ಹೆಚ್ಚು ಹೆಚ್ಚು ಅನುಕೂಲಗಳನ್ನು ಮಾಡಲಿ ಎಂದು ಹಾರೈಸುತ್ತೇನೆ.
ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾನು ಏನು ಕೊಡುತ್ತಿದ್ದೇನೆ,
ಈ ದಿಕ್ಕಿನಲ್ಲಿ ಇವರ ಪಯಣ ಸದಾ ಸಾಗಲಿ ಎಂದು ನಾನು ಸಹ ವೈಯಕ್ತಿಕವಾಗಿ ಹಾರೈಸುತ್ತೇನೆ.
ಇಲ್ಲಿ ಪಕ್ಷಗಳು ಮುಖ್ಯವಲ್ಲಾ ನಾವು ಮಾಡುವ ಜನಪರ ಕೆಲಸಗಳು, ಅನುಕೂಲಗಳು ಬಹಳ ಮುಖ್ಯವಾದವುಗಳು ಎನ್ನುವುದು ಬಹಳ ಮುಖ್ಯವಾದ ವಿಚಾರ. ನಾನು ಒಬ್ಬ ಆತ್ಮೀಯನಾಗಿ ನಿಮ್ಮನ್ನು ತುಂಬ ಹತ್ತಿರದಿಂದ ಬಲ್ಲವನಾಗಿ ಈ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆಯೇ ಹೊರತು ನನಗೆ ಯಾವ ಪಕ್ಷವನ್ನು ಬೆಂಬಲಿಸುವ -ತೆಗಳುವ ರಾಜಕೀಯ ರಂಗದಲ್ಲೂ ನೇರವಾಗಿ ಪಾಲ್ಗೊಳ್ಳುವ ಕಾರ್ಯವನ್ನು ಮಾಡುವುದಿಲ್ಲವೆಂದು ಹೇಳಲು ಬಯಸುತ್ತೇನೆ.
“ಹೆಚ್ ತುಕಾರಂ ರವರು ಡಾ ಹೆಚ್ ತುಕಾರಾಂ ಆಗಲು ಅವರ ಅವಿರತ ಪರಿಶ್ರಮದ ಪ್ರತಿಫಲವೇ ಅವರ ಯಶಸ್ಸಿಗೆ ಭದ್ರ ಬುನಾದಿ”
ಶುಭವಾಗಲಿ ಸರ್
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw