ಕುಡಿತದ ಮತ್ತಿನ ಗಮ್ಮತ್ತು | ರಸ್ತೆ ಅಪಘಾತದಲ್ಲಿ ಮೂವರು ಯುವಕರ ದಾರುಣ ಸಾವು
ಬೆಂಗಳೂರು: ಕುಡಿತದ ಮತ್ತಿನ ಗಮ್ಮತ್ತಿನಲ್ಲಿ ಬೈಕ್ ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದ ಮೂವರು ಯುವಕರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಹೊಸಕೋಟೆ ಟೋಲ್ ಗೇಟ್ ಬಳಿ ನಡೆದಿದೆ.
ರಾಜೇಶ್, ಲವನಿತ್ ಹಾಗೂ ಹರೀಶ್ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಈ ಮೂವರು ಕಂಠಪೂರ್ತಿ ಮದ್ಯಸೇವನೆ ಮಾಡಿ ಒಂದೇ ಬೈಕ್ ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದರು. ಕನಿಷ್ಠ ಹೆಲ್ಮೆಟ್ ಕೂಡ ಹಾಕದೇ ಪ್ರಯಾಣಿಸಿದ್ದರು ಎಂದು ಹೇಳಲಾಗಿದೆ.
ನಿರ್ಲಕ್ಷ್ಯದ ಚಾಲನೆ, ಅತಿಯಾದ ವೇಗದಿಂದ ಬಂದ ಬೈಕ್ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇವರು ಕನಿಷ್ಠ ಹೆಲ್ಮೆಟ್ ಹಾಕಿಕೊಂಡಿದ್ದರೂ ಪ್ರಾಣ ಉಳಿಯಬಹುದು ಎಂದು ಜನ ಹೇಳುತ್ತಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಟ್ರಾಫಿಕ್ ಪೊಲೀಸರು ಎಷ್ಟು ಜಾಗೃತಿ ಮೂಡಿಸಿದರೂ, ಯುವಕರು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದಾಗಿ ರಸ್ತೆ ಬದಿಯಲ್ಲಿ ಇಂತಹ ದುರಂತ ಸಾವನ್ನಪ್ಪುತ್ತಿದ್ದಾರೆ.