ಇಡೀ ರಾತ್ರಿ ಸಮುದ್ರದಲ್ಲಿ ಈಜಿ ದಡ ಸೇರಿದ ಯುವಕ
16/05/2021
ಮಂಗಳೂರು: ನಿನ್ನೆ ಮಂಗಳೂರಿನ ಹೊರವಲಯದ ಪಡುಬಿದ್ರಿ ಸಮೀಪ ಟಗ್ ಬೋಟ್ ಮಗುಚಿ ನಾಪತ್ತೆಯಾಗಿದ್ದ ಐವರ ಪೈಕಿ ಮತ್ತೋರ್ವ ಯುವಕ ಪತ್ತೆಯಾಗಿದ್ದು, ಇಡೀ ರಾತ್ರಿ ಸಮುದ್ರದಲ್ಲಿ ಈಜಾಡಿ ಇದೀಗ ದಡ ಸೇರಿದ್ದಾನೆ ಎಂದು ತಿಳಿದು ಬಂದಿದೆ.
ದಡ ಸೇರಿದ ಯುವಕ ಎಂಆರ್ ಪಿಎಲ್ ಕಂಪೆನಿ ನೌಕರ ನಸೀಮ್ ಎಂದು ಗುರುತಿಸಲಾಗಿದೆ. ರಾತ್ರಿ ಬೋಟ್ ಮಗುಚಿದ ಬಳಿಕ ಇಡೀ ರಾತ್ರಿ ಇವರು ಸಮುದ್ರದಲ್ಲೇ ಇದ್ದು, ಟ್ಯೂಬ್ ಸಹಾಯದಿಂದ ಈಜಿ ದಡ ಸೇರಿದ್ದಾರೆ.
ಪಡುತೋನ್ಸೆ ಬಂಗ್ರೆ ಬಳಿ ಸಮುದ್ರದ ದಡ ಸೇರಿದ ಯುವಕನನ್ನು ಮಲ್ಪೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಎಂ ಆರ್ ಪಿ ಎಲ್ ಕಚ್ಚಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಟಗ್ ಬೋಟ್ ಮಂಗಳೂರಿನ ಹೊರ ವಲಯದಲ್ಲಿ ನಿನ್ನೆ ಮಗುಚಿ ಬಿದ್ದಿತ್ತು. ಚಂಡಮಾರುತದ ಅಬ್ಬರ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಈ ದುರಂತ ಸಂಭವಿಸಿತ್ತು.