ಮಹಿಳೆಯನ್ನು ಅಟ್ಟಾಡಿಸಿ ತಲೆಗೆ ತುಳಿದು ಕೊಂದ ಕಾಡಾನೆ! - Mahanayaka
8:18 PM Wednesday 5 - February 2025

ಮಹಿಳೆಯನ್ನು ಅಟ್ಟಾಡಿಸಿ ತಲೆಗೆ ತುಳಿದು ಕೊಂದ ಕಾಡಾನೆ!

alduru elephant
08/11/2023

ಚಿಕ್ಕಮಗಳೂರು:  ಕಾಫಿನಾಡಲ್ಲಿ ಕಾಡಾನೆಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಇಲ್ಲಿನ ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ತುಳಿದು ಕೊಂದಿದೆ.

ವೀಣಾ (45) ಮೃತ ಮಹಿಳೆಯಾಗಿದ್ದಾರೆ. ಕಳೆದ 2 ತಿಂಗಳುಗಳಲ್ಲಿ ಕಾಡಾನೆಗೆ ಇದು ಎರಡನೇ ಬಲಿಯಾಗಿದೆ.  ವೀಣಾ ಅವರು ಕಾಫಿ ತೋಟದ ಕೆಲಸಕ್ಕೆಂದು ತೆರಳುತ್ತಿದ್ದಾಗ ಏಕಾಏಕಿ ಆನೆ ದಾಳಿ ನಡೆಸಿದ್ದು, ನೆಲಕ್ಕೆ ಕೆಡವಿ ತಲೆಗೆ ತುಳಿದು ಬರ್ಬರವಾಗಿ ಕೊಂದು ಹಾಕಿದೆ.

ಆಲ್ದೂರು ಅರಣ್ಯ ವಲಯದಲ್ಲಿ ಈ ಭಯಾನಕ ಘಟನೆ ನಡೆದಿದೆ. ಆನೆಯ ಭೀಕರ ದಾಳಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗ್ರಾಮದಲ್ಲೇ ಕಾಡಾನೆ ಸುತ್ತಾಟ ನಡೆಸುತ್ತಿದ್ದನ್ನು ಕಂಡು ಭೀತಿಗೊಂಡ ಸ್ಥಳೀಯರು, ಇದೀಗ ಮಹಿಳೆಯ ಸಾವು ಕಂಡು ಜೀವ ಅಂಗೈಯಲ್ಲಿಟ್ಟುಕೊಂಡು ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಮನೆಯಿಂದ ಹೊರ ಬರಲು ಕೂಡ ಭಯಪಡುವಂತಾಗಿದೆ.

ಘಟನೆಯ ಬೆನ್ನಲ್ಲೇ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ಗ್ರಾಮದಿಂದ ಓಡಿಸಿ, ಇಲ್ಲವೇ ಸ್ಥಳಾಂತರಿಸಿ ಎಂದು  ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಲ್ದೂರು ವಲಯದ ಅರಣ್ಯದಲ್ಲಿ 7 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸುತ್ತಿದೆ ತಕ್ಷಣವೇ ಆನೆಗಳನ್ನು ಗ್ರಾಮದಿಂದ ಓಡಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಜನರ ಪ್ರಾಣ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಆಲ್ದೂರು ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