ನಾವು ಕಾಲದ ಜೊತೆ ಎಷ್ಟು ಬೇಗ ಕಳೆದು ಹೋಗುತ್ತೇವೆ ಎಂದರೆ ನಮ್ಮ ನಡುವಣ ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸುವಲ್ಲಿ ವಿಫಲ ರಾಗುತ್ತೇವೆ. ಕ್ಷಮಿಸಿ, ನೇರ ಹೇಳುತ್ತೇನೆ ತಮಿಳುನಾಡಿನ ಮದ್ರಾಸ್ ನ ಪ್ರೊ. ಲಕ್ಷ್ಮಿ ನರಸು ಆಧುನಿಕ ಬೌದ್ಧ ಧರ್ಮದ ಪಿತಾಮಹ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ ಅವರ ಬಗ್ಗೆ ನಾನು ಈ ಮಾತು ಹೇಳ ಹೊರಟಿರುವೆ. ಬೌದ್ಧ ಧರ್ಮ ಅದು ವಸಾಹತುಶಾಹಿಗಳ ಕಾಲದಲ್ಲಿ ಬೆಳಕಿಗೆ ಬಂದಾಗ ಅದನ್ನು ಕೂಡ ಆ ಕಾಲದ ಜನ ಬ್ರಾಹ್ಮಣೀಕರಣಗೊಳಿಸಿದರು, ಸಂಪ್ರದಾಯಕ್ಕೆ ಕಟ್ಟಿಹಾಕಿದರು. ಆದರೆ ತಮಿಳುನಾಡಿನವರುಗಳಾದ ಪಂಡಿತ್ ಅಯೋದಿ ದಾಸ್, ಸಿಂಗಾರವೇಲು ಮತ್ತು ಪ್ರೊ.ಲಕ್ಷ್ಮಿ ನರಸು ರವರುಗಳು ಬಾಬಾಸಾಹೇಬ್ ಅಂಬೇಡ್ಕರರಿಗಿಂತಲೂ ಬಹಳ ಮೊದಲೇ ಬೌದ್ಧ ಧರ್ಮವನ್ನು ಅಂತಹ ಸಂಪ್ರದಾಯಕ್ಕೆ ಕಟ್ಟಿಹಾಕದೆ ಅದನ್ನು ವೈಚಾರಿಕತೆಯ, ಹೊಸ ಬೆಳಕನ್ನು ಕಾಣಬಹುದಾದ, ಸಾಮಾಜಿಕ ವಿಮೋಚನೆಯ ಮಾರ್ಗವಾಗಿ ಬದಲಿಸಿದರು. ಅಕ್ಷರಶಃ ಈ ಮೂವರು ಅದರಲ್ಲು ಪ್ರೊ.ಲಕ್ಷ್ಮಿ ನರಸು ಬಾಬಾಸಾಹೇಬ್ ಅಂಬೇಡ್ಕರರಿಗೆ ಈ ವಿಚಾರದಲ್ಲಿ ಸ್ಫೂರ್ತಿಯಾದರು. ಯಾವ ಮಟ್ಟಿಗಿನ ಸ್ಫೂರ್ತಿ ಎಂದರೆ ಸ್ವತಃ ಅಂಬೇಡ್ಕರರೇ 1907 ರಲ್ಲಿ ಪ್ರಕಟಿತ ಪ್ರೊ. ಲಕ್ಷ್ಮಿ ನರಸು ರವರ Essence of Buddhism (ಎಸೆನ್ಸ್ ಆಫ್ ಬುದ್ಧಿಸಂ) ಕೃತಿಯನ್ನು ಮರು ಮುದ್ರಿಸಿದರು, the best book about Buddhism ಎಂದರು. ಹಾಗೆಯೇ ಜಪಾನ್ ದೇಶದವರು ಬೌದ್ಧ ಧರ್ಮದ ಬಗ್ಗೆ ಅದರ ಉಗಮ ಸ್ಥಳ ಭಾರತದಲ್ಲಿ ಇರುವ ಶ್ರೇಷ್ಠ ಕೃತಿ ಯಾವುದು ಎಂದು ಹುಡುಕಿ ಪ್ರೊ. ನರಸು ರವರ ಎಸೆನ್ಸ್ ಆಫ್ ಬುದ್ಧಿಸಂ ಜಪಾನೀಯರಿಗೆ ಸಿಗಲಾಗಿ ಅವರು ತಮ್ಮ ದೇಶದಲ್ಲಿ ಅದನ್ನು ಭಾಷಾಂತರಗೊಳಿಸಿ ಅನೇಕ ಮುದ್ರಣ ಮಾಡಿ ತಮ್ಮ ದೇಶದ ಜನತೆಗೆ ಹಂಚಿದರು.
