ರಸ್ತೆಗೆ ಅಡ್ಡ ಬಂದ ಮಹಿಳೆಯನ್ನು ಅಪಘಾತವಾಗದಂತೆ ತಪ್ಪಿಸಿದ ಚಾಲಕನಿಗೂ ಸಂಕಷ್ಟ!
ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ತೌಡುಗೋಳಿ ಕ್ರಾಸ್ ಬಳಿ ರಸ್ತೆಯನ್ನು ಇದ್ದಕ್ಕಿದ್ದಂತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಆಗುವುದನ್ನು ತಪ್ಪಿಸಿ ಸಮಯಪ್ರಜ್ಞೆ ಮೆರೆದ ಬಸ್ ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಮಹಿಳೆ ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೆ ರಸ್ತೆ ದಾಟಿದ್ದಾರೆ. ಈ ವೇಳೆ ಹಿಂದಿನಿಂದ ಬಸ್ ಬಂದಿದೆ. ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಬಸ್ ಡ್ರೈವರ್ ಬಸ್ಸನ್ನು ಎಡಕ್ಕೆ ಸರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಎಲ್ಲರೂ ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ವಿಪರ್ಯಾಸವೆಂದರೆ ಇದ್ರ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಸ್ ಚಾಲಕ ಹಾಗೂ ಮಹಿಳೆಗೆ ಕಂಟಕ ಎದುರಾಗಿದೆ. ಹೌದು. ಮಹಿಳೆಗೆ ಬಸ್ ಡಿಕ್ಕಿ ಹೊಡೆಯುವುದನ್ನು ಬಸ್ ಚಾಲಕ ತಪ್ಪಿಸಿರುವುದು ಶ್ಲಾಘನೀಯವಾಗಿದೆ. ಆದರೆ ಕರ್ಕಶ ಹಾರ್ನ್ ನೊಂದಿಗೆ ಅತಿ ಕಿರಿದಾದ ರಸ್ತೆಯಲ್ಲಿ ಅತಿವೇಗ, ಅಜಾಗರೂಕತೆಯ ಬಸ್ ಚಾಲನೆಯನ್ನು ಪೊಲೀಸರು ಗಮನಿಸಿದ್ದು, ಬಸ್ ಗೆ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಹೀಗಾಗಿ ಚಾಲಕ ತ್ಯಾಗರಾಜ್ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕರ್ಕಶ ಹಾರ್ನ್ ಹಾಕುತ್ತಾ ಬಸ್ಸನ್ನು ಚಲಾಯಿಸಿದ್ದರಿಂದ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅತ್ತ ರಸ್ತೆ ದಾಟುತ್ತಿದ್ದ ಮಹಿಳೆಗೂ ಕಂಟಕ ಎದುರಾಗಿದೆ. ಮಂಗಳವಾರ ಏಕಾಏಕಿ ರಸ್ತೆ ದಾಟಿದ ಮಹಿಳೆಯ ವಿರುದ್ಧವೂ ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಸರಗೋಡು ಜಿಲ್ಲೆಯ ವರ್ಕಾಡಿಯ ಐಸಮ್ಮ (63) ಎಂಬುವವರು ರಸ್ತೆ ದಾಟುವಾಗ ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಸಂಚಾರ ನಿಯಂತ್ರಣ ನಿಯಮ ಸೆಕ್ಷನ್ 13 ಮತ್ತು ಸೆ.92ಜಿ ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಐಸಮ್ಮ ರಸ್ತೆ ದಾಟುವಾಗ ನಿರ್ಲಕ್ಷಿಸಿದ್ದರು ಮತ್ತು ಸಂಚಾರ ನಿಯಮವನ್ನು ಪಾಲಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೊಲೀಸರು ಘಟನೆ ನಡೆದ ಎರಡು ದಿನದ ಬಳಿಕ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಂತೆ ಈ ಮಹಿಳೆಯು ನ್ಯಾಯಾಲಯದ ಮೂಲಕ ದಂಡ ಪಾವತಿಸಬೇಕಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw