ವಿವಿಧ ಚರ್ಚುಗಳಲ್ಲಿ ಪಾಸ್ಖ ಹಬ್ಬದ ಸಂಭ್ರಮ: ದೇವರಲ್ಲಿ ಅಗಾಧ ವಿಶ್ವಾಸ ಅಗತ್ಯ: ಫಾ.ಬರ್ನಾಬಸ್ ಮೋನಿಸ್ - Mahanayaka
9:55 AM Wednesday 23 - October 2024

ವಿವಿಧ ಚರ್ಚುಗಳಲ್ಲಿ ಪಾಸ್ಖ ಹಬ್ಬದ ಸಂಭ್ರಮ: ದೇವರಲ್ಲಿ ಅಗಾಧ ವಿಶ್ವಾಸ ಅಗತ್ಯ: ಫಾ.ಬರ್ನಾಬಸ್ ಮೋನಿಸ್

kottigehara
09/04/2023

ಕೊಟ್ಟಿಗೆಹಾರ: ‘ದೇವರಲ್ಲಿ ಅಗಾಧ ವಿಶ್ವಾಸವಿರಿಸಿ ಅವರ ಚಿತ್ತಕ್ಕೆ ಮಣಿದಲ್ಲಿ ನಮ್ಮ ಜೀವನದಲ್ಲೂ  ಕಷ್ಟಗಳ ಕತ್ತಲೆ ಕಳೆದು ಬೆಳಕು ಮೂಡುವುದು ನಿಶ್ಚಿತ’ ಎಂದು ಧರ್ಮಗುರು ಫಾ.ಬರ್ನಾಬಸ್ ಮೋನಿಸ್ ಹೇಳಿದರು.

ಅವರು ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ಶನಿವಾರ ರಾತ್ರಿ ಪಾಸ್ಖ ಹಬ್ಬದ ಸಾಂಭ್ರಮಿಕ ಬಲಿ ಪೂಜೆ ಅರ್ಪಿಸಿ ಮಾತನಾಡಿದರು.’ಶಿಲುಭೆಯ ಮೇಲೆ ಮೃತಪಟ್ಟ ಏಸು ಸ್ವಾಮಿ ಮೂರನೇ ದಿನ ಪುನರುತ್ಥಾನರಾದರು. ಮರಣ ಅವರನ್ನು ಸೋಲಿಸಲು ಅಶಕ್ತವಾಯಿತು. ಮರಣದ ವಿರುದ್ಧ ದಿಗ್ವಿಜಯ ಸಾಧಿಸಿದರು. ಆ ಮೂಲಕ ನಮ್ಮ ಜೀವನದ ಕಷ್ಟ, ಸಾವು ನೋವುಗಳು ಅರ್ಥ ರಹಿತವಲ್ಲ.ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಗಾಢ ಅರ್ಥವನ್ನು ಒಳಗೊಂಡಿವೆ ಎಂದರು.

ಕ್ಷಣ ಕಾಲ ನಾವು ಈ ಕಷ್ಟಗಳಿಂದ ವಿಚಲಿತರಾದರೂ,ದೇವರಲ್ಲಿ ಅಚಲ ವಿಶ್ವಾಸವಿಟ್ಟು ಮುಂದುವರಿದ್ದಲ್ಲಿ ನಮಗೆ ಜಯ ಖಂಡಿತ. ಪುನರುತ್ಥಾನವೆಂದರೆ ಸಾವು, ನೋವು, ಚಿಂತೆ ಹಸಿವು, ನೀರಡಿಕೆಗಳಿಲ್ಲದ ಆಹ್ಲಾದಕರ ಬದುಕು. ಏಸುಸ್ವಾಮಿ ಪುನರುತ್ಥಾನರಾಗಿ ಆ ಬದುಕಿನ ಭರವಸೆಯನ್ನು ನಮಗೆ ನೀಡಿದ್ದಾರೆ. ಇದೇ ಸತ್ಯವನ್ನು ಪುನರುತ್ಥಾನದ ಹಬ್ಬ ಸಂಭ್ರಮಿಸುತ್ತದೆ.ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶರಾಗಬೇಕಿಲ್ಲ. ಕಾರಣ ದೇವರೆಡೆಗೆ ತಿರುಗಿ ಅವರನ್ನು ಒಪ್ಪಿಕೊಂಡರೆ ನಿತ್ಯ ಜೀವ ಅವರದಾಗುವುದು ಎಂದು ಪಾಸ್ಖ ಹಬ್ಬ ಸಾರುತ್ತದೆ’ ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಪ್ರೇಮ್ ಲಾರೆನ್ಸ್ ಡಿಸೋಜ, ಡೆನಿಸ್ ಡಿಸೋಜ ಇದ್ದರು.

ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್ ಹಾಗೂ ಜಾವಳಿ ಚರ್ಚ್ ನಲ್ಲಿ ಹಬ್ಬದ ಪೂಜೆಯನ್ನು ಧರ್ಮಗುರು  ಫಾ.ತೋಮಸ್ ಕಲಘಟಗಿ ನೆರವೇರಿಸಿದರು.

ಕೆಳಗೂರು ಚರ್ಚಿನಲ್ಲಿ ಫಾ. ಮ್ಯಾಕ್ಸಿಂ  ಡಾಯಸ್ ಸಂದೇಶ ನೀಡಿ ಮಾತನಾಡಿ ‘ಏಸು ಕ್ರಿಸ್ತರು ತಮ್ಮ ಜೀವಿತ ಅವಧಿಯಲ್ಲಿ ಜಗತ್ತಿಗೆ ಶಾಂತಿ, ಕ್ಷಮೆ, ತ್ಯಾಗ ಪ್ರೀತಿಯ ಸಂದೇಶಗಳನ್ನು ನೀಡಿ ಅಮರರಾಗಿದ್ದಾರೆ. ಕ್ರೈಸ್ತರಾದ ನಾವು ಕ್ರಿಸ್ತರ ತತ್ವಗಳನ್ನು ಜೀವಿತ ಅವಧಿಯಲ್ಲಿ ಅಳವಡಿಸಿಕೊಳ್ಳಬೇಕು. ಇತರರು ಜೀವನದಲ್ಲಿ ಮೇಲೆ ಬಂದಾಗ ಅಸೂಯೆ ಪಡದೇ ಸಮಾಜ ಒಡೆಯುವ ಕೆಲಸವನ್ನು ಮಾಡದೇ ಸಮಾಜ ಕಟ್ಟುವ ಕೆಲಸ ನಮ್ಮದಾಗಬೇಕು. ಇತರರ ನೋವು ಕಡಿಮೆಗೊಳಿಸುವ ಔದಾರ್ಯತೆಯನ್ನು ನಾವು ಜೀವನದಲ್ಲಿ ಬೆಳೆಸಿಕೊಂಡರೆ, ಕ್ರೈಸ್ತರಾಗಿ ಬದುಕಿದ್ದು ಸಾರ್ಥಕವಾಗುತ್ತದೆ’ ಎಂದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ರೋಶನ್ ಪಿರೇರಾ ಎಸ್.ಜೆ. ಇದ್ದರು.

ಕೂವೆ ಪವಿತ್ರ ಶಿಲುಬೆಯ ಚರ್ಚಿನಲ್ಲಿ ಫಾ.ಲ್ಯಾನ್ಸಿ ಪಿಂಟೊ ಹಬ್ಬದ ಪೂಜೆ ಅರ್ಪಿಸಿ  ಮಾತನಾಡಿ, ‘ ಪರಸ್ಪರ ಪ್ರೀತಿ, ಶಾಂತಿ ಏಕತೆ ಕ್ರೈಸ್ತ ಕುಟುಂಬದ ಸೂತ್ರಗಳಾಗಬೇಕು. ಏಸುವು ಇವೆಲ್ಲವನ್ನು ಅನುಸರಿಸಿ ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಏಸುಕ್ರಿಸ್ತರು ಜೀವನದಲ್ಲಿ ಶಾಂತಿದೂತರಾಗಿ ಸಾವಿನಲ್ಲೂ ಪುನರುತ್ಥಾನ ಕಂಡ ಮಾನವತಾವಾದಿ’ಎಂದರು.

ಚರ್ಚುಗಳಲ್ಲಿ ಸೇರಿದ್ದ ಭಕ್ತರ ಮೇಲೆ  ಧರ್ಮಗುರುಗಳು ತೀರ್ಥವನ್ನು ಪ್ರೋಕ್ಷಣೆ ಮಾಡಿದರು. ಪೂಜೆಯ ಮುನ್ನ ಧರ್ಮಗುರುಗಳು ಎಲ್ಲಾ ಚರ್ಚುಗಳಲ್ಲಿ ಬೃಹತ್ ಪಾಸ್ಖ ಮೇಣದ ಬತ್ತಿಯನ್ನು ಉರಿಸಲಾಯಿತು. ಬೆಂಕಿ ಹಾಗೂ ಹೊಸ ನೀರನ್ನು ಆಶೀರ್ವದಿಸಿ ಪವಿತ್ರೀಕರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