ಮುಖ್ಯವಾಗಿ ಅಂಬೇಡ್ಕರರ ಮೇಲೆ ಬಹಳ ಪ್ರಭಾವ ಬೀರಿದವರು ಪ್ರೊ.ನರಸುರವರು. ಬಾಬಾಸಾಹೇಬರ ಬುದ್ಧ ಅಂಡ್ ಹಿಸ್ ಧಮ್ಮ ಕೃತಿ ಗೆ ಮುಖ್ಯ ಆಕರ ಆಧಾರ, ಒಂದು intellectual basis ಕೊಟ್ಟದ್ದು ಪ್ರೊ.ನರಸುರವರ ಕೃತಿಗಳು. In fact ನರಸುರವರು ಬೌದ್ಧ ಧರ್ಮವನ್ನು ಆ ಪರಿ ವೈಚಾರಿಕ ರೂಪದಲ್ಲಿ ಮುಕ್ತವಾಗಿ ಕಟ್ಟಿಕೊಡದೆ ಹೋಗಿದ್ದರೆ ಬಾಬಾಸಾಹೇಬರಿಗೆ ಬೌದ್ಧ ಧರ್ಮದ ಬಗ್ಗೆ ಒಂದು ಸ್ಪಷ್ಟತೆಗೆ ಬರುವುದು ಖಂಡಿತ ಕಷ್ಟವಾಗುತ್ತಿತ್ತೇನೋ. ಯಾಕೆಂದರೆ 1861 ರಲ್ಲಿ ಜನಿಸಿದ ಮತ್ತು ಭಾರತದ ಹೋರಾಟದ ಭೂಮಿಕೆಗೆ ಅಂಬೇಡ್ಕರರು ಬರುವ ಸಮಯದಲ್ಲೇ ಅಂದರೆ 1934 ರಲ್ಲಿ ನಿಧನರಾದ ಪ್ರೊ. ಲಕ್ಷ್ಮಿ ನರಸು ನಂತರ ಬಾಬಾಸಾಹೇಬರು ಬೌದ್ಧ ಧರ್ಮದ ಬಗ್ಗೆ ಹುಡುಕಾಟ ಆರಂಭಿಸಿದಾಗ ಅಕ್ಷರಶಃ ಅವರಿಗೆ ಪ್ರಭಾವ ಬೀರುತ್ತಾರೆ. ಸ್ವತಃ ಅಂಬೇಡ್ಕರರೇ ಪ್ರೊ. ನರಸು ರವರ ಕೃತಿಯನ್ನು ತಾವೇ ಮುನ್ನುಡಿ ಬರೆದು ತಮ್ಮ ಖರ್ಚಿನಲ್ಲೇ ಅದನ್ನು ಪುನರ್ ಪ್ರಕಟಿಸುತ್ತಾರೆ.
