ಹೊಂದಾಣಿಕೆ ರಾಜಕೀಯಕ್ಕೆ ಮುಕ್ತಿ, ಅಪ್ಪ, ಮಕ್ಕಳ ಪಕ್ಷ ಸೋಲಿಸಲು ಸಂಕಲ್ಪ: ನಳಿನ್‍ಕುಮಾರ್ ಕಟೀಲ್
![nalin kumar kateel](https://www.mahanayaka.in/wp-content/uploads/2023/02/nalin-kumar-kateel-1.jpg)
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಪಡೆದು ಹೊಂದಾಣಿಕೆಯ ರಾಜಕಾರಣಕ್ಕೆ ಮುಕ್ತಿ ಹಾಕಲಿದ್ದೇವೆ. ಅಪ್ಪ ಮಕ್ಕಳ ಪಕ್ಷ, ಅಪ್ಪ, ಮಗಳ ಪಕ್ಷವನ್ನು ಸೋಲಿಸಲು ಸಂಕಲ್ಪ ಮಾಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
“ಬಿಟಿಎಂ ಲೇಔಟ್‍ನ 2ನೇ ಹಂತದ ಸ್ವಾಮಿ ವಿವೇಕಾನಂದ ಆಟದ ಮೈದಾನ”ದಲ್ಲಿ ಇಂದು ಬಿಜೆಪಿ ಪ್ರಗತಿ ರಥದ ಉದ್ಘಾಟನಾ ಕಾರ್ಯಕ್ರಮದಲ್ಲಿ, 135 ಎಲ್‍ಇಡಿ ಪ್ರಗತಿ ರಥಗಳು 224 ಕ್ಷೇತ್ರಗಳಲ್ಲೂ ಸಂಚರಿಸಲಿವೆ ಎಂದು ತಿಳಿಸಿದರು.
ಯಡಿಯೂರಪ್ಪ- ಬೊಮ್ಮಾಯಿ ಸರಕಾರಗಳು ಮಾಡಿದ ಅಭಿವೃದ್ಧಿಪರ ಯೋಜನೆಯನ್ನು ಪ್ರಶಂಸಿಸಿದರು. ರೈತ ವಿದ್ಯಾನಿಧಿ ಜಾರಿ ಮಾಡಿದ್ದಕ್ಕೆ ಮೆಚ್ಚುಗೆ ಸೂಚಿಸಿದರು. ಮೀಸಲಾತಿ ಹೆಚ್ಚಳಕ್ಕೆ ಸಂತಸ ಸೂಚಿಸಿದರು.
ವಿಮಾನನಿಲ್ದಾಣ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆದಿದೆ. ಅದ್ಭುತವಾಗಿ ಪರಿವರ್ತನೆ ಆಗುತ್ತಿದೆ. ಬೆಂಗಳೂರಿನ ಇತಿಹಾಸದಲ್ಲಿ ಅಭಿವೃದ್ಧಿಗಾಗಿ ಗರಿಷ್ಠ ಮೊತ್ತವನ್ನು ನಾವು ನೀಡಿದ್ದೇವೆ. ಮೆಟ್ರೋ, ಸಬರ್ಬನ್ ರೈಲಿಗೆ ಹೆಚ್ಚು ಹಣ ಕೊಡಲಾಗಿದೆ. ಉದ್ಯಮಶೀಲತೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಿಎಸ್‍ಟಿ ಸಂಗ್ರಹದಲ್ಲೂ ಮುಂದಿದ್ದೇವೆ ಎಂದು ವಿವರಿಸಿದರು.
ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸುತ್ತೇವೆ. ಕಾಂಗ್ರೆಸ್‍ನ ಸರಕಾರ ಇದ್ದಾಗ ಆದ ವೈಫಲ್ಯ, 24 ಹಿಂದೂಗಳ ಹತ್ಯೆ, ಅಧಿಕಾರಿಗಳ ಸಾವು, ಭ್ರಷ್ಟಾಚಾರಗಳ ವಿವರವನ್ನು ಜನರಿಗೆ ತಿಳಿಸುತ್ತೇವೆ ಎಂದು ಪ್ರಕಟಿಸಿದರು.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ ಬರುವುದು ಖಚಿತ ಎಂದ ಅವರು, ಯುವ ಮೋರ್ಚಾವು ರಥ ಯಶಸ್ಸಿನ ಜವಾಬ್ದಾರಿ ತೆಗೆದುಕೊಂಡಿದೆ ಎಂದು ಮೆಚ್ಚುಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಬೆಂಗಳೂರು ದಕ್ಷಿಣ ಸಂಸದ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ, ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯರು ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಗೋಪಿನಾಥ್ ರೆಡ್ಡಿ, ಪ್ರಗತಿ ರಥದ ರಾಜ್ಯ ಸಂಚಾಲಕ ಎಸ್.ವಿ. ರಾಘವೇಂದ್ರ, ಯುವ ಮೋರ್ಚಾದ ರಾಜ್ಯ ಅಧ್ಯಕ್ಷ ಡಾ.ಸಂದೀಪ್, ನಗರ ಜಿಲ್ಲಾ ಅಧ್ಯಕ್ಷರಾದ ಡಾ.ಎನ್.ಆರ್.ರಮೇಶ್, ನಾರಾಯಣಗೌಡ, ಮಂಜುನಾಥ್, ಶಾಸಕರು ಹಾಗೂ ಪಕ್ಷದ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw