ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಉಚಿತವಾಗಿ ವಸತಿ, ಊಟೋಪಚಾರ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ "ಆಕ್ಸೆಸ್ ಲೈಫ್" - Mahanayaka
6:15 PM Thursday 12 - December 2024

ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಉಚಿತವಾಗಿ ವಸತಿ, ಊಟೋಪಚಾರ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ “ಆಕ್ಸೆಸ್ ಲೈಫ್”

cancer center
10/08/2023

ಬೆಂಗಳೂರು; ಕ್ಯಾನ್ಸರ್‌ ಚಿಕಿತ್ಸೆಗಿಂತ ನಗರ ಪ್ರದೇಶಗಳಲ್ಲಿ ಉಳಿದು ಊಟ, ವಸತಿ ಮತ್ತಿತರ ಸೌಲಭ್ಯ ಪಡೆಯುವುದು ದುಬಾರಿಯಷ್ಟೇ ಅಲ್ಲದೇ ಬಹುದೊಡ್ಡ ಸವಾಲು. ಆರ್ಥಿಕವಾಗಿ ಸಬಲರಲ್ಲದವರು ವಸತಿ ಸೌಲಭ್ಯದೊಂದಿಗೆ ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುವುದು ನಿಜಕ್ಕೂ ಗಗನ ಕುಸುಮವೇ ಆಗಿದೆ. ಇಂತಹ ಗಂಭೀರ ಸಮಸ್ಯೆಗೆ, ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ತನ್ನ ಪಾಲಕರೊಂದಿಗೆ ವಾಸ್ತವ್ಯ ಹೂಡುವ ವ್ಯವಸ್ಥೆ ಕಲ್ಪಿಸಿದೆ ಸ್ವಯಂ ಸೇವಾ ಸಂಸ್ಥೆ “”ಆಕ್ಸೆಸ್ ಲೈಫ್””.

ಬೆಂಗಳೂರಿಗೆ ಆಗಮಿಸುವ ದುರ್ಬಲವರ್ಗದ ಮಕ್ಕಳಿಗೆ ದೀರ್ಘಕಾಲ ಉಳಿದು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ “”ಆಕ್ಸೆಸ್ ಲೈಫ್”” ಸ್ವಯಂ ಸೇವಾ ಸಂಸ್ಥೆ ಸಮಗ್ರ ಸೌಲಭ್ಯವುಳ್ಳ ಉಚಿತ ಆಶ್ರಯ ಒದಗಿಸಿದೆ. ಅರ್ಬುದ ರೋಗಿಗಳಷ್ಟೇ ಅಲ್ಲದೇ ಕುಟುಂಬದ ತಾಯಿ ಅಥವಾ ಸದಸ್ಯರೊಬ್ಬರು ಜೊತೆಯಲ್ಲಿದ್ದು, ರೋಗಿಗೆ ಅಗತ್ಯವಾಗಿರುವ ಅಡುಗೆಯನ್ನು ತಯಾರಿಸಿಕೊಡಲು ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲದೇ ಅಡುಗೆಗೆ ಬೇಕಾದ ದಿನಸಿ, ತರಕಾರಿಗಳನ್ನು ಒದಗಿಸುತ್ತಿದೆ. ಇಂತಹ ವಿನೂತನ ಮತ್ತು ಮಾನವೀಯ ನೆಲೆ ಜೆ.ಪಿ. ನಗರದ ಬಿಟಿಎಂ ಬಡಾವಣೆಯಲ್ಲಿ ತಲೆ ಎತ್ತಿದೆ. ಇಲ್ಲಿ 22 ಬೆಡ್‌ ಗಳ ಸುಸಜ್ಜಿತ ಗೂಡು ಸಜ್ಜಾಗಿದೆ.

