ಅಸ್ತಂಗತವಾದ ದೊಡ್ಡ ಚೇತನ ಡಾ.ವಿ.ಲಕ್ಷ್ಮಿನಾರಾಯಣ್‌ - Mahanayaka
10:29 PM Wednesday 5 - February 2025

ಅಸ್ತಂಗತವಾದ ದೊಡ್ಡ ಚೇತನ ಡಾ.ವಿ.ಲಕ್ಷ್ಮಿನಾರಾಯಣ್‌

dr v lakshminarayan
25/04/2024

  • ನಾ ದಿವಾಕರ

ಕಳೆದ ಐದು ದಶಕಗಳಿಂದ ಮೈಸೂರಿನ ಎಲ್ಲ ಪ್ರಗತಿಪರ, ಎಡಪಂಥೀಯ, ಮಾನವ ಹಕ್ಕುಗಳ, ಮಹಿಳಾ ಸಮಾನತೆಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದೇ ಅಲ್ಲದೆ ತಮ್ಮ ಮಾರ್ಕ್ಸ್‌ವಾದಿ ಚಿಂತನೆಯನ್ನು ಯುವ ಸಮುದಾಯದಲ್ಲಿ ನಿರಂತರವಾಗಿ ಬಿತ್ತುತ್ತಾ ಕ್ರಿಯಾಶೀಲರಾಗಿದ್ದ ಕಾಮ್ರೇಡ್‌ ಡಾ.ವಿ.ಲಕ್ಷ್ಮಿನಾರಾಯಣ್‌ ತಮ್ಮ 71ನೆಯ ವಯಸ್ಸಿನಲ್ಲಿ ಬದುಕಿನ ಪಯಣಕ್ಕೆ ಅಂತ್ಯ ಹಾಡಿದ್ದಾರೆ.

22 ಏಪ್ರಿಲ್‌ 2024ರ ರಾತ್ರಿ 11 ಗಂಟೆಯ ವೇಳೆಗೆ ಹಠಾತ್‌ ಹೃದಯಾಘಾತದಿಂದ ಕೊನೆಯುಸಿರೆಳೆದ ಡಾ. ವಿ. ಲಕ್ಷ್ಮೀನಾರಾಯಣ್‌ ಮೂಲತಃ ಕೆ.ಆರ್.‌ನಗರದ ಎಡತೊರೆ ಗ್ರಾಮದವರಾಗಿದ್ದು ಮೈಸೂರಿನ ಕೆ.ಆರ್.‌ಆಸ್ಪತ್ರೆಯಲ್ಲಿ ಚರ್ಮವೈದ್ಯರಾಗಿ, ಕುಷ್ಟರೋಗ ತಜ್ಞರಾಗಿ ನಾಲ್ಕು ದಶಕಗಳ ಸೇವೆ ಸಲ್ಲಿಸಿದ್ದರು. ಸರ್ಕಾರಿ ವೈದ್ಯರಾಗಿ ಹುಣಸೂರು, ನಂಜನಗೂಡು ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದರು.

1970ರ ದಶಕದಲ್ಲಿ ಮೈಸೂರಿನಲ್ಲಿ ರೂಪುಗೊಂಡ ಸಮಾಜವಾದಿ ಚಳುವಳಿ ಮತ್ತು ದಲಿತ ಚಳುವಳಿಗಳ ಆರಂಭಿಕ ಘಟ್ಟದಲ್ಲಿ ತಮ್ಮ ಮಾರ್ಕ್ಸ್‌ವಾದಿ ಚಿಂತನೆಯೊಂದಿಗೆ ಸಾಮಾಜಿಕ ಚಳುವಳಿಗೆ ಧುಮುಕಿದ ಡಾ. ಲಕ್ಷ್ಮಿನಾರಾಯಣ್‌ ಪಿಯುಸಿಎಲ್‌ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕೌನ್ಸಿಲ್‌ ಸದಸ್ಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಎಡಪಂಥೀಯ ಚಳುವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕಾಮ್ರೇಡ್‌ ಲಕ್ಷ್ಮಿ ತಮ್ಮ ಗೆಳೆಯರೊಡಗೂಡಿ 1974ರಲ್ಲೇ ಮೈಸೂರಿನ ಕುಕ್ಕರಹಳ್ಳಿಯಲ್ಲಿ ಮಾರ್ಕ್ಸ್‌ವಾದಿ ಗ್ರಂಥಾಲಯವನ್ನು ಸ್ಥಾಪಿಸಿದ್ದರು. ಇಂದಿಗೂ ಅವರ ಮನೆಯ ನೆಲಮಹಡಿಯಲ್ಲಿ ʼಅರಿವು ʼ ಗ್ರಂಥಾಲಯ ತೆರೆದೇ ಇರುತ್ತದೆ.

