ಬಾಳೆ ತೋಟಕ್ಕೆ ಗಜಪಡೆ ಎಂಟ್ರಿ: ತೋಟ ಧ್ವಂಸ

ಕೊಟ್ಟಿಗೆಹಾರ: ಬಣಕಲ್ ಹೋಬಳಿಯ ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಬಾಳೆ ಬೆಳೆ ನಾಶ ಮಾಡಿದೆ.
ಒಂಟಿ ಸಲಗವು ಕಳೆದ ಬಾರಿ ಚಾರ್ಮಾಡಿ ಭಾಗದಿಂದ ಬಂದು ದೇವನಗೂಲ್ ಗ್ರಾಮಕ್ಕೆ ಲಗ್ಗೆಯಿಟ್ಟು ವಾಸದ ಮನೆಯ ಹಿಂಭಾಗದಲ್ಲಿ ಬೈನೇಮರ, ಬಾಳೆ ಎಳೆದು ನಾಶ ಮಾಡಿತ್ತು. ಈ ಬಾರಿಯು ದೇವನಗೂಲ್ ಗ್ರಾಮದ ಗ್ರಾಮಸ್ಥರಾದ ಡಿ.ಟಿ.ಮಂಜುನಾಥ್ ಆಚಾರ್ಯ,ಎಂ.ವೀರಪ್ಪಗೌಡ ಎಂಬವರ ಮನೆಯ ಬಳಿ ರಾತ್ರಿ ದಾಳಿ ಮಾಡಿ ಬೃಹತ್ ಬೈನೇಮರ ಹಾಗೂ ಸುತ್ತಮುತ್ತ ಇರುವ ಬಾಳೆ ಬೆಳೆ ನಾಶ ಮಾಡಿ ಸಾಗಿದೆ.ಇದರಿಂದ ಬೆಳೆ ನಾಶವಾಗಿ ನಷ್ಟ ಸಂಭವಿಸಿದೆ.ಕಾಫಿ ತೋಟಗಳಲ್ಲಿ ಸಾಗುತ್ತಿರುವ ಕಾಡಾನೆ ಕಾಫಿ ಗಿಡಗಳನ್ನು ಕೂಡ ತುಳಿದು ರೈತರ ಬೆಳೆ ಹಾನಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಕಾಡಾನೆ ಕಾಟದಿಂದ ಬೇಸತ್ತಿದ್ದಾರೆ. ಆದರೆ ಪ್ರಾಣ ಹಾನಿ ಸಂಭವಿಸಿಲ್ಲ. ಹೀಗೆ ಕಾಡಾನೆ ಕಾಟ ಮುಂದುವರೆದರೆ ಜನರ ಪ್ರಾಣಕ್ಕೂ ಕುತ್ತು ಬರಲಿದೆ ಎಂದು ಗ್ರಾಮಸ್ಥ ಎಂ.ವೀರಪ್ಪಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಆನೆ ಕಾರ್ಯಪಡೆಯ ಬಸವರಾಜ್ ಮಾತನಾಡಿ, ಕಾಡಾನೆ ಯಾವ ಭಾಗದಿಂದ ಬಂದಿದೆ ಎಂದು ಹೆಜ್ಜೆ ಗುರುತು ಪತ್ತೆಯಾಗುತ್ತಿಲ್ಲ. ಕಾಡಾನೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಾಳೆ ಬೆಳೆ ಹಾನಿಯಾದವರು ಸೂಕ್ತ ದಾಖಲೆಯೊಂದಿಗೆ ಅರ್ಜಿ ನೀಡಿದರೆ ಪರಿಹಾರ ನೀಡಲು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪರಿಹಾರಕ್ಕೆ ಆಗ್ರಹಿಸಲಾಗುವುದು. ಸದ್ಯಕ್ಕೆ ಗ್ರಾಮಸ್ಥರು ರಾತ್ರಿ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಕಿರಣ್, ಗಸ್ತು ಅರಣ್ಯ ಪಾಲಕ ಉಮೇಶ್, ಕಾರ್ಯಪಡೆ ಸಿಬ್ಬಂದಿ ಹೇಮಂತ್, ಮುರಳಿ, ಶಿವಕುಮಾರ್, ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಡಾನೆ ಸ್ಥಳಾಂತರಕ್ಕೆ ಒತ್ತಾಯ: ದೇವನಗೂಲ್ ಗ್ರಾಮದ ಭಾಗದಲ್ಲಿ ಪದೇ ಪದೇ ಕಾಡಾನೆ ದಾಳಿ ಮಾಡುತ್ತಿದೆ. ಪರಿಹಾರ ನೀಡುವುದರ ಬದಲು ಕಾಡಾನೆ ಸ್ಥಳಾಂತರ ಮಾಡಬೇಕು ಗ್ರಾಮಸ್ಥ ಡಿ.ಎಂ.ರಾಜು ಆಚಾರ್ಯ ಒತ್ತಾಯಿಸಿದ್ದಾರೆ.