ದುರಂತ ಅಂದರೆ 1934 ರಲ್ಲಿ ಪ್ರೊ.ನರಸು ರವರು ನಿಧನರಾದಾಗ ಅವರ ಅಪ್ರಕಟಿತ ಕೃತಿಯೊಂದು ಕೇವಲ ಕೈಬರವಣಿಗೆ ರೂಪದಲ್ಲಿ ಹಾಗೆ ಉಳಿಯಿತು. ಅದನ್ನು ಟೈಪ್ ಮಾಡಿ ಪ್ರಕಟಿಸುವ ಕೆಲಸವನ್ನು ಕೂಡ ಆಗಿನ ಕಾಲದ ಪ್ರೊ. ಲಕ್ಷ್ಮಿ ನರಸುರವರ ಕಾರ್ಯ ಕ್ಷೇತ್ರವಾದ ಮದ್ರಾಸಿನ ಗೆಳೆಯರುಗಳು ಮಾಡಿದರಾದರೂ ಅದು ಕೈಗೂಡಲಿಲ್ಲ ಅಲ್ಲದೇ 1954 ರಲ್ಲಿ ಅಂಬೇಡ್ಕರರು ಮದ್ರಾಸಿಗೆ ಭೇಟಿ ಕೊಟ್ಟಾಗ ಪ್ರೊ. ನರಸು ರವರ ಆ ಅಪ್ರಕಟಿತ ಕೃತಿ ಬಾಬಾಸಾಹೇಬರ ಕೈಸೇರಿತು. ದುರಂತ ಎರಡೇ ವರ್ಷಗಳಲ್ಲಿ ಬಾಬಾಸಾಹೇಬರು ಕೂಡ ನಿಧನರಾದರು. ಪ್ರೊ.ಲಕ್ಷ್ಮಿ ನರಸುರವರ ಆ ಕೃತಿ ಪ್ರಕಟಗೊಳ್ಳದೆ ಹಾಗೆ ಉಳಿಯಿತು.
ಅಂದಹಾಗೆ 1980ರಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಬರಹಗಳನ್ನು ಸಂಪಾದಿಸಿ ಪ್ರಕಟಿಸುವ ಜವಾಬ್ದಾರಿ ಹೊತ್ತುಕೊಂಡ ವಸಂತ್ ಮೂನ್ ರವರಿಗೆ ಬಾಬಾಸಾಹೇಬರ ಸಂಗ್ರಹದಲ್ಲಿದ್ದ ಪ್ರೊ.ಲಕ್ಷ್ಮಿ ನರಸು ರವರ ಈ ಕೃತಿ ಕಣ್ಣಿಗೆ ಬಿತ್ತು. ವಸಂತ್ ಮೂನ್ ಅಕ್ಷರಶಃ ಕಣ್ಣೀರಾದರು. ಯಾಕೆಂದರೆ 1934 ರಲ್ಲೇ ಬರೆಯಲ್ಪಟ್ಟಿರುವ ಇಂತಹ ಅಪರೂಪದ ಕೃತಿ, ಚಿಂತನೆ ಪ್ರಕಟಗೊಂಡಿಲ್ಲವಲ್ಲ! ಅದರೊಳಗಿನ ಬರಹಗಳು, ಬೌದ್ಧ ಧರ್ಮದ ವೈಚಾರಿಕ ರೂಪ ವಸಂತ್ ಮೂನ್ ರವರನ್ನು ದಂಗು ಬಡಿಸಿತು. ಇದೇ ಸಂದರ್ಭದಲ್ಲಿ ಜಿ.ಅಲೋಯ್ಸಿಯಸ್ ರವರು “ವಿಮೋಚನೆ ಮಾರ್ಗವಾಗಿ ಬೌದ್ಧ ಧರ್ಮ” ಎಂಬ ಕುರಿತು ಸಂಶೋಧನೆ ಮಾಡುವ ಸಲುವಾಗಿ ವಸಂತ್ ಮೂನ್ ರವರ ಬಳಿ ಬಂದಾಗ ಅಲೋಯ್ಸಿಯಸ್ ರವರ ಕಣ್ಣಿಗೆ ವಸಂತ್ ಮೂನ್ ರವರ ಬಳಿ ಇದ್ದ ಪ್ರೊ.ಲಕ್ಷ್ಮಿ ನರಸು ರವರ ಈ ಅಪ್ರಕಟಿತ ಕೃತಿಯ ಹಸ್ತ ಪ್ರತಿ ಕಂಡಿತು. ಅಲೋಯ್ಸಿಯಸ್ ತಾವು ಅದನ್ನು ಪ್ರಕಟಿಸುವುದಾಗಿ ವಸಂತ್ ಮೂನ್ ರವರ ಬಳಿ ಹೇಳಿದರು. ವಸಂತ್ ಮೂನ್ ಕಣ್ಣೀರಾದರು. ಯಾಕೆಂದರೆ ಒಬ್ಬ ಶ್ರೇಷ್ಠ ಬೌದ್ಧನ ಕ್ರಾಂತಿ ಆಧರಿತ ಕೃತಿಯನ್ನು ಅರವತ್ತು ವರ್ಷಗಳ ನಂತರ ಪ್ರಕಟಿಸಲು ಒಬ್ಬರು ಮುಂದೆ ಬಂದರಲ್ಲ ಎಂದು ಆ ಕಾರಣ ಅವರು ಭಾವನಾತ್ಮಕವಾಗಿ ಅತ್ತರು. ಹಾಗೆ ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳನ್ನು ಮಾತ್ರ ಸಂಪಾದಿಸುವ ಜವಾಬ್ದಾರಿ ಹೊತ್ತಿದ್ದ ವಸಂತ್ ಮೂನ್ ರವರಿಗೆ ಪ್ರೊ.ಲಕ್ಷ್ಮಿ ನರಸುರವರ ಈ ಕೃತಿ ಪ್ರಕಟಿಸುವುದು ಕಷ್ಟ ಇತ್ತು. ಆ ಕಾರಣಕ್ಕಾಗಿ ಅಲೋಯ್ಸಿಯಸ್ ರವರ ಕೈಗೆ ವಸಂತ್ ಮೂನ್ ಪ್ರೊ. ನರಸು ರವರ ಆ ಕೃತಿ ಇತ್ತರು.
ಅಂದಹಾಗೆ ಆ ಕೃತಿ ರಿಲಿಜನ್ ಆಫ್ ಮಾಡ್ರನ್ ಬುದ್ಧಿಸ್ಟ್ (Religion of modern Buddhist). 2001 ರಲ್ಲಿ ಅಲೋಯ್ಸಿಯಸ್ ಪ್ರೊ.ನರಸು ರವರ ಆ ಕೃತಿಯನ್ನು ಪ್ರಕಟಿಸಿದರು. ಪ್ರೊ. ನರಸು ರವರ ನಿಧನದ 65 ವರ್ಷಗಳ ನಂತರ ಅವರ ಕೃತಿ ಪ್ರಕಟಗೊಂಡಿತು! ಕ್ಷಮೆ ಇರಲಿ, ಶ್ರೇಷ್ಠ ಬೌದ್ಧ ಕೃತಿಯೊಂದು ಪ್ರಕಟಿತಗೊಂಡಿತು. ಆ ಕಾರಣಕ್ಕೆ ಹೇಳಿದ್ದು ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಗುರುತಿಸಲು ನಾವು ಎಷ್ಟು ತಡ ಮಾಡುತ್ತೇವೆ ಎಂದು.
ಮೊನ್ನೆ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಮಾಹಿತಿಯೊಂದನ್ನು ನೋಡಿದೆ. ಪ್ರೊ.ಲಕ್ಷ್ಮಿ ನರಸು ಅವರ ಕೃತಿಯ ಎರಡು ಕಾಪಿ ನನ್ನ ಬಳಿ ಇದೆ ಯಾರಾದರೂ ಹಣ ಕಳುಹಿಸಿದರೆ ಪುಸ್ತಕ ಕಳುಹಿಸುವುದಾಗಿ ತೆಲಂಗಾಣದ ವಕೀಲ ಗೆಳೆಯ ಕಾರ್ತಿಕ್ ನವಯಾನ
Karthik Navayan Battula ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಪ್ರೊ.ನರಸುರವರ ಹೆಸರು ಕೇಳಿದ್ದೆ ತಡ ಹಿಂದೆ ಮುಂದೆ ನೋಡದೆ ಸ್ವತಃ ಬಾಬಾಸಾಹೇಬರೇ ಪ್ರಸ್ತಾಪಿಸಿರುವ, ಆ ಪರಿ ಪ್ರಶಂಸಿರುವ ಅವರ ಪುಸ್ತಕ ಓದಲೇಬೇಕು ಎಂದು ಪುಸ್ತಕ ತರಿಸಿಕೊಂಡೆ. Introduction ಓದಿದೆ. ಹಾಗೆ ಕೃತಿಯ ಒಂದಷ್ಟು ಪುಟ ಅಲ್ಲಲ್ಲಿ ಓದಿದೆ. ಪೂರ್ಣ ಓದಲಿದ್ದೇನೆ. ಅಷ್ಟಕ್ಕೇ ಆ ಕೃತಿ ಬೌದ್ಧ ಧರ್ಮ ಕುರಿತ ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿತ್ತು. ಯಾಕೆ ವಸಂತ್ ಮೂನ್ ಈ ಕೃತಿ ಬಗ್ಗೆ ಅಷ್ಟೊಂದು ಭಾವನಾತ್ಮಕವಾಗಿ ಪ್ರತಿಕ್ರಿತಿಸಿದರು ಎಂಬುದು ಕೂಡ ಅರ್ಥವಾಯಿತು.
ಕಾಲದ ಕಡಲಲ್ಲಿ ಮಹಾನ್ ವ್ಯಕ್ತಿಗಳು ಜನಿಸುತ್ತಾರೆ. ಅವರನ್ನು ಗುರುತಿಸಬೇಕು. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರ ಬರಹಗಳು ಕೂಡ ಹೀಗೆಯೇ ಮುಚ್ಚಿಹೋಗಿದ್ದವು. ಆದರೆ ವಸಂತ್ ಮೂನ್ ಅದನ್ನು ಸಂಪಾದಿಸಿ ಮಹಾರಾಷ್ಟ್ರ ಸರ್ಕಾರದ ಮೂಲಕ ಅವುಗಳನ್ನು ಪ್ರಕಟಿಸಿ ಬಾಬಾಸಾಹೇಬರನ್ನು ನಮ್ಮ ಕಣ್ಣ ಮುಂದೆ ಇಟ್ಟರು. ಅವರದ್ದೆ ಆಶಯ ಅಲೋಯ್ಸಿಯಸ್ ರವರ ಮೂಲಕ ಪ್ರೊ.ಲಕ್ಷ್ಮಿ ನರಸು ರವರು ಕೂಡ ನಮ್ಮ ಕಣ್ಣ ಮುಂದೆ ಬಂದಿದ್ದಾರೆ. ನೂರು ವರ್ಷಗಳ ಹಿಂದಿನ ಚಿಂತನೆ ಈಗ ಪುಸ್ತಕ ರೂಪದಲ್ಲಿ. ಗ್ರೇಟ್ ಪ್ರೊ.ಲಕ್ಷ್ಮಿ ನರಸು ಸರ್. ನಿಮ್ಮ ಜ್ಞಾನಕ್ಕೆ ಬೌದ್ಧ ಧರ್ಮವನ್ನು ವೈಚಾರಿಕ ರೂಪದಲ್ಲಿ ಕಟ್ಟಿ ಕೊಟ್ಟ ಆ ನಿಮ್ಮ ಧೀಃಶಕ್ತಿಗೆ ಶತ ಕೋಟಿ ನಮನ.