ಪಿಯುಸಿಎಲ್‌ ರಾಜ್ಯ ಕಾರ್ಯದರ್ಶಿಯಾಗಿ ಹಲವು ಮಾನವ ಹಕ್ಕು ಉಲ್ಲಂಘನೆಯ ಘಟನೆಗಳ ಸತ್ಯಶೋಧನಾ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಡಾ. ಲಕ್ಷ್ಮಿನಾರಾಯಣ್‌, ಮೈಸೂರಿನ ಎಲ್ಲ ಪ್ರಗತಿಪರ ಚಳುವಳಿಗಳಲ್ಲಿ, ಮಹಿಳಾ ಆಂದೋಲನಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಅವರಿಂದ ಪ್ರೇರಣೆ ಪಡೆದ ಅನೇಕ ಯುವಕರು ಇಂದು ವಿವಿಧ ಚಳುವಳಿಗಳಲ್ಲಿ ಸಕ್ರಿಯವಾಗಿದ್ದಾರೆ.  ರಾಜ್ಯದ ಯಾವುದೇ ಮೂಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದರೂ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಮಹಿಳಾ ದೌರ್ಜನ್ಯಗಳು ನಡೆದರೂ ಮುಂಚೂಣಿಯಲ್ಲಿ ನಿಂತು ಸತ್ಯಶೋಧನೆ ನಡೆಸುವ ಮೂಲಕ ನ್ಯಾಯ ದೊರಕಿಸಿಕೊಡಲು  ಮುಂದೂಣಿಯಲ್ಲಿ ನಿಲ್ಲುತ್ತಿದ್ದ ಡಾ. ವಿ. ಲಕ್ಷ್ಮಿನಾರಾಯಣ್‌ ಅವರ ಜೀವನ ಸಂಗಾತಿ ಡಾ. ಇ. ರತಿರಾವ್‌ ಅವರ ಎಲ್ಲ ಮಹಿಳಾ ಪರ ಹೋರಾಟಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿದ್ದರು. ತಮ್ಮ ಸ್ವಗೃಹದಲ್ಲಿ ಮಾರ್ಕ್ಸ್‌, ಅಂಬೇಡ್ಕರ್‌, ಪೆರಿಯಾರ್‌ ಮುಂತಾದ ಚಿಂತಕರ ಬಗ್ಗೆ ಕಾರ್ಯಾಗಾರಗಳನ್ನು, ಸಣ್ಣ ಚರ್ಚಾಕೂಟಗಳನ್ನು ಏರ್ಪಡಿಸುವ ಮೂಲಕ ಡಾ. ಲಕ್ಷ್ಮಿನಾರಾಯಣ್‌ ಸಮಾಜದ ಯುವ ಪೀಳಿಗೆಯ ಬೌದ್ಧಿಕ ವಿಕಸನಕ್ಕೆ ಪ್ರೇರಣೆಯಾಗಿದ್ದರು.

ಮೈಸೂರಿನ ಜನಾಂದೋಲನಗಳ ಒಡನಾಡಿ ಕಾಮ್ರೇಡ್‌ ಡಾ. ಲಕ್ಷ್ಮಿನಾರಾಯಣ್‌ ಅವರ ಅಕಾಲಿಕ ಮರಣದಿಂದ ಮೈಸೂರಿನ ಪ್ರಗತಿಪರ ವಲಯದಲ್ಲಿ ಒಂದು ಶೂನ್ಯ ಸೃಷ್ಟಿಯಾಗಿದೆ. ಅವರ ವೈಚಾರಿಕತೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಜನಪರ ಚಿಂತನೆ ಮುಂದಿನ ತಲೆಮಾರಿಗೆ ಮಾರ್ಗದರ್ಶಿಯಾಗಿ ಉಳಿಯಲಿದೆ.


 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