ಬುಡಕಟ್ಟು ಜನಾಂಗದರಿಗೆ ಪ್ರತ್ಯೇಕವಾಗಿ 40 ಸಾಂಪ್ರದಾಯಿಕ ಮತಗಟ್ಟೆಗಳ ಸ್ಥಾಪನೆ
ಬೆಂಗಳೂರು. ಮೇ.8: ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯದ 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅವರು ವಾಸಿಸುವ ಸ್ಥಳದಲ್ಲೇ ಪ್ರತ್ಯೇಕವಾಗಿ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಸಾಂಪ್ರದಾಯಿಕ ಮತಗಟ್ಟೆಗಳ ರಾಜ್ಯನೊಡೆಲ್ ಅಧಿಕಾರಿಯೂ ಆಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ರಾಜಕುಮಾರ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆಯು 42,48,987 ರಷ್ಟಿದ್ದು, ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿಯ, ಸಿದ್ದಿ ಇನ್ನು ಮುಂತಾದ ಆದಿವಾಸಿ ಜನಾಂಗದವರು ಇದ್ದಾರೆ. ಈ ಜನಾಂಗಗಳ ಜನ ಸಂಖ್ಯೆ ಸುಮಾರು 2 ಲಕ್ಷಕ್ಕೂ ಅಧಿಕವಾಗಿದೆ. ಈ ಸಮುದಾಯದವರು ಅರಣ್ಯವನ್ನು ಅವಲಂಬಿಸಿ ಜೀವನೋಪಾಯಕ್ಕಾಗಿ ಅರಣ್ಯದಲ್ಲಿ ದೊರಕುವ ಕಿರು ಅರಣ್ಯ ಉತ್ಪನ್ನಗಳಿಂದ ಜೀವನ ಸಾಗಿಸುತ್ತಿರುತ್ತಾರೆ. ಪ್ರಮುಖವಾಗಿ ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಹಾಸನ ಈ 9 ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ.
ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಮೂಲನಿವಾಸಿ ಜನಾಂಗದವರಿಗೆ ಮತದಾನ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರು ವಾಸಿಸುವ ಸ್ಥಳಗಳಲ್ಲೇ ಅವರಿಗೆ ಆಗಮಿಸಲು ಅನುಕೂಲವಾಗುವಂತೆ ಅಲ್ಲದೇ ಅವರ ಸಾಂಪ್ರದಾಯಕ್ಕನುಗುಣವಾಗಿರುವ ಸಾಂಪ್ರದಾಯಿಕ ಶೈಲಿಯಲ್ಲಿ ಒಟ್ಟಾರೆ 40 ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮತಗಟ್ಟೆಗಳು ಈ ಸಮುದಾಯಗಳನ್ನು ಆಕರ್ಷಿಸುವುದಲ್ಲದೇ ಅವರಿಗೆ ತಮ್ಮ ವಾತಾವರಣದಲ್ಲಿರುವಂತೆ ಮುಕ್ತವಾಗಿವಾಗಿ ನಿರ್ಭೀತಿಯಿಂದ ಮತಗಟ್ಟೆಗಳಿಗೆ ಆಗಮಿಸಲು ನೆರವಾಗುತ್ತದೆ. ಇದರಿಂದ ಮತದಾನದ ಪ್ರಮಾಣ ಹೆಚ್ಚಳವಾಗುತ್ತದೆ.
