ಡ್ರೈನೇಜ್ ಅವ್ಯವಸ್ಥೆ ಹಾಗೂ ತಡೆಗೋಡೆ ಭೀತಿ: ಬೆಳ್ಮ ಗ್ರಾಮಸ್ಥರಿಂದ ಪಂಚಾಯತ್ ಕಚೇರಿಯೆದುರು ಪ್ರತಿಭಟನೆ

ಮಂಗಳೂರು: ಕುಸಿತದ ಭೀತಿಯಲ್ಲಿರುವ ಪೆಟ್ರೋಲ್ ಪಂಪ್ ನ ತಡೆಗೋಡೆ ಹಾಗೂ ಅನುಮತಿಯಿಲ್ಲದ ಬಹುಮಹಡಿ ಕಟ್ಟಡಗಳಿಂದ ಬಹಿರಂಗವಾಗಿ ಹರಿಯುತ್ತಿರುವ ಡ್ರೈನೇಜ್ ನೀರಿನಿಂದಾಗಿ ತೊಂದರೆಗೀಡಾಗಿರುವ ಬೆಳ್ಮ ಗ್ರಾಮದ ಕಾನೆಕೆರೆ ನಾಗರಿಕರಿಂದ ಬೆಳ್ಮ ಗ್ರಾಮ ಪಂಚಾಯತ್ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಹೋರಾಟ ಸಮಿತಿಯ ನೇತ್ರತ್ವದಲ್ಲಿ ಜನವಿರೋಧಿಯಾಗಿ ವರ್ತಿಸುತ್ತಿರುವ ಬೆಳ್ಮ ಗ್ರಾಮ ಪಂಚಾಯತ್, PWD ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲೆಯ ಕಾರ್ಮಿಕ ಮುಖಂಡರೂ, ಹೋರಾಟ ಸಮಿತಿಯ ಗೌರವ ಸಲಹೆಗಾರರಾದ ಸುನಿಲ್ ಕುಮಾರ್ ಬಜಾಲ್ ರವರು, ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನೆಕೆರೆ ಪರಿಸರದ ನಾಗರಿಕರು ತನ್ನದಲ್ಲದ ತಪ್ಪಿಗೆ ವಿನಾಃ ಕಾರಣ ಮಾನಸಿಕ ಹಿಂಸೆಗೆ ಒಳಗಾಗಿರುವುದಲ್ಲದೆ ಭಯಭೀತ ವಾತಾವರಣದಲ್ಲಿ ಬದುಕುವಂತಾಗಿದೆ. ದೇರಳಕಟ್ಟೆ ಜಂಕ್ಷನ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪೆಟ್ರೋಲ್ ಪಂಪ್ ನ ಹಿಂಭಾಗದಲ್ಲಿ ಭಾರೀ ಎತ್ತರದ ತಡೆಗೋಡೆಯನ್ನು ಕಟ್ಟಲಾಗಿದ್ದು,ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಇದರ ಕೆಳಭಾಗದಲ್ಲಿ ದೇರಳಕಟ್ಟೆಯಿಂದ ರೆಂಜಾಡಿ, ಅಂಬ್ಲಮೊಗರು, ಪಾವೂರು ಹರೇಕಳ ಗ್ರಾಮಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ರಸ್ತೆಯನ್ನು PWD ಇಲಾಖೆ ಜಿಲ್ಲಾಧಿಕಾರಿ ಗಳ ಆದೇಶದಂತೆ ಬಂದ್ ಮಾಡಿದೆ. ಇದರಿಂದ ಸ್ಥಳೀಯ ನಾಗರಿಕರ ನೋವನ್ನು ಹೇಳತೀರಾದಾಗಿದೆ. ಮಾತ್ರವಲ್ಲದೆ ಪೆಟ್ರೋಲ್ ಪಂಪ್ ಗೆ ಸ್ಥಳೀಯ ಪಂಚಾಯತ್ ನಿಂದ ಅನುಮತಿ ನೀಡಲಾಗಿಲ್ಲ ಎಂಬುದರ ಬಗ್ಗೆ ಗುಮಾನಿ ಕೂಡ ಇದೆ ಎಂದು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲೆಯ ಹಿರಿಯ ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್ ರವರು ಮಾತನಾಡುತ್ತಾ, ಬೆಳ್ಮ ಗ್ರಾಮಪಂಚಾಯತ್ ಪೆಟ್ರೋಲ್ ಪಂಪ್ ಮಾಲಕರು ಹಾಗೂ ತಡೆಗೋಡೆ ಕೆಳಭಾಗದಲ್ಲಿರುವ ಸಂತ್ರಸ್ತರನ್ನು ಕರೆದು ಈ ಹಿಂದೆ ಸಭೆ ನಡೆಸಿತ್ತು. ಪೆಟ್ರೋಲ್ ಪಂಪ್ ಮಾಲಕರು ಸಂತ್ರಸ್ತರಿಗೆ ಪರ್ಯಾಯ ಮನೆ ಒದಗಿಸುವ ಹಾಗೂ ಅದರ ಬಾಡಿಗೆ ಹಣ ನೀಡುವುದಾಗಿ ವಾಗ್ದಾನವಿತ್ತರೂ ಇದುವರೆಗೂ ಈಡೇರಿಲ್ಲಎಂದು ಹೇಳಿದರು.
ಜಿಲ್ಲೆಯ ಯುವಜನ ಮುಖಂಡರಾದ ಸಂತೋಷ್ ಬಜಾಲ್ ರವರು ಮಾತನಾಡಿ, ದೇರಳಕಟ್ಟೆ ಜಂಕ್ಷನ್ ನಲ್ಲಿ 4 ಬಹುಮಹಡಿ ಕಟ್ಟಡಗಳು ತಲೆಎತ್ತಿದ್ದು, ಅದಕ್ಕೆ ಡ್ರೈನೇಜ್ ವ್ಯವಸ್ಥೆವಿಲ್ಲದೆ ಗಲೀಜು ನೀರು ಕಾನೆಕೆರೆ ರಸ್ತೆಯಲ್ಲೇ ಹರಿದಾಡಿ ತೀರಾ ದುರ್ನಾತ ಬೀರುತ್ತಿದೆ. ಅಲ್ಲಿ ವಾಸಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ನೀರು ಮುಖ್ಯ ರಸ್ತೆಯ ಮೂಲಕ ಹಾದುಹೋಗಿ ಕಾನೆಕೆರೆ ನಿವಾಸಿಗಳ ಬಾವಿ ನೀರಿಗೆ ಸೇರಿ ಮಿಶ್ರಣವಾಗಿದೆ. ಡ್ರೈನೇಜ್ ವ್ಯವಸ್ಥೆ ಇಲ್ಲದೆ ಅಂತಹ ಬಹುಮಹಡಿ ಕಟ್ಟಡಗಳಿಗೆ ಅನುಮತಿ ನೀಡಿರುವ ಬೆಳ್ಮ ಗ್ರಾಮ ಪಂಚಾಯತ್ ನ ಧೋರಣೆ ತೀರಾ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಗೌರವ ಸಲಹೆಗಾರರಾದ ರಿಜ್ವಾನ್ ಹರೇಕಳ ರವರು, ತಿಂಗಳಿಗೊಮ್ಮೆ ಕಾರ್ಯಾಚರಿಸುವ ಬೆಳ್ಮ ಗ್ರಾಮ ಪಂಚಾಯತ್ ಕಸ ವಿಲೇವಾರಿ ವಾಹನ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದೆ ತ್ಯಾಜ್ಯದ ರಾಶಿಗಳು ಕಾನೆಕೆರೆ ರಸ್ತೆಯ ಇಕ್ಕೆಲಗಳಲ್ಲಿ ರಾರಾಜಿಸುತ್ತಿದೆ. ಇದರಿಂದಾಗಿ ರಸ್ತೆಯ ಉದ್ದಗಲಕ್ಕೂ ದುರ್ನಾತ ಬೀರುತ್ತಿದೆ. ಒಟ್ಟಿನಲ್ಲಿ ಸ್ಥಳೀಯ ಗ್ರಾಮಸ್ಥರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕಾದ ಬೆಳ್ಮ ಗ್ರಾಮ ಪಂಚಾಯತ್,PWD ಹಾಗೂ ಜಿಲ್ಲಾಡಳಿತ ತೀರಾ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಲು ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಮೇಲಾಧಿಕಾರಿಗಳು ಬರುವಂತೆ ಹಠ ಹಿಡಿದರು. ಅದರಂತೆ ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಗುರುದತ್ತ್ ರವರು ಗ್ರಾಮಸ್ಥರ ನೋವನ್ನು ಆಲಿಸಿ ಫೆಬ್ರವರಿ 25ರಂದು ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರನ್ನು ಕರೆದು ಸಭೆ ನಡೆಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ರೈತ ನಾಯಕರಾದ ಶೇಖರ್ ಕುಂದರ್, ಕಾರ್ಮಿಕ ನಾಯಕರಾದ ರಫೀಕ್ ಹರೇಕಳ, ಇಬ್ರಾಹಿಂ ಮದಕ, ಮಹಮ್ಮದ್ ಅನ್ಸಾರ್,ಜಿಲ್ಲೆಯ ಯುವಜನ ನಾಯಕರಾದ ರಜಾಕ್ ಮುಡಿಪು,ಅಸ್ಪಕ್ ಅಳೇಕಲ, ಬಶೀರ್, ಹೈದರ್, ಫಾರೂಕ್ ಕೊಣಾಜೆ, ಸ್ಥಳೀಯ ಮಸೀದಿಯ ಖತೀಬರಾದ ಇಸಾಕ್ ಝುಹ್ರಿ,ಸಾಮಾಜಿಕ ಕಾರ್ಯಕರ್ತರಾದ ಅಬೂಬಕ್ಕರ್ ಜಲ್ಲಿಯವರು ಭಾಗವಹಿಸಿದ್ದರು.
ಹೋರಾಟದ ನೇತ್ರತ್ವವನ್ನು ಹೋರಾಟ ಸಮಿತಿಯ ನಾಯಕರಾದ ರಫೀಕ್ ಕಾನೆಕೆರೆ,ಅಬ್ದುಲ್ ಖಾದರ್, ಮಹಮ್ಮದ್ ಫಾರೂಕ್, ರಫೀಕ್ ಗುಡ್ಲಕ್,ಅಬ್ದುಲ್ ಸಲಾಂ,ಮಹಮ್ಮದ್ ಶೆರೀಫ್, ಇಮ್ರಾನ್ ಕಾನೆಕೆರೆ,ರಿಯಾಜ್, ಆಶ್ರಫ್,ನಜೀರ್,ಹಸನ್, ಅಬ್ದುಲ್ ರಹಿಮಾನ್ ಮುಂತಾದವರು ವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: