ರಾಜ್ಯವೇ ಬೆಚ್ಚಿಬೀಳಿಸುವ ಸುದ್ದಿ: ಪ್ರಸಿದ್ಧ ಮಠದ ಸ್ವಾಮೀಜಿಯಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಮೈಸೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಮಠದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕವಾಗಿ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಅವರು ಲೈಂಗಿಕವಾಗಿ ತೊಂದರೆ ನೀಡುತ್ತಿದ್ದಾರೆ. ಇದು ಬಹಳಷ್ಟು ದಿನಗಳಿಂದ ನಡೆಯುತ್ತಿದ್ದು, ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಮೊರೆ ಹೋಗಿದ್ದರು.
ಸಂಸ್ಥೆ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶುಕ್ರವಾರ ವಿಚಾರಣೆ ನಡೆಸಿತು. ಮಕ್ಕಳ ಹೇಳಿಕೆಯಲ್ಲಿ ಸತ್ಯ ಇರುವುದರಿಂದ ಸ್ವಾಮೀಜಿ ವಿರುದ್ದ ಪೋಕ್ಸೊ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿ ಆದೇಶ ನೀಡಿತು. ಸಮಿತಿ ಆದೇಶದ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ನೀಡಿದ ದೂರು ಆಧರಿಸಿ ನಜರ್‌ಬಾದ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಚಿತ್ರದುರ್ಗದ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್‌ಎಸ್ ಎಲ್‌ಸಿ ಓದುತ್ತಿರುವ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇಂಥ ಅನುಭವ ಹಲವು ವಿದ್ಯಾರ್ಥಿನಿಯರಿಗೆ ಆಗಿದ್ದರೂ ದೂರು ನೀಡಲು ಹೆದರುತ್ತಿದ್ದರು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆನ್ನಲಾಗಿದೆ.
ವಿದ್ಯಾರ್ಥಿನಿಯರಿಗೆ ಚಿತ್ರದುರ್ಗದಲ್ಲಿ ನ್ಯಾಯ ಸಿಗುವುದಿಲ್ಲ ಎನ್ನುವುದು ಮನವರಿಕೆಯಾದಾಗ ಬೆಂಗಳೂರಿಗೆ ಆಗಮಿಸಿ ದೂರು ನೀಡಲು ಯತ್ನಿಸಿದ್ದರು. ಆದರೆ, ಅಲ್ಲಿಯೂ ನ್ಯಾಯ ಸಿಗದಿದ್ದಾಗ, ಮೈಸೂರಿನ ಒಡನಾಡಿ ಸಂಸ್ಥೆಗೆ ಆಗಮಿಸಿ, ದೂರು ನೀಡಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗೆ ಜೀವ ಬೆದರಿಕೆ ಇರುವ ಕಾರಣ, ಮೈಸೂರಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿನಿಯರ ಆರೋಪದ ಹಿಂದೆ ರಾಜಕೀಯ ಹುನ್ನಾರಗಳು ಅಥವಾ ಇನ್ನೇನಾದರೂ ಉದ್ದೇಶ ಇವೆಯೇ ಎಂಬೆಲ್ಲ ವಿಚಾರಗಳನ್ನು ಗಮನಿಸಿ, ಇದ್ಯಾವುದೂ ಇಲ್ಲ ಎನ್ನುವುದು ತಿಳಿದಾಗ ಸಂಸ್ಥೆ ಮುಂದಿನ ಕ್ರಮ ಕೈಗೊಂಡಿದೆ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಒಡನಾಡಿ ಸಂಸ್ಥೆಯ ಪರಶು ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka