ಕಾಂಗ್ರೆಸ್ ಕಾಲದಲ್ಲಿ ಎಲ್ಲದಕ್ಕೂ ಕಮಿಷನ್ ಪಡೆಯುತ್ತಿದ್ದರು: ಸಿಎಂ ಬೊಮ್ಮಾಯಿ

ಬೆಳಗಾವಿ ( ರಾಯಭಾಗ): ಹಣದ ಬಲದಿಂದ ಜನರನ್ನು ಖರೀದಿ ಮಾಡಬಹುದು ಎಂದು ಕೆಲವು ಅಧಿಕಾರಿಗಳು ರಾಜಕಾರಣಕ್ಕೆ ಬರುತ್ತಾರೆ. ಅವರು ಸೆಲ್ಯೂಟ್ ಹೊಡೆಸಿಕೊಂಡು, ನಮಸ್ಕಾರ ಮಾಡಿಸಿಕೊಂಡು ರೂಢಿ ಇರುತ್ತದೆ. ಆದರೆ ಜನರ ಪ್ರಾಮಾಣಿಕ ಸೇವೆ ಮಾಡಿ ಜನರ ಸುಖ ದುಃಖವನ್ನು ಅರ್ಥ ಮಾಡಿಕೊಳ್ಳುವವರನ್ನು ಆಯ್ಕೆ ಮಾಡಿದ್ರೆ ಅವರು ನಿಮ್ಮ ಸೇವೆ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಇಂದು ರಾಯಭಾಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧುರ್ಯೊಧನ ಐಹೊಳೆ ಅವರ ಪರ ರೋಡ್ ಶೋ ನಡೆಸಿ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.ದುರ್ಯೋಧನ ಐಹೊಳೆ ಹೆಸರಿಗೆ ಮಾತ್ರ ಧುರ್ಯೋಧನ. ಆದರೆ ಕೆಲಸದಲ್ಲಿ ಬಲಭೀಮ. ಯಾವುದು ಆಗಲ್ಲವೋ ಅದನ್ನು ಮಾಡಿ ತೋರಿಸುವ ಛಾತಿ ಅವರಲ್ಲಿರುವ ಕಾರಣ ಅವರನ್ನು ಭೀಮ ಎಂದು ಕರೆಯುತ್ತೇನೆ.
ದುರ್ಯೋಧನ ಐಹೊಳೆ ಅತ್ಯಂತ ಸರಳ ವ್ಯಕ್ತಿ. ರಾಯಭಾಗ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಆಶೋತ್ತರಗಳನ್ನು ಈಡೇರಿಸಿ ವಿಶ್ವಾಸ ಗಳಿಸಿರುವ ಸರಳ ಸಜ್ಜನ ರಾಜಕಾರಣಿ. ಅವರಂತಹ ದಕ್ಷ ಪ್ರಾಮಾಣಿಕ ಶಾಸಕರು ಸಿಗುವುದು ಕಷ್ಟ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸಲಾಂ ಹೊಡೆಸುಕೊಳ್ಳುವ ರಾಜಕಾರಣಿ ಬೇಡ:
ಜನರ ಸೇವೆ ಮಾಡುವ ವ್ಯಕ್ತಿ ಬೇಕಾ, ನಿಮ್ಮ ಮಾಲೀಕರಾಗುವವರು ಬೇಕಾ? ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ನಿಮ್ಮ ಪ್ರತಿನಿಧಿ ನಿಮ್ಮ ಸೇವೆ ಮಾಡಿದ್ರೆ ಅವರನ್ನು ಮತ್ತೆ ಮುಂದುವರೆಸಿ. ನಿಮ್ಮ ಮತ ಪಡೆದು ಅವರೇ ಮಾಲೀಕರಾದರೆ ಜನರು ಏನು ಮಾಡುವುದು. ನಾವು ಸ್ವಾಭಿಮಾನಿಗಳು ಇದ್ದೇವೆ. ನಮ್ಮ ಮತ ಮಾರಾಟಕ್ಕಿಲ್ಲ ಎಂದು ನೀವು ಸ್ಪಷ್ಟವಾಗಿ ಹೇಳಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೋವಿಡ್ ನಿಂದ ಪ್ರಧಾನಿ ನಮ್ಮನ್ನು ಬದುಕಿಸಿದ್ದಾರೆ:
ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಎಲ್ಲ ಜನರ ಸುರಕ್ಷತೆಗಾಗಿ ಹಗಲಿರುಳು ಕೆಲಸ ಮಾಡಿರುವುದು ನೀವು ನೋಡಿದ್ದೀರಿ. ಎಲ್ಲರ ಕೆಲಸದಿಂದ ಕೋವಿಡ್ ವಿರುದ್ದ ಜಯ ಸಾಧಿಸಿದ್ದೇವೆ. ಎರಡು ವರ್ಷದ ಹಿಂದೆ ಎಲ್ಲರೂ ಮಾಸ್ಕ್ ಹಾಕೊಳ್ಳುತ್ತಿದ್ದೇವು. ಈಗ ಯಾರೂ ಮಾಸ್ಕ್ ಹಾಕಿಕೊಳ್ಳುವ ಪರಿಸ್ಥಿತಿ ಇಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಲಸಿಕೆ ದೇಶದ 130 ಕೋಟಿ ಜನರು ಪಡೆದುಕೊಂಡು ಕೋವಿಡ್ ಅನ್ನು ಓಡಿಸಿದರು. ಆದರೆ ಬೇರೆ ದೇಶಗಳಲ್ಲಿ ಜನರು ಇನ್ನೂ ಮಾಸ್ಕ್ ಹಾಕಿಕೊಂಡು ಓಡಾಡ್ತಾರೆ. ಕೋವಿಡ್ ಸಂದರ್ಭದಲ್ಲಿ ಕುಸಿದ ಆರ್ಥಿಕತೆಗೆ ಚೇತರಿಕೆ ತಂದು ರಾಜ್ಯದ ಬೊಕ್ಕಸವನ್ನು ತುಂಬಿ ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೈತರ ಉನ್ನತಿಗೆ ಹಲವಾರು ಕಾರ್ಯಕ್ರಮ:
ನಮ್ಮ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ರೈತರಿಗೆ ಯಶಸ್ವಿನಿ ಯೋಜನೆ ಮರು ಜಾರಿ ಮಾಡಿದ್ದೇವೆ. 47 ಲಕ್ಷ ರೈತರಿಗೆ ಇದರಿಂದ ಪ್ರಯೋಜನ ಆಗಿದೆ. ಡೀಸಲ್ ಸಬ್ಸಿಡಿ ಯನ್ನು ಪ್ರತಿ ರೈತರಿಗೆ ಕೊಟ್ಟಿದ್ದೀವಿ. ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೂ ಸಾಲ ಕೊಡುತ್ತಿದ್ದೇವೆ. ಬೆಂಬಲ ಬೆಲೆ ಕೊಡಲು 3600 ಕೋಟಿ ರೂ ಆವರ್ತ ನಿಧಿ ಇಟ್ಟಿದ್ದೇವೆ. ಇದಲ್ಲದೇ ಬೀಜ ಗೊಬ್ಬರಕ್ಕೆ ಪ್ರತಿ ರೈತನಿಗೆ 10 ಸಾವಿರ ಕೊಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಯಕ ಸಮಾಜಕ್ಕೆ ಅನುಕೂಲ ಮಾಡಿದ್ದೇವೆ:
ವಿದ್ಯಾರ್ಥಿನಿಯರಿಗೆ ಡಿಗ್ರಿ ವರೆಗೂ ಉಚಿತ ಶಿಕ್ಷಣ ಕೊಡುತ್ತಿದ್ದೇವೆ. ಇದು ದೇಶದಲ್ಲಿ ಪ್ರಥಮ. ದುಡಿಯುವ ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಮಾಡಿದ್ದೇವೆ. ಇದರ ಜತೆಗೆ ಸ್ತ್ರೀ ಶಕ್ತಿ ಯೋಜನೆ, ಸ್ವಾಮಿ ವಿವೇಕಾನಂದ ಯೋಜನೆ ಮೂಲಕ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಪ್ರತಿ ವೃತ್ತಿಪರ ಕಸುಬುದಾರರಿಗೆ 50 ಸಾವಿರ ಧನ ಸಹಾಯ ಕೊಡುವ ಕಾಯಕ ಯೋಜನೆ ಮಾಡಿದ್ದೇವೆ.
ಕಾಂಗ್ರೆಸ್ ದು 85% ಸರ್ಕಾರ:
ಕಾಂಗ್ರೆಸ್ ಕಾಲದಲ್ಲಿ ಎಲ್ಲದಕ್ಕೂ ಕಮಿಷನ್ ಪಡೆಯುತ್ತಿದ್ದರು. ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು. ಸಾಮಾಜಿಕ ನ್ಯಾಯ ಅಂತ ಕಾಂಗ್ರೆಸ್ ನವರು ಹೇಳುತ್ತಾರೆ. 30 ವರ್ಷದಿಂದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ನಡೆಸಿದರೂ ಅವರಿಗೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ನಾನು ಬಂದು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಅಲ್ಲದೇ ಆಂತರಿಕ ಮೀಸಲಾತಿ ಹೆಚ್ಚಳ ಮಾಡಿದ್ದೆನೆ.ಇದೇ ಮಾದರಿಯನ್ನು ಎಲ್ಲ ರಾಜ್ಯಗಳು ಜಾರಿ ಮಾಡಬೇಕು ಎನ್ನುವ ಚರ್ಚೆ ನಡೆದಿದೆ. ಲಿಂಗಾಯತರ ಮೀಸಲಾತಿಯನ್ನೂ ಹೆಚ್ಚಳ ಮಾಡಿದ್ದೇವೆ. ನಾವು ಎಲ್ಲ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಜನರು ಈಗ ಜಾಗೃತರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ:
ಈ ಕ್ಷೇತ್ರಕ್ಕೆ ಧುರ್ಯೋಧನ ಐಹೊಳೆ ಉತ್ತಮ ಕೆಲಸ ಮಾಡಿದ್ದಾರೆ. ಕರೆಗಾವ್ ಏತ ನೀರಾವರಿಗೆ 560 ಕೋಟಿ ಮಂಜುರಾತಿ ಕೊಟ್ಟು ನಾವೇ ಅನುಷ್ಠಾನ ಮಾಡುತ್ತೇವೆ. ನಿಮ್ಮ ಬೇಡಿಕೆ ನೀರಾವರಿ ಯೋಜನೆಗಳನ್ನು ನಾವೇ ಅನುಷ್ಠಾನಕ್ಕೆ ತರುತ್ತೇವೆ. ಈ ಕ್ಷೇತ್ರಕ್ಕೆ ಬೇಕಾದ ರಸ್ತೆ, ನೀರು, ಎಲ್ಲ ಸೌಕರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಇದು ಇನ್ನಷ್ಟು ಮುಂದುವರೆಯಬೇಕಾದರೆ ಧುರ್ಯೊಧನ ಐಹೊಳೆಯವರನ್ನು ಆಯ್ಕೆ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw