ಇಂದು ಮಹಿಳಾ ದೌರ್ಜನ್ಯ ತಡೆ ದಿನ | ಭಾರತದ ಮಹಿಳೆಯರಿಗಿಂತ ತುಂಡು ಬಟ್ಟೆ ಧರಿಸುವ ವಿದೇಶಿ ಮಹಿಳೆಯರು ಹೆಚ್ಚು ಸುರಕ್ಷಿತ - Mahanayaka
5:38 PM Thursday 26 - December 2024

ಇಂದು ಮಹಿಳಾ ದೌರ್ಜನ್ಯ ತಡೆ ದಿನ | ಭಾರತದ ಮಹಿಳೆಯರಿಗಿಂತ ತುಂಡು ಬಟ್ಟೆ ಧರಿಸುವ ವಿದೇಶಿ ಮಹಿಳೆಯರು ಹೆಚ್ಚು ಸುರಕ್ಷಿತ

25/11/2020

ಮಹಾನಾಯಕ ಲೇಖನ: ಭಾರತದಲ್ಲಿ ಮಹಿಳಾ ದೌರ್ಜನ್ಯ, ಅತ್ಯಾಚಾರ, ಸಜೀವ ದಹನ ಮೊದಲಾದ ಕ್ರೌರ್ಯಗಳೂ ನಡೆಯುತ್ತಿರುವುದರ ನಡುವೆಯೇ ಇಂದು ವಿಶ್ವ, ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಸಂವಿಧಾನದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹಳ ಒತ್ತನ್ನು ನೀಡಿದ್ದಾರೆ. ಆದರೆ, ನಮ್ಮನ್ನು ಆಳುವ ಸರ್ಕಾರಗಳು ಮಹಿಳಾ ಸಮಾನತೆಗೆ, ಸುರಕ್ಷತೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳದೇ ಉದ್ದೇಶ ಪೂರ್ವಕವಾಗಿ ಮಹಿಳೆಯರನ್ನು ಇನ್ನೂ ಶೋಷಿತರಾಗಿಯೇ ಮುಂದುವರಿಸಿದೆ.

ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ ಎಂದು ಭಾಷಣ ಬಿಗಿಯುವ ರಾಜಕಾರಣಿಗಳು, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದನ್ನು ತಡೆಯಲು ಯಾವುದೇ ಸಮರ್ಪಕ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ, ಕೇವಲ ಸಿಸಿ ಕ್ಯಾಮರಗಳನ್ನು ಮಾತ್ರವೇ ಮಹಿಳೆಯರ ಕಾವಲುಗಾರರು ಎಂಬಂತೆ ಬಿಂಬಿಸಲಾಗುತ್ತಿದೆ. ಅಪರಾಧ ನಡೆದ ಬಳಿಕ ಅದನ್ನು ಕಂಡು ಹಿಡಿಯುವುದಕ್ಕಿಂತಲೂ ಅಪರಾಧವಾಗದಂತೆ ತಡೆಯುವ ಬುದ್ಧಿ ಆಳವ ವರ್ಗಕ್ಕಿಲ್ಲ, ಅಥವಾ ಅವರಿಗೆ ಅದು ಬೇಕಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಭಾರತೀಯ ಮಾಧ್ಯಮಗಳಲ್ಲಿ ಮಹಿಳಾ ವಿರೋಧಗಳೇ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಮಹಿಳೆಯರ ದೌರ್ಜನ್ಯ ಸಂಬಂಧ ಯಾರೂ ಧ್ವನಿಯೆತ್ತಲು ಮುಂದಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ರಾತ್ರೋ ರಾತ್ರಿ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ಸುಟ್ಟು ಬೂದಿ ಮಾಡಿದಾಗ ಅಲ್ಲಿ ಇದ್ದದ್ದು ಕೇವಲ ಒಂದೇ ಒಂದು ನ್ಯೂಸ್ ಚಾನೆಲ್ ನ ಮಹಿಳಾ ಪ್ರತಿನಿಧಿ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಸ್ವತಃ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಏನೇನೋ ಅನ್ಯಾಯಗಳನ್ನು ಮಾಡಿದ್ದರೂ, ಅದರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲದ ಮಹಿಳಾ ವಿರೋಧಿ ಪತ್ರಕರ್ತರು ಹಾಗೂ ಸುದ್ದಿ ಸಂಸ್ಥೆಗಳು, ಯೋಗಿ ಆದಿತ್ಯನಾಥ್ ಒಬ್ಬ ಇಂದ್ರ ಚಂದ್ರ ಎಂದು ಹೊಗಳುತ್ತಾ, ಅವರ ಕಾಲು ಬುಡದಲ್ಲಿ ಕಾಯುತ್ತಿವೆ. ಇಂತಹ ದುಸ್ಥಿತಿ ಈ ದೇಶದ ಮಾಧ್ಯಮಗಳಿಗೆ ಬರಬಾರದಿತ್ತು.


ಮಹಿಳೆಯರು ಇಂದು ಭಾರತದಲ್ಲಿ ಇಷ್ಟಾದರೂ ಸುರಕ್ಷತೆಯ ಜೀವನ ನಡೆಸುತ್ತಿದ್ದಾರೆ ಎಂದರೆ, ಅದು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಫಲದಿಂದಾಗಿ ಮಾತ್ರ. ಮಹಿಳೆಯರ ಶಿಕ್ಷಣಕ್ಕಾಗಿ ದುಡಿದ ಜ್ಯೋತಿಬಾಫುಲೆ-ಸಾವಿತ್ರಿಬಾಫುಲೆ ದಂಪತಿ, ನಾರಾಯಣಗುರುಗಳ ಸಾಮಾಜಿಕ ಕ್ರಾಂತಿ, ಬಸವಣ್ಣರ ತತ್ವಗಳು, ವಚನಕಾರರ ಮಹಾನ್ ಕೊಡುಗೆಗಳು ಮೊದಲಾದ ಮಹಾನ್ ವ್ಯಕ್ತಿಗಳ ಹೋರಾಟದ ಫಲವಾಗಿ ಇಂದು ಭಾರತದಲ್ಲಿ ಮಹಿಳೆಯರು ಇಷ್ಟಾದರೂ ಸ್ವಾತಂತ್ರ್ಯ ಪಡೆದುಕೊಂಡಿದೆ. ದಕ್ಷಿಣ ಭಾರತಯದಲ್ಲಿ ಮಹಿಳೆಯರು ಸಾಧಾರಣ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಮಹಿಳೆ ಎಂದರೆ ಭೋಗದ ವಸ್ತು ಎಂದೇ ಭಾವಿಸಿ ಪುರುಷರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಭಾರತದ ಮಾತೆಯರು ಇಂದು ಮನೆ ಬಿಟ್ಟು ಹೊರಗೆಡೆ ಇಳಿದರೆ, ವಾಪಸ್ ಬರುತ್ತಾರೆಯೇ ಎಂಬ ನಂಬಿಕೆಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 90ರ ವೃದ್ಧೆಯಿಂದ ಹಿಡಿದು 1 ತಿಂಗಳ ಮಗುವಿನ ಮೇಲೆ ಕೂಡ ರೇಪ್ ಮಾಡಲಾಗುತ್ತಿದೆ. ಇಂತಹ ಭಾರತದಲ್ಲಿ ಮಹಿಳಾ ದೌರ್ಜನ್ಯ ನಿಲ್ಲುವುದು ಯಾವಾಗ? ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಾಗಿದೆ.

ವಿದೇಶ ಸಂಸ್ಕೃತಿ ಸರಿಯಿಲ್ಲ, ಅರ್ಧ ಬಟ್ಟೆ ಹಾಕಿಕೊಂಡು ಮಹಿಳೆಯರು ಹೋಗುತ್ತಾರೆ ಎಂದು ಕೆಲವು ಸಂಘಟನೆಗಳು ಮಾತನಾಡುತ್ತವೆ. ಭಾರತದಲ್ಲಿ ಮಹಿಳೆಯರು ಸರಿಯಾದ ಬಟ್ಟೆ ಧರಿಸದ ಕಾರಣ ಅವರ ಮೇಲೆ ರೇಪ್ ನಡೆಯುತ್ತಿದೆ ಎಂದು ವಾದಿಸುತ್ತಾರೆ. ಆದರೆ, ವಿದೇಶದಲ್ಲಿ ಮಹಿಳೆಯರು ಬೆತ್ತಲೆ ನಡೆದರೂ ಅವರ ಮೇಲೆ ರೇಪ್ ನಡೆಯುತ್ತಿಲ್ಲ, ಅವರು ಸುರಕ್ಷಿತವಾಗಿರುತ್ತಾರೆ. ಆದರೆ ಭಾರತದಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಂಡು ನಡೆದರೂ ಅತ್ಯಾಚಾರ ನಡೆಯುತ್ತಿದೆ. ರೇಪ್ ಮಾಡುವವನಿಗೆ ಯಾವ ಬಟ್ಟೆಯಾದರೇನಂತೆ, ಅವನ ತಲೆಯಲ್ಲಿ ಒಂದು ಸ್ವಲ್ಪವಾದರೂ ಶಿಕ್ಷಣ ಇರಬೇಕು. ಮಹಿಳೆಯರು ಪೂಜ್ಯನಿಯರು, ದೇವತೆ, ಮಾತೆ ಎಂದು ಕಲಿಸುವುದಕ್ಕಿಂತಲೂ ಮಹಿಳೆ ಕೂಡ ನಮ್ಮಂತೆಯೇ ಒಂದು ಜೀವ. ಅವಳಿಗೂ ಅವಳದ್ದೇ ಆದ ಜೀವನ ಇದೆ. ಆಕೆ ನಮ್ಮ ಭೋಗದ ವಸ್ತುವಲ್ಲ, 90ರ ವೃದ್ಧೆ, 1 ತಿಂಗಳ ಮಗು ಲೈಂಗಿಕತೆಗೆ ಬಳಸಲು ಇರುವುದಲ್ಲ ಮೊದಲಾದ ಶಿಕ್ಷಣಗಳನ್ನು ಎಲ್ಲ ಧರ್ಮದ ಪುರುಷರಿಗೆ ಅವರ ಧಾರ್ಮಿಕ ಕೇಂದ್ರಗಳಲ್ಲಿ ನೀಡಿದ್ದರೆ, ಬಹುಶಃ ಇಷ್ಟೊಂದು ಅತ್ಯಾಚಾರ ಪ್ರಕರಣಗಳು ಇರುತ್ತಿರಲಿಲ್ಲ. ವಿದೇಶಿಯರಿಗೆ ಲೈಂಗಿಕ ಶಿಕ್ಷಣ ಇದೆ.  ಹಾಗಾಗಿ ಅಲ್ಲಿ ಪುರುಷ ಮಹಿಳೆಯರು ಸಮಾನಾಗಿ ಬೀಚ್ ಪಾರ್ಕ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಬಹಳಷ್ಟು ಸಂಪ್ರದಾಯಗಳಿವೆ. ಆದರೆ ಲೈಂಗಿಕ ಶಿಕ್ಷಣವೇ ಇಲ್ಲ. ಲೈಂಗಿಕ ಶಿಕ್ಷಣ ಶಾಲೆಗಳಲ್ಲಿ ನೀಡಬೇಕು ಎಂದರೆ, ಕೆಲವು ದಡ್ಡರು, ಲೈಂಗಿಕ ಶಿಕ್ಷಣ ಎಂದರೆ ಬೇರೇನೋ ಎಂದು ತಿಳಿದುಕೊಂಡು ವಿರೋಧಿಸಿದ್ದು ನಮ್ಮ ಕಣ್ಣಮುಂದಿದೆ. ಇಂತಹ ಭಾರತದಲ್ಲಿ ಮಹಿಳಾ ದೌರ್ಜನ್ಯ ನಿಲ್ಲುವುದು ಯಾವಾಗ?

 

ಇತ್ತೀಚಿನ ಸುದ್ದಿ