ಚಾಮರಾಜನಗರಜಿಲ್ಲೆಯಲ್ಲಿ 9 ಮತಗಟ್ಟೆ, ಉಡುಪಿ ಜಿಲ್ಲೆಯಲ್ಲಿ 1, ಕೊಡಗು ಜಿಲ್ಲೆಯಲ್ಲಿ5, ಉತ್ತರ ಕನ್ನಡ ಜಿಲ್ಲೆಯಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5, ಮೈಸೂರು ಜಿಲ್ಲೆಯಲ್ಲಿ 9, ಶಿವಮೊಗ್ಗ ಜಿಲ್ಲೆಯಲ್ಲಿ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 2, ಹಾಸನ ಜಿಲ್ಲೆಯಲ್ಲಿ 1 ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2023ನೇ ಸಾಲಿನಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಆದಿವಾಸಿಗಳಿಗೆ ಮತದಾನ ಮಾಡಲು ಇಲಾಖೆಯು ಪ್ರಾಮುಖ್ಯತೆ ನೀಡಿದ್ದು, ಈ ಸಮುದಾಯವರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಚಾಮರಾಜನಗರ, ಮೈಸೂರು, ಉಡುಪಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುವ ವಿಶೇಷ ದುರ್ಬಲ ನೈಜ ಬುಡಕಟ್ಟು ಸಮುದಾಯದವರಾದ ಜೇನುಕುರುಬ ಮತ್ತು ಕೊರಗ ಜನಾಂಗದ 1442 ಯುವಕ/ಯುವತಿಯರನ್ನು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾಗಿರುತ್ತದೆ.
ರಾಜ್ಯಾದ್ಯಂತ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಮತದಾರರ ಗುರುತಿನ ಚೀಟಿ ಪಡೆಯಲು Voter Helpline App ಮತ್ತುÛ Garuda App ಮೂಲಕ ನೋಂದಣಿ ಮಾಡಿಸಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” “Nothing like Voting, I Vote for Sure” ಎಂಬ ಚುನಾವಣಾ ಘೋಷವಾಕ್ಯವನ್ನು ಇಲಾಖೆಯ ಜಾಲತಾಣ, ಸೂಚನಾ ಫಲಕ ಮತ್ತು ಪತ್ರ ವ್ಯವಹಾರಗಳಲ್ಲಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಚುನಾವಣೆಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಕ್ರಮವಹಿಸಲಾಗಿದೆ.
ಹಾಡಿ-ಪೋಡಿಗಳಲ್ಲಿ ವಾಸಿವಾಗಿರುವ ಗಿರಿಜನ, ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಇತರೆ ಪರಿಶಿಷ್ಟ ಪಂಗಡದ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾದ ಬ್ಯಾನರ್, ಪೋಸ್ಟರ್ ಮತ್ತು ಕರಪತ್ರಗಳನ್ನು ನೀಡುವ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಸಾಂಪ್ರದಾಯಿಕ ಹಾಗೂ ಸಹಜವಾಗಿ ಮತದಾನ ಮಾಡಲು ಸೂಕ್ತ ವಾತಾವರಣವನ್ನು ಅದೇ ಪರಿಸರದಲ್ಲಿ ಸೃಜಿಸಲಾಗಿರುತ್ತದೆ.
ಆದಿವಾಸಿ ಜನರಿಗೆ ಇ.ವಿ.ಎಂ ಮತ್ತು ವಿ.ವಿ ಪ್ಯಾಟ್ ಯಂತ್ರಗಳ ಮೂಲಕ ಮತ ಚಲಾಯಿಸುವ ಬಗ್ಗೆ, ಆದಿವಾಸಿ ಜನರು ವಾಸಿಸುವ ಹಾಡಿ-ಪೋಡಿಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯವರು ತೆರಳಿ ಅಣುಕು ಮತದಾನ ಮಾಡಿಸಿ, ಮತ ಚಲಾಯಿಸುವ ಬಗ್ಗೆ ತಿಳುವಳಿಕೆ ಮೂಡಿಸಲು ಕ್ರಮವಹಿಸಲಾಗಿದೆ.
ಬುಡಕಟ್ಟು ಜನಾಂಗದವರ ಅನುಕೂಲಕ್ಕಾಗಿ ಅವರ ವಾಸಸ್ಥಾನದಿಂದ ಸಮೀಪದಲ್ಲಿಯೇ ಮತಗಟ್ಟೆಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ.
ಬುಡಕಟ್ಟು ಜನಾಂಗದವರು ಅನುಕೂಲಕ್ಕಾಗಿ ಮಾದರಿ ಮತಗಟ್ಟೆಗಳನ್ನು ತೆರೆದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬುಡಕಟ್ಟು ಜನಾಂಗದವರು ತಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿಯೇ ಮತದಾನದ ದಿನದಂದು ಮತಗಟ್ಟೆಗೆ ಹಾಜರಾಗಿ ಮತ ಚಲಾಯಿಸುವಂತೆ ಪ್ರೇರೆಪಿಸಲಾಗಿರುತ್ತದೆ.
ಬುಡಕಟ್ಟು ಜನಾಂಗದವರು ಮತದಾನ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಅಣುಕು ಮತದಾನ ಪ್ರದರ್ಶನ ಮಾಡಲಾಗಿದೆ.
ಚುನಾವಣಾ ಆಯೋಗವು ಗುರುತಿಸುವಂತಹ EPIC ಕಾರ್ಡ್‌ಗಳೊಂದಿಗೆ ಇತರೆ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ಡ್ರೈವಿಂಗ ಲೈಸನ್ಸ್, ಪಾಸ್‌ಪೋಟ್ ಮತ್ತು ಇತರೆ ದಾಖಲಾತಿಗಳ ಆಧಾರದ ಮೇಲೆ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿರುತ್ತದೆ. ಬುಡಕಟ್ಟು ಹಾಗೂ ಆದಿವಾಸಿ ಜನಾಂಗದವರಿಗೆ ಮತದಾನದ ಹಕ್ಕಿನ ಕುರಿತು ಅರಿವು ಮೂಡಿಸಲಾಗಿದೆ. ಯಾರೂ ಮತದಾನದಿಂದ ವಂಚಿತರಾಗಬಾರದೆಂಬುದು ಚುನಾವಣಾ ಆಯೋಗದ ಆಶಯವಾಗಿದ್ದು, ಈ ನಿಟ್ಟಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಆದಿವಾಸಿ ಜನಾಂಗದವರಿಗೆ ಮತದಾನದ ಅರಿವು ಮೂಡಿಸಿ ಮತ ಚಲಾಯಿಸಲು ಹಾಡಿ-ಪೋಡಿಗಳಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳನ್ನು ನಿರ್ಮಿಸಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ.
ಮತದಾನ ಮಾಡಿ…
ನಿಮ್ಮ ಮತದಾನದ ಹಕ್ಕು ಚಲಾಯಿಸಿ..
ಪ್ರಜಾಪ್ರಭುತ್ವ ಉಳಿಸಿ..
ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ
ಆಯೋಗ ಬದ್ದ..
ಮತದಾನಕ್ಕಿಂತ ಇನ್ನೊಂದಿಲ್ಲ,
ನಾನು ಖಚಿತವಾಗಿ ಮತದಾನ ಮಾಡುವೆ
Nothing Like Voting,
I Vote For Sure
ಎನ್ನುವ ಚುನಾವಣಾ ಆಯೋಗದ ಘೋಷಾ ವಾಕ್ಯದಂತೆ ಬುಡಕಟ್ಟು ಜನಾಂಗದವರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಪ್ರದಾಯಿಕ ಮತಗಟ್ಟೆಗಳ ವಿವರ
ಚುನಾವಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿ ಆಶ್ರಮ ಶಾಲೆ, ಗಿರಿಜನ ಆಶ್ರಮ ಶಾಲೆ ಪೆಂಜಹಳ್ಳಿ, ಸರ್ಕಾರಿ ಗಿರಿಜನ ಆಶ್ರಮ ಶಾಲೆ ಭೀಮನಹಳ್ಳಿ. ಹುಣಸೂರು ತಾಲ್ಲೂಕಿನ ನಾಗಪುರ ಆಶ್ರಮ ಶಾಲೆ, ಶೆಟ್ಟಿಹಳ್ಳಿ ಆಶ್ರಮ ಶಾಲೆ, ಗಿರಿಜನ ಆಶ್ರಮ ಶಾಲೆ ಉಮ್ಮತ್ತೂರು, ನಲ್ಲೂರು ಪಾಲ.ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಕಾಲೋನಿ ಆಶ್ರಮ ಶಾಲೆ, ಅಬಲತ್ತಿ ಆಶ್ರಮ ಶಾಲೆ, ಸರ್ಕಾರಿ ಗಿರಿಜನ ಆಶ್ರಮ ಶಾಲೆ ರಾಣಿ ಗೇಟ್ ನಲ್ಲಿ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಸಾಂಪ್ರದಾಯಿಕ ಮತಗಟ್ಟೆಗಳ ರಾಜ್ಯನೊಡೆಲ್ ಅಧಿಕಾರಿಯೂ ಆಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ರಾಜಕುಮಾರ್ ಅವರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಆಶ್ರಮ ಶಾಲೆ ಕೆ.ಗುಡಿ, ಆಶ್ರಮ ಶಾಲೆ ಪುಂಜನೂರು, ಆಶ್ರಮ ಶಾಲೆ ಬೆಡಗುಳಿ. ಕೊಳ್ಳೇಗಾಲ ತಾಲ್ಲೂಕಿನ ಆಶ್ರಮ ಶಾಲೆ, ಪುರಾಣಿ ಪೊಡು. ಗುಂಡ್ಲಪೇಟೆ ತಾಲ್ಲೂಕಿನ ಆಶ್ರಮ ಶಾಲೆ, ಮದ್ದೂರು. ಹನೂರು ತಾಲ್ಲೂಕಿನ ಆಶ್ರಮ ಶಾಲೆ ಕೋಣನ ಕೆರೆ, ಆಶ್ರಮ ಶಾಲೆ ರಾಚಪ್ಪಜಿನಗರ, ಆಶ್ರಮ ಶಾಲೆ ಗಾಣಿಗ ಮಂಗಳ, ಆಶ್ರಮ ಶಾಲೆ ಅರ್ಥನಾರಿಪುರ. ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲಾಂಬಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆರೂರು , ವಿರಾಜಪೇಟೆ ತಾಲ್ಲೂಕಿನ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಸಿ.ಬಿ.ಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ನಾಗರಹೊಳೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ಬಾಲೆ ಪಟ್ಟಣದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೌಧ, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆ, ಹಕ್ಕಿ-ಪಿಕ್ಕಿ ಕಾಲೋನಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಹಕ್ಕಿ-ಪಿಕ್ಕಿ ಕಾಲೋನಿ, ಸಾಗರ ತಾಲ್ಲೂಕಿನ ಅರ್ಕಲಾ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಉತ್ತರ ತಾಲ್ಲೂಕಿನ ಕೇಂದ್ರಿಯ ಮಾದರಿ ವಸತಿ ಶಾಲೆ ಸುರತ್ಕಲ್. ಪುತ್ತೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಜರುಪದೆ, ಬಲ್ನಾಡು, ಬೆಳ್ತಂಗಡಿ ತಾಲ್ಲೂಕಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ(ಉತ್ತರ ಭಾಗ). ಸುಳ್ಯ ತಾಲ್ಲೂಕಿನ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಿದ್ದಡ್ಕ. ಬಂಟ್ವಾಳ ತಾಲ್ಲೂಕಿನ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕನ್ಯನ ದಕ್ಷಿಣ ಭಾಗದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆ, ಮಲ್ಲೇನಹಳ್ಳಿ, ಶೃಂಗೇರಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಣಸಿನಹಾಡ್ಯ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಜೋಯ್ಡಾ ತಾಲ್ಲೂಕಿನ ಹಿರಿಯ ಪ್ರಾಥಮಿಕ ಶಾಲೆ, ಗರುಡಹಳ್ಳಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಂಬ್ರಾಣಿ. ಯಲ್ಲಾಪುರ-ಮುಂಡಗೋಡ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ, ಉಮಾಚಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಳಕಿ ಯಲ್ಲಾಪುರ. ಬಟ್ಕಳ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿತ್ರೆ. ಹಾಗೂ ಹಾಸನ ಜಿಲ್ಲೆ ಬೆಲ್ಲೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗಡಿಹಳ್ಳಿ( ಉತ್ತರ)ದಲ್ಲಿ ಮತಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw