ಮೊರಾಕ್ಕೋದಲ್ಲಿ ಭೂಕಂಪ: ಎರಡು ಸಾವಿರ ಮಂದಿ ಸಾವು; ಸವಾಲಾದ ರಕ್ಷಣಾ ಕಾರ್ಯಾಚರಣೆ - Mahanayaka
12:04 PM Friday 20 - September 2024

ಮೊರಾಕ್ಕೋದಲ್ಲಿ ಭೂಕಂಪ: ಎರಡು ಸಾವಿರ ಮಂದಿ ಸಾವು; ಸವಾಲಾದ ರಕ್ಷಣಾ ಕಾರ್ಯಾಚರಣೆ

10/09/2023

ಮೊರಾಕ್ಕೊ ದೇಶದಲ್ಲಿ 6.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಪರಿಣಾಮ 2000 ಮಂದಿ ಸಾವಿಗೀಡಾಗಿದ್ದಾರೆ. 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 205 ಜನರ ಸ್ಥಿತಿ ಗಂಭೀರವಾಗಿದೆ.

ಅವಶೇಷಗಳಡಿ ಇನ್ನೂ ಜನರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮಾಡಲು ಹಲವು ಅಡ್ಡಿಗಳು ಎದುರಾಗಿವೆ. ಹೀಗಾಗಿ ಮೊರಾಕೊದಲ್ಲಿ ಮೂರು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ಭೂಕಂಪದಿಂದಾಗಿ ಅಟ್ಲಾಸ್ ಪರ್ವತಶ್ರೇಣಿಯಿಂದ ಐತಿಹಾಸಿಕ ನಗರಿ ಮ್ಯಾರಕೇಶ್‌ವರೆಗೆ ಇರುವ ನಗರ, ಹಳ್ಳಿಗಳ ಹಲವಾರು ಕಟ್ಟಡಗಳು ಸಂಪೂರ್ಣ ಅಥವಾ ಭಾಗಶಃ ಕುಸಿದಿವೆ. ವಿದ್ಯುತ್‌ ಹಾಗೂ ರಸ್ತೆ ಸಂಪರ್ಕ ಹಲವು ಪ್ರದೇಶಗಳಲ್ಲಿ ಕಡಿತಗೊಂಡಿದೆ. ಗಾಯಾಳುಗಳನ್ನು ಸಾಗಣೆ ಮಾಡುವುದಕ್ಕೆ ಆಂಬುಲೆನ್ಸ್​​​ ಸಂಚರಿಸುವುದಕ್ಕೂ ಆಗದಷ್ಟು ರಸ್ತೆಗಳ ಮೇಲೆ ಬಂಡೆಗಳು ಕುಸಿದಿದ್ದು, ರಕ್ಷಣಾ ತಂಡಗಳು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.


Provided by

45 ಲಕ್ಷ ಜನರು ನೆಲೆಸಿರುವ ಮೊರಾಕ್ಕೊದ ವಾಣಿಜ್ಯ ನಗರ ಮ್ಯಾರಕೇಶ್‌ ನಿಂದ ದಕ್ಷಿಣ ದಿಕ್ಕಿಗೆ 70 ಕಿ.ಮೀ. ದೂರದಲ್ಲಿರುವ ಅಲ್ ಸೌತ್ ಪ್ರಾಂತ್ಯದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಮೇಲಿನಿಂದ 18 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. 11 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ ಎಂದು ಮೊರೊಕ್ಕೊದ ಭೂಕಂಪನ ಸಂಸ್ಥೆ ತಿಳಿಸಿದೆ.

ಸಾಮಾನ್ಯವಾಗಿ ಉತ್ತರ ಆಫ್ರಿಕಾದಲ್ಲಿ ಭೂಕಂಪಗಳೇ ಬಲು ಅಪರೂಪ, ಮೊರಾಕ್ಕೊದ ಅಗದೀ‌ ನಗರದಲ್ಲಿ 1960ರಲ್ಲಿ 5.3 ತೀವ್ರತೆಯ ಕಂಪನ ಸಂಭವಿಸಿ ಸಹಸ್ರಾರು ಮಂದಿ ಸಾವಿಗೀಡಾಗಿದ್ದರು. 2004ರಲ್ಲಿ 6.4 ತೀವ್ರತೆಯ ಕಂಪನದಿಂದ 600 ಮಂದಿ ಸಾವಿಗೀಡಾಗಿದ್ದರು. ಈಗ ಅದಕ್ಕಿಂತಲೂ ಭೀಕರವಾದ ಕಂಪನ ಉಂಟಾಗಿದೆ.

ಇತ್ತೀಚಿನ ಸುದ್ದಿ