ಕ್ಯಾನ್ಸರ್‌ ಚಿಕಿತ್ಸೆಗಾಗಿ ಸೆಂಟ್‌ ಜಾನ್ಸ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವಾರ್ಷಿಕ ನೂರಾರು ಮಕ್ಕಳು ಬೆಂಗಳೂರಿಗೆ ಆಗಮಿಸುತ್ತಿದ್ದು, ಇಂತಹ ಮಕ್ಕಳಿಗೆ ಚಿಕಿತ್ಸೆಗಿಂತ ನಗರದಲ್ಲಿ ವಾಸಿಸುವುದು ಹೆಚ್ಚು ದುಬಾರಿ. ಇದನ್ನು ಮನಗಂಡು “ಅಕ್ಸೆಸ್ ಲೈಫ್” ಸ್ವಯಂ ಸೇವಾ ಸಂಸ್ಥೆ ಮಾನವೀಯ ಸೇವೆ ಒದಗಿಸುತ್ತಿದೆ. ತಮ್ಮ ಮನೆಯಲ್ಲೇ ಇರುವಂತಹ ಆರಾಮದಾಯಕ ಪರಿಸ್ಥಿತಿ, ಮನೆ ಆಹಾರದ ಜೊತೆಗೆ ಚಿಕಿತ್ಸೆ ಪಡೆಯಲು ಈ ಸೌಲಭ್ಯ ಸಹಕಾರಿಯಾಗಲಿದೆ. ಇದರಿಂದ ರೋಗಿಗಳು ತ್ವರಿತವಾಗಿ ಉತ್ತಮ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಸಾಧ್ಯವಾಗಲಿದೆ.

ಕ್ಯಾನ್ಸರ್‌ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳು ಹೆಸರುವಾಸಿಯಾಗಿದ್ದು, ರೋಗಿಗಳನ್ನು ಅತ್ಯುತ್ತಮವಾಗಿ ಆರೈಕೆ ಮಾಡುತ್ತಿವೆ. ಆದರೆ ಹೆಚ್ಚಿನ ಬಾಡಿಗೆ, ಸೂಕ್ತ ಸೌಲಭ್ಯ, ಶುಚಿತ್ವವಿಲ್ಲದ ವಸತಿ ವ್ಯವಸ್ಥೆ, ಅಲ್ಪಾವಧಿಯಲ್ಲಿ ಉಳಿಯಲು ಬಾಡಿಗೆ ಮನೆಗಳ ಕೊರತೆ ಜೊತೆಗೆ ವಸತಿ ಹುಡುಕುವುದು ಸಹ ಬಹುದೊಡ್ಡ ಸಮಸ್ಯೆಯಾಗಿದೆ.

ಮತ್ತೊಂದೆಡೆ ಸಂದಿಗ್ದ ಪರಿಸ್ಥಿತಿಗಳ ನಡುವೆ ರೋಗಿಗಳು ಮತ್ತೆ ತಮ್ಮ ಮನೆಗಳಿಗೆ ತೆರಳುವ ಪರಿಸ್ಥಿತಿಯೂ ಎದುರಾಗಲಿದೆ. ಬಹುತೇಕ ರೋಗಿಗಳು ದ್ವಿತೀಯ ಸೋಂಕಿಗೆ ಒಳಗಾಗುವ ಅಪಾಯಗಳಿದ್ದು, ಇಲ್ಲಿನ ನೈರ್ಮಲ್ಯ ವಾತಾವರಣ ರೋಗಿಯ ರಕ್ಷಣೆಗೆ ಸಹಕಾರಿಯಾಗಲಿದೆ. ಯಾವುದೇ ವಸತಿ ಸೌಲಭ್ಯದ ಕಾರಣದಿಂದ ಚಿಕಿತ್ಸೆಯಿಂದ ವಂಚಿತವಾಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಸದಾಶಯದೊಂದಿಗೆ ಸ್ವಯಂ ಸೇವಾ ಸಂಸ್ಥೆ ಸಮುದಾಯದ ನಡುವಿನ ಪಾಲುದಾರಿಕೆ ವ್ಯವಸ್ಥೆಯನ್ನು ರೂಪಿಸಿದೆ.

“”ಆಕ್ಸೆಸ್ ಲೈಫ್”” ಸಂಸ್ಥೆ ವಸತಿ ಸವಾಲಯಗಳನ್ನು ನಿವಾರಿಸುವ ಮತ್ತು ಸಕಾಲದಲ್ಲಿ ಮಗುವಿಗೆ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸುತ್ತಿದೆ. ಕಳೆದೊಂದು ದಶಕದಿಂದ “ಆಕ್ಸೆಸ್ ಲೈಫ್” ವಿವಿಧ ರಚನಾತ್ಮಕ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖವಾಗಿದೆ. ಇದೀಗ ಈ ಎಲ್ಲಾ ಪ್ರಯತ್ನಗಳ ನಂತರ ʼ”ಆಕ್ಸೆಸ್ ಲೈಫ್”ʼ ಮಕ್ಕಳ ಚಿಕಿತ್ಸೆಗಾಗಿ ಉಚಿತ ವಸತಿ ಸೌಲಭ್ಯ ಕಲ್ಪಿಸಿ, ಚಿಕಿತ್ಸೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ʼ”ಆಕ್ಸೆಸ್ ಲೈಫ್”ʼ ದೇಶಾದ್ಯಂತ ಇಂತಹ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಕ್ಯಾನ್ಸರ್‌ ಚಿಕಿತ್ಸೆಯ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತಿದೆ.

ಈ ಸೇವೆಯನ್ನು ಇದೀಗ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಸಜ್ಜಾಗಿದೆ. ನಗರ ಪ್ರದೇಶದಲ್ಲಿ “ಮನೆಯಿಂದ ದೂರದ ಮನೆ”. ಇದು ಸುರಕ್ಷಿತ ಮತ್ತು ಸ್ವಚ್ಛತೆಯ ತಾಣವಾಗಿದೆ. ಸಮುದಾಯದ ಪ್ರಜ್ಞೆ ಮತ್ತು ಭಾವನಾತ್ಮಕ ಬೆಂಬಲದೊಂದಿಗೆ ಮಕ್ಕಳು ಗುಣಮುಖರಾಗಬೇಕು ಎಂಬುದು ಇದರ ಮೂಲ ಧ್ಯೇಯವಾಗಿದೆ ಎಂದು “ಆಕ್ಸೆಸ್ ಲೈಫ್” ನ ಮುಖ್ಯಸ್ಥ ರು ಮತ್ತು ಸಿಇಓ ಗಿರೀಶ್ ನಾಯರ್ ತಿಳಿಸಿದ್ದಾರೆ.

ವಸತಿ, ಪೋಷಣೆ ಮತ್ತು ಸಾರಿಗೆಯಂತಹ ಅಗತ್ಯತೆಗಳನ್ನು ಪರಿಹರಿಸುವ ಮೂಲಕ “ಆಕ್ಸೆಸ್ ಲೈಫ್” ಕುಟುಂಬಗಳ ಕಳವಳವನ್ನು ನಿವಾರಿಸುತ್ತದೆ. ಈ ಬೆಳವಣಿಗೆ ಮಗುವಿನ ಚೇತರಿಕೆಯ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಸಹಾನುಭೂತಿಯ ಸಮಾಜದ ಭಾಗವಾಗಿ ನಾವು ಈ ಕುಟುಂಬಗಳನ್ನು ಬೆಂಬಲಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ಕ್ಯಾನ್ಸರ್‌ ನೊಂದಿಗೆ ಹೋರಾಡುತ್ತಿರುವ ಪ್ರತಿಯೊಂದು ಮಗುವಿಗೆ ಉಜ್ವಲ ಭವಿಷ್ಯ ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ. ಇದು ಎಲ್ಲರಿಗೂ ಭರವಸೆ, ಸಹಾನುಭೂತಿ ಮತ್ತು ಬೆಂಬಲವನ್ನು ಒದಗಿಸುವಂತಾಗಲಿ ಎಂಬುದು ಸಂಸ್ಥೆಯ ಆಶಯವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